-‘ನಾನು’ ಎಂಬ ಕನಸು ‘ನಾವು’ ಎಂದಾದಾಗ ಕಾರ್ಯವು ಯಶಸ್ವಿ-ಶಶಿಧರ್ ಜಿ.ಎಸ್
-ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದಾಗ ಮೌಲ್ಯದ ಬಗ್ಗೆ ಅರಿವಾಗುತ್ತದೆ-ಲೋಕೇಶ್ ಸಿ
-ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಮಾಜ ಸುಧಾರಣೆ-ಲೋಕೇಶ್ ಎಸ್.ಆರ್
ಪುತ್ತೂರು: ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವು ಸೆ.19 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.
‘ನಾನು’ ಎಂಬ ಕನಸು ‘ನಾವು’ ಎಂದಾದಾಗ ಕಾರ್ಯವು ಯಶಸ್ವಿ-ಶಶಿಧರ್ ಜಿ.ಎಸ್:
ಮಂಗಳೂರು ಡಯಟ್ ಹಿರಿಯ ಉಪನ್ಯಾಸಕ ಹಾಗೂ ಮಿಶನ್ 95, ಗೊಬ್ಬುದ ಪುತ್ತೂರ್ದ ಮುತ್ತುಲು ಖ್ಯಾತಿಯ ಶಶಿಧರ್ ಜಿ.ಎಸ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹತ್ತೂರು ಬಿಟ್ಟರೂ ಪುತ್ತೂರು ಬಿಡೆನು ಎಂಬಂತೆ ತನ್ನ ವೃತ್ತಿ ಜೀವನದಲ್ಲಿ ಪುತ್ತೂರನ್ನು ಮರೆಯುವಂತಿಲ್ಲ. ಮಿಶನ್ 95 ಕನಸಿಗೆ ರೋಟರಿ, ಜೇಸಿಐ, ಮುಳಿಯ ಸಂಸ್ಥೆ ಹೆಗಲು ನೀಡಿತ್ತು. ಅಂದು ಶೈಕ್ಷಣಿಕವಾಗಿ ಪುತ್ತೂರು ಗೆದ್ದಿದೆ ಎಂದರೆ ಅದು ಕೇವಲ ಅಧಿಕಾರಿಗಳಿಂದಲ್ಲ ಬದಲಾಗಿ ಎಲ್ಲಾ ಶಿಕ್ಷಕರ, ಸಾರ್ವಜನಿಕರ ಸಹಕಾರದಿಂದಾಗಿದೆ. ಸಣ್ಣ ಸಣ್ಣ ಕನಸು, ಯೋಜನೆಗಳು ಇಡೀ ವರ್ತಮಾನವನ್ನೇ ಬದಲಾಯಿಸುತ್ತದೆ. ಜೊತೆಗೆ ‘ನಾನು’ ಎಂಬ ಕನಸು ‘ನಾವು’ ಎಂದಾದಾಗ ಕಾರ್ಯವು ಯಶಸ್ವಿಯಾಗುತ್ತದೆ ಎಂದರು.
