*ಮೀನುಗಾರಿಕೆಗೆ ಮೌಲ್ಯವರ್ಧನೆ ಪ್ರಾರಂಭ-ರಾಜು
*ತರಬೇತಿ ಮೂಲಕ ವೈಜ್ಞಾನಿಕ ಮಾಹಿತಿ-ಗಣೇಶ್
*ಗುಣಮಟ್ಟದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ-ಡಾ.ಯು.ಪಿ.ಶಿವಾನಂದ
*ಪ್ರಾಣಿ,ಸಸ್ಯ ಜನ್ಯದಂತೆ ಮೀನುಜನ್ಯಕ್ಕೂ ಮಹತ್ವ-ಡಾ|ಎಸ್.ಆರ್.ಸೋಮಶೇಖರ್
ಮಂಗಳೂರು:ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗ ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಹಾಗೂ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಹೈದರಾಬಾದ್ ಇವರ ಸಹಯೋಗದೊಂದಿಗೆ ‘ಮೀನು ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳು’ ಎಂಬ ವಿಷಯದಲ್ಲಿ ಮೂರು ದಿನಗಳ ತರಬೇತಿ ಕಾರ್ಯಗಾರ ಸೆ.18ರಂದು ಮಂಗಳೂರು ಎಕ್ಕೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ರಾಜುರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದ ಅಭಿವೃದ್ದಿಯು ಉತ್ಪಾದನೆ ಹಾಗೂ ಉತ್ಪಾದನೆಗಳಿಗೆ ಸಂಬಂಽಸಿದ ಪ್ರಕ್ರಿಯೆಯಾಗಿದೆ.ಯಾವ ವಸ್ತುವಿನ ಮೂಲತಃ ಉತ್ಪಾದನೆ ಮೌಲ್ಯವರ್ಧನೆ ಹೆಚ್ಚಾಗುವುದಿಲ್ಲವೋ ಅಲ್ಲಿಯವರೆಗೆ ಆರ್ಥಿಕ ಸಬಲತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.ಒಂದು ದೇಶದ ಆರ್ಥಿಕ ವೃದ್ಧಿಯು ಸುಲಲಿತ ಹಾಗೂ ಸುಸಜ್ಜಿತವಾಗಿರಬೇಕಾದರೆ ಮೌಲ್ಯವರ್ಧನೆ ಬಹು ಮುಖ್ಯವಾಗಿದೆ ಎಂದರು.
ಬೆಳೆಗಾರರು ತಾವು ಬೆಳೆದ ಟೊಮೆಟೊ,ನೀರುಳ್ಳಿ ಉತ್ಪನ್ನಗಳಿಗೆ ಬೇಡಿಕೆ ಹಾಗೂ ಸೂಕ್ತ ಬೆಲೆ ಸಿಗದೆ ಹೋದಾಗ ಅವುಗಳನ್ನು ರಸ್ತೆಗೆಸೆದು ಪ್ರತಿಭಟಿಸುತ್ತಿರುವುದನ್ನು ನಾವು ಕಾಣುತ್ತೇವೆ. ಉತ್ಪಾದನೆಗೆ ಸಂರಕ್ಷಣೆ ಹಾಗೂ ಸೂಕ್ತ ಮಾರುಕಟ್ಟೆ ದೊರೆತಾಗ ಮಾತ್ರ ಉತ್ಪಾದಕನಿಗೆ ನಿಜವಾದ ನ್ಯಾಯ ಸಿಗುತ್ತದೆ ಎಂದ ಅವರು, ಹಿಂದೆ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಘಟ್ಟ ಪ್ರದೇಶಗಳಲ್ಲಿ ಮೀನು ಸಿಗುತ್ತಿರಲಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಯೂ ಮೀನು ಉತ್ಪನ್ನ ಹಾಗೂ ಮೀನುಗಾರಿಕೆಗೆ ವಿಪುಲ ಅವಕಾಶ ದೊರೆಯುತ್ತದೆ.ಮೀನುಗಾರಿಕೆಗೆ ಮೌಲ್ಯವರ್ಧನೆ ಪ್ರಾರಂಭವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಯಫ್ ಡಿಸಿ ಆಡಳಿತ ನಿರ್ದೇಶಕ ಗಣೇಶ್ ಕೆ.