ಕರ್ನೂರುಗುತ್ತು ನರಸಿಂಹ ಪಕ್ಕಳರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ, ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಕರ್ನೂರುಗುತ್ತು ನರಸಿಂಹ ಪಕ್ಕಳರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಸೆ.19ರಂದು ನಡೆಯಿತು.


ಮುಂಬೈ ಉದ್ಯಮಿ ಮೇನಾಲ ಕಿಶನ್ ಜೆ. ಶೆಟ್ಟಿ ನುಡಿನಮನ ಸಲ್ಲಿಸಿ ಕನೂರು ಗುತ್ತುವಿನ ಹಿರಿಯ ಸದಸ್ಯರಾಗಿ ಸ್ಪೂರ್ತಿಯಾಗಿ ವ್ಯಕ್ತಿಯಾಗಿದ್ದರು. ಸಾಮಾಜಿಕವಾಗಿ ಕರ್ನೂರಿನ ದೀನದುರ್ಬಲರಿಗೆ ಬೆಲ್ಲ ಸಕ್ಕರೆಯನ್ನು ಹಂಚಿದವರು. ದೀನದುರ್ಬಲರಿಗೆ ಜಾಗವನ್ನು ನೀಡಿದ ಸಹೃದಯ ವ್ಯಕ್ತಿಯಾಗಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೆ ನರಸಿಂಹ ಪಕ್ಕಳರವರ ಕೊಡುಗೆ ಅಪಾರವಿದೆ. ಈಶ್ವರಮಂಗಲಕ್ಕೆ ಶ್ರೀಪಂಚಲಿಂಗೇಶ್ವರ ಶಿಕ್ಷಣ ಸಂಸ್ಥೆಯನ್ನು ನೀಡಿದವರು. ಮೇನಾಲದ ಹಾಗೂ ಕರ್ನೂರಿನ ಮನೆಗಳನ್ನು ಒಂದೇ ಮನೆಯೆಂದು ತಿಳಿದವರು. ದೇವಾಲಯದ ಮೊಕ್ತೇಸರರಾಗಿ ಕೆಲಸ ಮಾಡಿದರು. ದೇವಸ್ಥಾನ, ದೈವಸ್ಥಾನಕ್ಕೆ ಯಾವುದೇ ಚ್ಯುತಿ ಬಾರದ ಹಾಗೆ ಕರ್ತವ್ಯ ನಿರ್ವಹಿಸಿದವರು. ಅವರ ಆಶಿರ್ವಾದ ನಮಗೆಲ್ಲರಿಗೂ ಇರಲಿ ಎಂದು ಹೇಳಿದರು.


ಮುಂಡಾಳಗುತ್ತು ಮೋಹನ ಆಳ್ವ ಕಾರ್ಯಕ್ರಮ ನಿರೂಪಿಸಿ ನರಸಿಂಹ ಪಕ್ಕಳರವರ ತಂದೆ ಲಕ್ಷ್ಮೀ ನರಸಿಂಹ ದೇವರ ಭಕ್ತರಾಗಿದ್ದರು. ಹಾಗಾಗಿ ನರಸಿಂಹ ಎಂದು ಹೆಸರಿಟ್ಟಿದ್ದರು. ಕರ್ನೂರು ಗುತ್ತುನಲ್ಲಿ ಆದರ್ಶವಾದ ಸಂಸಾರ ನಡೆಸಿಕೊಂಡು ಬಂದಿದ್ದರು. ದೇವಾಲಯದ ಪ್ರಥಮ ಬ್ರಹ್ಮಕಲಶ ಮಾಡಿದ ಹೆಗ್ಗಳಿಕೆ ನರಸಿಂಹ ಪಕ್ಕಳರವರಿಗಿದೆ. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡಿದವರು. ಆಗಿನ ಹಿರಿಯ ಕಾಂಗ್ರಸ್ ಮುಂಡರ ಸಹಕಾರದೊಂದಿಗೆ ಈಶ್ವರಮಂಗಲದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದ್ದರು. 90 ವರ್ಷ ಬದುಕಿದ ನರಸಿಂಹ ಪಕ್ಕಳರವರು ಆದರ್ಶಪ್ರಾಯರಾಗಿ, ಪಕ್ಷನಿಷ್ಠವಾಗಿ ಬದುಕಿದ್ದರು. ನರಸಿಂಹ ಪಕ್ಕಳರ ಆದರ್ಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸೋಣ ಎಂದು ಹೇಳಿದರು.
ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಸವಣೂರು ಸೀತಾರಾಮ ರೈ, ಅರಿಯಡ್ಕ ಚಿಕ್ಕಪ್ಪ ನಾೖಕ್‌, ನಾರಾಯಣ ನಾೖಕ್‌, ಕಡಮಜಲು ಸುಭಾಷ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಹಾಗೂ ಕರ್ನೂರು ಗುತ್ತು, ಕೋಟ್ರಗುತ್ತು, ಅರಿಯಡ್ಕ ಕುಟುಂಬಸ್ಥರು ಭಾಗವಹಿಸಿದ್ದರು. ಮೃತರ ಪುತ್ರಿ ಐಶ್ವರ್ಯ, ಅಳಿಯ ಉದಯ ಶೆಟ್ಟಿ, ಪುತ್ರ ಶ್ರೀರಾಮ ಪಕ್ಕಳ, ಸೊಸೆ ವೈಶಾಲಿ ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here