ಕೆಯ್ಯೂರು ಗ್ರಾ.ಪಂ.ನಿಂದ ನೀರಿನ ಬಿಲ್ ಪಾವತಿಸದವರ ವಿರುದ್ಧ ಕಾರ್ಯಾಚರಣೆ..! – ರೂ.10 ಸಾವಿರಕ್ಕಿಂತ ಹೆಚ್ಚು ನೀರಿನ ಶುಲ್ಕ ಬಾಕಿ ಇರುವ ಹಲವು ಸಂಪರ್ಕ ಕಡಿತ

0

ಪುತ್ತೂರು: ಗ್ರಾಮ ಪಂಚಾಯತ್‌ಗೆ ಸಲ್ಲತ್ತಕ್ಕ ಕುಡಿಯುವ ನೀರಿನ ಶುಲ್ಕ ಬಾಕಿ ಇರುವ ಹಲವು ಫಲಾನುಭವಿಗಳ ನೀರಿನ ಸಂಪರ್ಕ ಕಡಿತಗೊಳಿಸುವ ಮೂಲಕ ನೀರಿನ ಬಿಲ್ ಬಾಕಿ ಇರುವವರ ವಿರುದ್ಧ ಕೆಯ್ಯೂರು ಗ್ರಾಮ ಪಂಚಾಯತ್ ಕಾರ್ಯಾಚರಣೆ ನಡೆಸಿತು. ರೂ.10 ಸಾವಿರಕ್ಕಿಂತ ಹೆಚ್ಚು ಬಿಲ್ ಹಣ ಬಾಕಿ ಇರುವ ಫಲಾನುಭವಿಗಳ ನೀರಿನ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆ ಸೆ.19ರಂದು ನಡೆಯಿತು. ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಅಭಿವೃದ್ದಿ ಅಧಿಕಾರಿ ನಮಿತಾ ಎ.ಕೆ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗ್ರಾಪಂನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈಗಾಗಲೇ ನೀರಿನ ಬಿಲ್ ರೂ.10 ಸಾವಿರಕ್ಕಿಂತ ಹೆಚ್ಚು ಹಣ ಯಾರು ಬಾಕಿ ಇರಿಸಿಕೊಂಡಿದ್ದಾರೋ ಅಂತವರಿಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನು ಕಡಿತ ಮಾಡುವುದು ಎಂದು ಸರ್ವ ಸದಸ್ಯರ ಒಮ್ಮತದೊಂದಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯದಂತೆ ಗ್ರಾಪಂ ಕಾರ್ಯಾಚರಣೆ ನಡೆಸಿದೆ.


50 ಕ್ಕಿಂತಲೂ ಅಧಿಕ ಫಲಾನುಭವಿಗಳ ಬಿಲ್ ಬಾಕಿ
ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿರುವ ಫಲಾನುಭವಿಗಳಲ್ಲಿ ಈಗಾಗಲೇ ಸುಮಾರು 50 ಕ್ಕಿಂತಲೂ ಅಧಿಕ ಮಂದಿ ರೂ.10 ಸಾವಿರಕ್ಕಿಂತ ಹೆಚ್ಚು ಬಿಲ್ ಹಣ ಬಾಕಿ ಇರಿಸಿಕೊಂಡಿದ್ದಾರೆ. ಬಿಲ್ ಹಣ ಬಾಕಿ ಇರಿಸಿಕೊಂಡಿರುವ ಫಲಾನುಭಗಳಿಗೆ ನೀರಿನ ಶುಲ್ಕ ಪಾವತಿಸುವಂತೆ ಈಗಾಗಲೇ 3 ಸಲ ನೋಟೀಸ್ ನೀಡಲಾಗಿತ್ತು. ಆದರೆ ನೋಟೀಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಗ್ರಾಪಂ ಈ ಕ್ರಮ ಕೈಗೊಂಡಿದೆ ಎಂದು ಅಧ್ಯಕ್ಷ ಶರತ್ ಕುಮಾರ್ ಮಾಡಾವು ತಿಳಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಜಯಂತ ಪೂಜಾರಿ ಕೆಂಗುಡೇಲು, ತಾರಾನಾಥ ಕಂಪ, ಬಟ್ಯಪ್ಪ ರೈ ದೇರ್ಲ, ವಿಜಯ ಕುಮಾರ್ ಸಣಂಗಳ, ಶೇಷಪ್ಪ ದೇರ್ಲ, ನೆಬಿಸಾ, ಜಯಂತಿ ಎಸ್.ಭಂಡಾರಿ ಹಾಗೂ ಗ್ರಾಪಂ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸ್ವಚ್ಛ ವಾಹಿನಿ ತಂಡದವರು, ಪಂಪು ಚಾಲಕರು ಉಪಸ್ಥಿತರಿದ್ದರು.


‘ ವಿದ್ಯುತ್ ಬಿಲ್, ಪಂಪು ದುರಸ್ತಿ, ಪೈಪು ಲೈನ್ ದುರಸ್ತಿ ಸೇರಿದಂತೆ ಕುಡಿಯುವ ನೀರಿಗಾಗಿ ಸಾವಿರಾರು ರೂಪಾಯಿ ಖರ್ಚು ಆಗುತ್ತಿದೆ. ಫಲಾನುಭವಿಗಳು ತಿಂಗಳ ಶುಲ್ಕ 100 ರೂಪಾಯಿಯನ್ನು ಕೂಡ ಪಾವತಿ ಮಾಡುವುದಿಲ್ಲ. ನೀರಿನ ಶುಲ್ಕ ಬಹಳಷ್ಟು ಬಾಕಿ ಇರುವುದರಿಂದ ಈ ಕಠಿಣ ಕ್ರಮ ಕೈಗೊಂಡಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಬಹಳ ಅಗತ್ಯ.’
-ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾ.ಪಂ

LEAVE A REPLY

Please enter your comment!
Please enter your name here