ಮಾತನಾಡಿ,ಇಂದಿನ ಪರಿಸ್ಥಿತಿಗೆ ತಕ್ಕಂತೆ ಸಾಮಾಜಿಕ ವ್ಯವಸ್ಥೆ ಬದಲಾದಂತೆ ನಾವೂ ಬದಲಾಗಬೇಕಾದ ಅನಿವಾರ್ಯತೆ ಇದೆ.ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮದ ಮೂಲಕ ವೈಜ್ಞಾನಿಕ ಮಾಹಿತಿ ಪಡೆದುಕೊಳ್ಳುವ ಅಗತ್ಯವಿದೆ.ತರಬೇತಿಯಲ್ಲಿ ಭಾಗವಹಿಸಿದವರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.ಬೇಡಿಕೆಗೆ ತಕ್ಕಂತೆ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆಯನ್ನು ವಿವಿಧ ಮಾದರಿಗಳಲ್ಲಿ ಗ್ರಾಹಕರಿಗೆ ನೀಡಬೇಕು. ಅಗ ಆರ್ಥಿಕತೆ ಅಭಿವೃದ್ದಿ ಗೊಳ್ಳುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ ಸರಕಾರದ ಯೋಜನೆಗಳು ಉತ್ತಮವಾಗಿದ್ದರೂ ಅದು ಜನಸಾಮಾನ್ಯರಿಗೆ ತಲುಪುವುದಿಲ್ಲ.ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಅದು ಜನರಿಗೆ ತಲುಪುತ್ತದೆ.ಆದರೆ ಮೀನುಗಾರಿಕಾ ಇಲಾಖೆಯವರು ಬಹಳ ಪ್ರಾಮಾಣಿಕ ವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದನ್ನು ನಾನು ಪ್ರತ್ಯಕ್ಷವಾಗಿ ಮನಗಂಡಿದ್ದೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದೇಶೀಯ ಉತ್ಪನ್ನಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದರೂ ನಾವು ವಿದೇಶಿ ಬ್ರಾಂಡ್‌ಗಳಿಗೆ ಮಾರು ಹೋಗುತ್ತೇವೆ.ಬ್ರಾಂಡ್ ಕಲ್ಚರ್‌ಗೆ ನಾವು ಆಕರ್ಷಿತರಾಗಿದ್ದೇವೆ.ಸ್ವದೇಶಿ(ಲೋಕಲ್) ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅದಕ್ಕೆ ವಿದೇಶಿ ಬ್ರಾಂಡ್ ನೀಡಿ ನಮ್ಮವರೇ ದುಪ್ಪಟ್ಟು ಬೆಲೆಗೆ ಕೊಂಡುಕೊಳ್ಳುವಂತಹ ಪರಿಸ್ಥಿತಿ ಕಂಡು ಬರುತ್ತಿದೆ.ಇದಕ್ಕೆ ಮುಖ್ಯ ಕಾರಣವೇ ಮಾರುಕಟ್ಟೆಯ ಕೊರತೆ.ರೈತರ ಬೆಳೆಗಳಿಗೆ ಹಾಗೂ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕುವಂತಾಗಬೇಕು.ಹಾಗೂ ಉತ್ಪಾದಕರಿಗೆ ನೇರವಾಗಿ ಕೈಗೆ ಸಿಗುವಂತಾಗಬೇಕು.ಉತ್ಪನ್ನಗಳ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇದೆ.ಲೋಕಲ್ ವೋಕಲ್ ಆಗಬೇಕು.ಸ್ಥಳೀಯರೇ ಬೆಳೆಯಬೇಕು.ಜಾಗತಿಕ ಮಾರುಕಟ್ಟೆಯನ್ನು ಮುಟ್ಟಬೇಕಾದರೆ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಬಹುಮುಖ್ಯ ಎಂದು ಹೇಳಿದ ಡಾ.ಯು.ಪಿ.