ಜಿಲ್ಲೆಯ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದಾಗ ಮೌಲ್ಯದ ಬಗ್ಗೆ ಅರಿವಾಗುತ್ತದೆ-ಲೋಕೇಶ್ ಸಿ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಸಿ ಮಾತನಾಡಿ, ಶಿಕ್ಷಕರ ಕ್ಷೇತ್ರಕ್ಕೆ ರೋಟರಿ ಸಂಸ್ಥೆ ಮಹತ್ವದ ಕಾರ್ಯ ನೀಡಿದೆ. ರೋಟರಿ ಸಂಸ್ಥೆಯು ಸಮಾಜದಲ್ಲಿ ಉಪಯುಕ್ತ ಸೇವೆ ನೀಡುತ್ತಿರುವ ಸಂಸ್ಥೆ. ದ.ಕ ಹಾಗೂ ಉಡುಪಿ ಜಿಲ್ಲೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ತನಗೆ ಕೀರ್ತಿ, ಹೆಸರು ಕೊಟ್ಟದ್ದು ಈ ಪುತ್ತೂರಿನ ನೆಲವಾಗಿದ್ದು ಸೇವೆ ಮಾಡಲು ಅವಕಾಶ ಕೊಟ್ಟ ಪುಣ್ಯಭೂಮಿಯಾಗಿದೆ. ಈ ಜಿಲ್ಲೆಯ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದಾಗ ಅದರ ಮೌಲ್ಯ ಏನೆಂಬುದರ ಬಗ್ಗೆ ಅರಿವಾಗುತ್ತದೆ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಮಾಜ ಸುಧಾರಣೆ ಕಾಣುತ್ತದೆ-ಲೋಕೇಶ್ ಎಸ್.ಆರ್:
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಗುರು ಮುನಿದರೆ ಜೀವನ ಕಷ್ಟ. ಗುರುವನ್ನು ಗೌರವಿಸಿದಾಗ ಜೀವನದಲ್ಲಿ ಆಶೀರ್ವಾದ ಲಭಿಸುತ್ತದೆ. ಶಿಕ್ಷಕರಿಗೆ ಗೌರವ ನೀಡುವುದು ಮುಂದಿನ ಶಿಕ್ಷಕರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಯಾವುದೇ ಕ್ಷೇತ್ರವಿರಲಿ, ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅವರಿಗೆ ಹೆಸರು, ಹಣ ಪ್ರಾಪ್ತಿಯಾಗುತ್ತದೆ ಮಾತ್ರವಲ್ಲ ಸಮಾಜ ಸುಧಾರಣೆ ಕಾಣುತ್ತದೆ ಎಂದರು.
ಪ್ರೀತಿ, ವಿಶ್ವಾಸ, ಭಯ ಭಕ್ತಿ ಇದ್ದಾಗ ಶಿಕ್ಷಣದ ಮಹತ್ವದ ಅರಿವಾಗುತ್ತದೆ-ಸೂರ್ಯನಾಥ ಆಳ್ವ:
ರೋಟರಿ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ದೇವರಿಗೆ ಹೋಲಿಸಲಾಗಿದೆ. ಸಮಾಜದಲ್ಲಿ ಉನ್ನತ ಹಂತಕ್ಕೆ ಹೋಗಬೇಕಾಗುವಲ್ಲಿ ಶಿಕ್ಷಣದ ಮಹತ್ವ ಬಹಳ ಇದೆ. ಎಲ್ಲಿ ಶಿಕ್ಷಕರ ಹಾಗೂ ಮನೆಯವರ ಭಯವಿರುವುದಿಲ್ಲವೋ ಆವಾಗ ಶಿಕ್ಷಣದ ಅಧೋಗತಿಯಾಗುತ್ತದೆ. ಪ್ರತಿಯೋರ್ವರಿಗೂ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರನ್ನು ನೆನಪು ಸದಾ ಇರುತ್ತದೆ ಮಾತ್ರವಲ್ಲ ಪ್ರೀತಿ, ವಿಶ್ವಾಸ, ಭಯ ಭಕ್ತಿ ಇರುತ್ತದೋ ಅಲ್ಲಿ ಶಿಕ್ಷಣದ ಮಹತ್ವದ ಅರಿವಾಗುತ್ತದೆ ಎಂದರು.
