ಪುತ್ತೂರು: ಇದು ವಿಶ್ವಾಸದ ಧ್ವನಿ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ನ್ಯೂಸ್ ಅಕ್ಕರೆ ಮಾಧ್ಯಮ ಸಂಸ್ಥೆಯ ವರುಷದ ಹರುಷ, ಪ್ರತಿಭಾ ಪುರಸ್ಕಾರ, ಸನ್ಮಾನ, ಪ್ರಸಿದ್ಧ ಕಲಾವಿದರಿಂದ ಡ್ಯಾನ್ಸ್ ಧಮಾಕ, ರಸಮಂಜರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸೆ.9ರಂದು ಸೇಡಿಯಾಪು ಕ್ರೀಡಾಂಗಣದಲ್ಲಿ ನಡೆಯಿತು.
ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ೩ ದಿನ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆದ 41ನೇ ವರ್ಷದ ಗಣೇಶೋತ್ಸವದ ಶೋಭಾಯಾತ್ರೆ ಪ್ರಯುಕ್ತ ನ್ಯೂಸ್ ಅಕ್ಕರೆ ಸಂಸ್ಥೆಯ ಮುಖ್ಯಸ್ಥರಾದ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರತಿಭಾ ಪುರಸ್ಕಾರ ನೆರವೇರಿಸಿ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಝೀ ಟಿ.ವಿ.ಕನ್ನಡ ವಾಹಿನಿಯ ಮಹಾನಟಿ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ಮತ್ತು ಮೋಡೆಲ್ ನಟ ಸಚಿನ್ ಜೈಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಪ್ರದ್ವಿನ್ ಜೆ.ಬಿ. ಮತ್ತು ಚಮನ್ ಬಿ.ಸಿ. ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶೀನಪ್ಪ ಪೂಜಾರಿ ಬದಿನಾರು ಮತ್ತು ಡಾ. ರಾಜಾರಾಮ ಕೆ.ಬಿ. ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಸದಸ್ಯೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು ಮತ್ತು ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಮಡಿವಾಳ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ದೀಪಕ್ ಉಪ್ಪಿನಂಗಡಿ ಮತ್ತು ದಯಾನಂದ ಬಿ.ಸಿ. ಚಾರ್ವಾಕ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿ ಕೋಡಿಂಬಾಡಿ ನೇತೃತ್ವದ ರಾಜ್ ಡ್ಯಾನ್ಸ್‌ರವರ ನೃತ್ಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು ನೇತೃತ್ವದ ಪುತ್ತೂರು ವಿವೇಕಾನಂದ ಇಂಜಿನಿಯರ್ ಕಾಲೇಜ್ ವಿದ್ಯಾರ್ಥಿಗಳ ಭರತನಾಟ್ಯ ಕಾರ್ಯಕ್ರಮ ಗಮನ ಸೆಳೆಯಿತು. ಸಾಧಕರಾದ ಇಬ್ರಾಹಿಂ ಸೇಡಿಯಾಪು, ಮೋನಪ್ಪ ಕುಲಾಲ್ ಮತ್ತು ಕೃಷ್ಣ ಪ್ರಭು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರಲತಾ ಆನಡ್ಕ ಸೇಡಿಯಾಪು, ಮನಸ್ವಿ ವೈ. ಸೇಡಿಯಾಪು ಮತ್ತು ಮನ್ವಿತಾ ವೈ. ಸೇಡಿಯಾಪು ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನ್ಯೂಸ್ ಅಕ್ಕರೆ ಬಳಗದ ವಿನುತಾ ಜಯಪ್ರಕಾಶ್ ಬದಿನಾರು, ಚಂದ್ರಶೇಖರ ನೈತಾಡಿ, ಸಲೀಂ ಶಾಂತಿನಗರ, ಆಕಾಶ್, ಸಂತೋಷ್ ಮತ್ತು ಧನುಷ್ ಸಹಕರಿಸಿದರು.