ಸೆ.30ರೊಳಗೆ ಬೇಡಿಕೆ ಈಡೇರಿಸದಿದ್ದರೆ ಅ.4ರಿಂದ ಸೇವೆ ಸ್ಥಗಿತಗೊಳಿಸಿ ಹೋರಾಟ-ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ

0

ಬೆಂಗಳೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಸೆ.30ರೊಳಗೆ ಈಡೇರಿಸದಿದ್ದರೆ ಅಕ್ಟೋಬರ್ 4ರಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಯ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಹಾಗೂ ಸಂಬಂಧಪಟ್ಟ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.


ಈಗಾಗಲೇ, ಹಲವು ಬಾರಿ ಸರ್ಕಾರಕ್ಕೆ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದ್ದೇವೆ.ಈವರೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಇವತ್ತಿನ ಒಕ್ಕೂಟದ ಸಭೆಯ ಮೂಲಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡುತ್ತಿದ್ದೇವೆ.ಬೇಡಿಕೆಗೆ ಸ್ಪಂದಿಸದಿದ್ದರೆ, ಅನಿರ್ದಿಷ್ಟಾವಧಿ ಹೋರಾಟ ನಡಸುತ್ತೇವೆ ಎಂದು ಸಂಘಟನೆ ಮುಖಂಡರು ತಿಳಿಸಿದರು.


ಪಿಡಿಒ ಹುದ್ದೆ ಮೆಲ್ದರ್ಜೆಗೇರಿಸುವುದು ಸೇರಿದಂತೆ 15 ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಿದ್ದೆವು. ಬೇಡಿಕೆಗೆ ಸ್ಪಂದನೆ ದೊರೆತಿಲ್ಲ ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ದೂರಿದರು.


ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿ ಕಾನೂನು ರೂಪಿಸಿದ ಪಕ್ಷವೇ, ಆ ಕಾನೂನುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದರ ವಿರುದ್ಧವಾಗಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಲ್ಲ ಸಂಘಟನೆಗಳೂ ಸೇರಿ ಹೋರಾಟ ನಡೆಸುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕರವಸೂಲಿಗಾರರ ಸಂಘದ ಅಧ್ಯಕ್ಷ ಎಚ್. ಲಿಂಗೇಶ್ ಹಾಗೂ ಹನ್ನೊಂದು ಸಂಘಟನೆಗಳ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here