ಶಿವಾನಂದ ಅವರು,ಸುದ್ದಿ ಮಾಹಿತಿ ಟ್ರಸ್ಟಿನ ಮೂಲಕ ಕೃಷಿ, ಗುಡಿ ಕೈಗಾರಿಕೆಗಳು, ಜೇನು ವ್ಯವಸಾಯ, ಹೈನುಗಾರಿಕೆ, ಮಳೆ ನೀರು ಕೊಯ್ಲು,ಕೃಷಿ ಮೇಳ ಇತ್ಯಾದಿ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇವೆ.ಜತೆಗೆ ಪುತ್ತೂರು, ಸುಳ್ಯ, ಬೆಳ್ತಂಗಡಿ,ಕಡಬ ತಾಲೂಕುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಸರಣಗೊಳ್ಳುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆ ಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಚಾರ ನೀಡುತ್ತಾ ಬಂದಿದ್ದೇವೆ ಎಂದರಲ್ಲದೆ,ತರಬೇತಿಯಲ್ಲಿ ಭಾಗವಹಿಸಿದವರು ಒಳ್ಳೆಯ ಮಾಹಿತಿಯನ್ನು ಪಡೆಯುವ ಮೂಲಕ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಇದು ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಮಂಗಳೂರು ಮೀನುಗಾರಿಕಾ ಮಹಾ ವಿದ್ಯಾಲಯದ ಸಹ ವಿಸ್ತಾರಣಾ ನಿರ್ದೇಶಕರಾದ ಡಾ.ಯಸ್.ಅರ್.ಸೋಮಶೇಖರ್ ಆಹಾರವಾಗಿ ಮೀನಿನ ಮಹತ್ವ ಹಾಗೂ ಪ್ರಾಣಿ ಜನ್ಯ, ಸಸ್ಯ ಜನ್ಯ ದಂತೆ ಮೀನು ಜನ್ಯಕ್ಕೆ ಮಹತ್ವವಿದ್ದು ಆಹಾರವಾಗಿ ಮೀನು ಮತ್ತು ಮೀನಿನ ವಿವಿಧ ಖಾದ್ಯಗಳ ಮಹತ್ವ ಮತ್ತು ಜನಸಂಖ್ಯೆ ಏರಿದಂತೆ ಆಹಾರವಾಗಿ ಮೀನಿನ ಬೇಡಿಕೆಯ ಕುರಿತು ಮಾತನಾಡಿದರು.
ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಮೀನುಗಾರಿಕಾ ನಿಗಮ ಮಂಗಳೂರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹಾಗೂ ಕಾರ್ಯಾಗಾರದ ಆಯೋಜಕರಾದ ಸತೀಶ್ ಮೊಬೆನ್‌ರವರು ತರಬೇತಿ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ|ಹೆಚ್.ಎನ್.ಅಂಜನೇಯಪ್ಪ ಅಧ್ಯಕ್ಷತೆ ವಹಿಸಿ ಮೀನಿನ ವೈಜ್ಞಾನಿಕ ಸಂರಕ್ಷಣೆ, ಪೌಷ್ಟಿಕಾಂಶಗಳ ಬಗ್ಗೆ ಮಾತನಾಡಿದರು.ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಮೀನುಗಾರರ ಮೂಲಕ ಮೌಲ್ಯ ವರ್ಧಿತ ಮೀನುಗಾರಿಕೆಯು ಆರ್ಥಿಕವಾಗಿ ಸದೃಢವಾಗಿ ದೇಶದ ಆರ್ಥಿಕತೆಯು ಸದೃಢವಾಗಲು ಸಹಕಾರಿಯಾಗಿದೆ ಎಂದರು.
ಮಂಗಳೂರು ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ|ಬಿ.ಮಂಜ ನಾಯ್ಕ್ ಸ್ವಾಗತಿಸಿ,ಪ್ರಸ್ತಾವಿಸಿ ಸಹಾಯಕ ಪ್ರಾಧ್ಯಾಪಕಿ ಡಾ|ಅಮಿತ ವಂದಿಸಿದರು.ಗ್ಲೋಬಲ್ ಟ್ರೈನಿಂಗ್ ಸೆಂಟರ್‌ನ ಆಶಿಷ್ ಸಹಿತ ಹಲವರು ಉಪಸ್ಥಿತರಿದ್ದರು.