ಕ್ಲಬ್ ಹಮ್ಮಿಕೊಂಡ ಕಾರ್ಯಕ್ರಮ ಇಲಾಖಾ ಕಾರ್ಯಕ್ರಮದಂತಿದೆ-ಚಿದಾನಂದ ಬೈಲಾಡಿ:
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ರೋಟರಿ ಹಮ್ಮಿಕೊಂಡ ಈ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಶಿಕ್ಷಣ ಇಲಾಖೆಯು ನಡೆಸುವ ರೀತಿಯಲ್ಲಿ ಆಗಿರುವುದು ವಿಶೇಷ. ಎಲ್ಲಾ ಶಿಕ್ಷಕ ಸಮುದಾಯದವರನ್ನು ಸೇರಿಸಿಕೊಂಡು ಉತ್ತಮ ಕಾರ್ಯಕ್ರಮ ನೀಡಿದ್ದಾರೆ ರೋಟರಿ ಸ್ವರ್ಣ ಕ್ಲಬ್. ಕೇವಲ ತೊಂಭತ್ತು ದಿನಗಳಲ್ಲಿ 55 ಕಾರ್ಯಕ್ರಮವನ್ನು ನೀಡಿರುವುದು ಕ್ಲಬ್ ಹೆಗ್ಗಳಿಕೆ ಆಗಿದೆ ಎಂದರು.
ಸಮಾಜ ಸೇವೆಗಳು ನಿಂತ ನೀರಾಗದೆ ಸದಾ ಹರಿಯುವಂತಿರಬೇಕು-ವೆಂಕಟ್ರಮಣ ಕಳುವಾಜೆ:
ರೋಟರಿ ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ಜೀವನದಲ್ಲಿ ಜನನ, ಮರಣ ಶಾಶ್ವತ. ಜನನ ಎಂಬುದು ನಿಂತ ನೀರಾಗದೆ ಅದು ಸಮಾಜ ಸೇವೆಗಳನ್ನು ಮಾಡುವ ಮೂಲಕ ಸದಾ ಹರಿಯುವಂತಿರಬೇಕು. ಅಕ್ಷರ ಕಲಿಸುವ ಮೂಲಕ ಜ್ಞಾನ ಕಲಿಸುವ ನಿರ್ಮಾತೃಗಳು ಗುರುಗಳು ಆಗಿದ್ದಾರೆ ಎಂದರು.
ಕ್ಲಬ್ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸದಸ್ಯರ ಸಹಕಾರಕ್ಕೆ ಕೃತಜ್ಞತೆಗಳು-ಸುರೇಶ್ ಪಿ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಮಾತನಾಡಿ, ಕ್ಲಬ್ ಹಮ್ಮಿಕೊಂಡ ಈ ಶಿಕ್ಷಕರ ದಿನಾಚರಣೆ ಸಂದರ್ಭ ಮೂವರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿರುತ್ತಾರೆ ಜೊತೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಶಿಕ್ಷಕರನ್ನು ಸನ್ಮಾನಿಸಿರುವುದು ಕ್ಲಬ್ ಹೆಗ್ಗಳಿಕೆಯಾಗಿದೆ. ಕ್ಲಬ್ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮಗಳಿಗೆ ಸದಸ್ಯರ ಸಂಪೂರ್ಣ ಸಹಕಾರಕ್ಕೆ ಕೃತಜ್ಞತೆಗಳು ಎಂದರು.
ರೋಟರಿ ಸ್ವರ್ಣ ಶಿಕ್ಷಕರಿಗೆ ಗೌರವ:
ರೋಟರಿ ಸ್ವರ್ಣದಲ್ಲಿ ಸದಸ್ಯರಾಗಿರುವ ಶಿಕ್ಷಕರು ಹಾಗೂ ಸದಸ್ಯರ ಪತ್ನಿಯರಾದ ವತ್ಸಲ, ಶಾಲಿನಿ, ಆಶಾ ರೆಬೆಲ್ಲೋ, ಸುಶ್ಮಾ ಕ್ರಾಸ್ತಾ, ಶುಭಲತಾ, ಸಂಧ್ಯಾ ಬೈಲಾಡಿ, ಮೋಹನ್ ನೆಲಪ್ಪಾಲು, ದಯಾಮಣಿ, ನಿವೃತ್ತ ಶಿಕ್ಷಕ ಮನೋಹರ್‌ರವರುಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕಳೆದ ಬಾರಿ ಹುಟ್ಟುಹಬ್ಬ ಆಚರಿಸಿದ ಆಶಾ ರೆಬೆಲ್ಲೋರವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಪ್ರಶಸ್ತಿ ಪುರಸ್ಕೃತ ರಾಮಣ್ಣ ರೈ ಕೈಕಾರ ಪ್ರಾರ್ಥಿಸಿದರು. ಸಾರ್ಜಂಟ್ ಎಟ್ ಆರ್ಮ್ಸ್ ಭಾಸ್ಕರ ಕೋಡಿಂಬಾಳ ಸ್ವಾಗತಿಸಿದರು. ಕಾರ್ಯದರ್ಶಿ ಸೆನೋರಿಟಾ ಆನಂದ್ ವರದಿ ಮಂಡಿಸಿದರು. ಸದಸ್ಯರಾದ ದೀಪಕ್ ಬೊಳ್ವಾರು, ಮಹಾಬಲ ಗೌಡ, ಉಮೇಶ್, ಸುಧಾಕರ ನಿಡ್ವಣ್ಣಾಯರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ ವಂದಿಸಿದರು. ಶ್ರೀಮತಿ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ಇತ್ತೀಚೆಗೆ ಶಿಕ್ಷಕ ದಿನಾಚರಣೆಯಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿರೇಬಂಡಾಡಿ ಪ್ರೌಢಶಾಲೆಯ ಲಲಿತಾ ಕೆ, ಬೆಳ್ಳಿಪ್ಪಾಡಿ ಸ.ಹಿ.ಪ್ರಾ ಶಾಲೆಯ ಯಶೋಧ ಎನ್.ಎಂ ಹಾಗೂ ರೋಟರಿ ಸ್ವರ್ಣ ಸದಸ್ಯ, ಕೈಕಾರ ಸ.ಹಿ.ಪ್ರಾ ಶಾಲೆಯ ರಾಮಣ್ಣ ರೈ ಕೈಕಾರರವರ ಜೊತೆಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಶಶಿಧರ್ ಜಿ.ಎಸ್, ಲೋಕೇಶ್ ಸಿ.ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಶಶಿಧರ್ ಜಿ.ಎಸ್, ಲೋಕೇಶ್ ಸಿ ಇದೀಗ ಸೇವೆ ಸಲ್ಲಿಸುತ್ತಿರುವ ಲೋಕೇಶ್ ಎಸ್.ಆರ್‌ರವರೊಂದಿಗೆ ವೇದಿಕೆ ತ್ರಿವೇಣಿ ಸಂಗಮವಾಗಿತ್ತು.
ತಾಳೆಗರಿ ಟೊಪ್ಪಿ ವಿಭಿನ್ನತೆ..
ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರಾದ ಲೋಕೇಶ್ ಎಸ್.ಆರ್, ಶಶಿಧರ್ ಜಿ.ಎಸ್, ಲೋಕೇಶ್ ಸಿ., ಸೂರ್ಯನಾಥ ಆಳ್ವ, ವೆಂಕಟ್ರಮಣ ಗೌಡ ಕಳುವಾಜೆ, ಚಿದಾನಂದ ಬೈಲಾಡಿರವರಿಗೆ ತಾಳೆಗರಿಯಲ್ಲಿ ರಚಿಸಿರುವ ಪ್ರಕೃತಿ ಸಿರಿಯ ಹಸಿರಿನ ವಿಶೇಷ ಹಾಗೂ ವಿಭಿನ್ನತೆಯ ಟೊಪ್ಪಿಯನ್ನು ತೊಡಿಸುವ ಮೂಲಕ ಸ್ವಾಗತಿಸಲಾಯಿತು. ಅಲ್ಲದೆ ಕ್ಲಬ್ ಸದಸ್ಯ ಭಾಸ್ಕರ ಕೋಡಿಂಬಾಳರವರ ಬಿಡುಗಡೆಗೊಂಡ ಕೃತಿಯನ್ನು ಸ್ಮರಣಿಕೆಯನ್ನಾಗಿ ಅತಿಥಿ ಗಣ್ಯರಿಗೆ ನೀಡಲಾಯಿತು.