ಮುತ್ತಪ್ಪ ರೈ ಮಕ್ಕಳು ಮತ್ತು ಎರಡನೇ ಪತ್ನಿ ನಡುವಿನ ಆಸ್ತಿ ವಿವಾದ: ರಾಜಿ ಇತ್ಯರ್ಥಕ್ಕೆ ಮೂವರ ಸಹಮತ-ಸೆ.24ರಂದು ನ್ಯಾಯಾಲಯಕ್ಕೆ ಅಧಿಕೃತ ಮನವಿ ಸಲ್ಲಿಕೆ

0

ಬೆಂಗಳೂರು: ಖ್ಯಾತ ಉದ್ಯಮಿ, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ದಿ|ಮುತ್ತಪ್ಪ ರೈ ಅವರ ಆಸ್ತಿ ವಿವಾದವನ್ನು ರಾಜಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಅವರ ಪುತ್ರರಾದ ರಿಕ್ಕಿ ರೈ, ರಾಕಿ ರೈ ಮತ್ತು ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಪರಸ್ಪರ ಸಮ್ಮತಿ ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೂರನೇ ಒಂದು ಪಾಲು ಆಸ್ತಿಗಾಗಿ ಕೇಸು ದಾಖಲಿಸಿದ್ದ ಅನುರಾಧಾ:
ರೈ ಒಡೆತನದ ಸುಮಾರು 500 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯ ಒಡೆತನಕ್ಕಾಗಿ ಮುತ್ತಪ್ಪ ರೈ ಪುತ್ರರ ವಿರುದ್ಧ ಅನುರಾಧಾ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ, ಒಟ್ಟು ಆಸ್ತಿಯ ಮೂರನೇ ಒಂದು ಪಾಲು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ಕುರಿತ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.ಈ ನಡುವೆ ಪಾಲುದಾರಿಕೆ ವಿಚಾರವನ್ನು ರಾಜಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ದಾವೆದಾರರು ನಿರ್ಣಯಿಸಿದ್ದು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಲಿದೆ.ನ್ಯಾಯಾಧೀಶರ ಮದ್ಯಸ್ಥಿಕೆಯಲ್ಲಿಯೇ ವಿವಾದ ಕೊನೆಗಾಣಲಿದ್ದು ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿವಾದ ಪರಿಹಾರ ಕಾಣಲಿದೆ.ಎರಡೂ ಕಡೆಯವರು ರಾಜಿ ಮಾತುಕತೆಗೆ ಬದ್ಧರಾಗಿರುವ ವಿಚಾರವನ್ನು ಮೌಖಿಕವಾಗಿ ನ್ಯಾಯಾಽಶರ ಗಮನಕ್ಕೆ ತರಲಾಗಿದ್ದು ಸೆ.24ರಂದು ಅಧಿಕೃತವಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.

ದೇವನಹಳ್ಳಿಯಲ್ಲಿರುವ 5 ಎಕರೆ ಜಮೀನು, ಮಂಡ್ಯದ ಪಾಂಡವಪುರ ತಾಲೂಕಿನ ತೊನ್ನೂರುಕೆರೆ ಎಂಬಲ್ಲಿರುವ 26 ಎಕರೆ ಕೃಷಿ ಭೂಮಿ, ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಇರುವ ಬಂಗಲೆ ಸೇರಿದಂತೆ ಒಟ್ಟು 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಏಳು ಕೋಟಿ ನಗದು ಅನುರಾಧಾ ಅವರ ಪಾಲಿಗೆ ಬರಲಿದೆ ಎನ್ನಲಾಗಿದೆ.

ಮುತ್ತಪ್ಪ ರೈ ಅನಾರೋಗ್ಯಕ್ಕೆ ಒಳಗಾಗಿದ್ದ ಸಮಯದಲ್ಲಿ ದೇವನಹಳ್ಳಿಯ 5 ಎಕರೆ ಜಮೀನು, ಮೈಸೂರಿನ ಬಂಗಲೆಯನ್ನು ಅನುರಾಧಾ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ಆದರೆ, ನಂತರದ ಕೆಲವೊಂದು ಬೆಳವಣಿಗೆಯಲ್ಲಿ ರೈ ಮತ್ತು ಅನುರಾಧಾ ನಡುವೆ ಸಣ್ಣಮಟ್ಟಿನ ಮನಸ್ತಾಪ ಏರ್ಪಟ್ಟಿತ್ತು. ಮುತ್ತಪ್ಪ ರೈ ನಿಧನದ ಬಳಿಕ ಬಹಿರಂಗಗೊಂಡ ಉಯಿಲಿನಲ್ಲಿ, ತಮಗೆ ಯಾವುದೇ ಪಾಲು ಇಲ್ಲದಿರುವುದನ್ನು ಕಂಡ ಅನುರಾಧಾ ನ್ಯಾಯಾಲಯದ ಮೆಟ್ಟಿಲೇರಿದ್ದರು.ಅನುರಾಧಾ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ ವಾದ ಮಂಡಿಸಿದ್ದರೆ, ಮುತ್ತಪ್ಪ ರೈ ಪುತ್ರರ ಪರವಾಗಿ ರವಿಶಂಕರ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಬಿಡದಿಯ 2.16 ಎಕರೆ ಜಮೀನಿನಲ್ಲಿರುವ 23 ಸಾವಿರ ಚದರ ಅಡಿಯ ಮನೆ, ಬೆಂಗಳೂರಿನ ಸದಾಶಿವನಗರದಲ್ಲಿರುವ ಎರಡು ಫ್ಲ್ಯಾ ಟ್, ಆರ್.ಎಂ.ವಿ. ಎಕ್ಸ್‌ಟೆನ್ಸನ್‌ನಲ್ಲಿರುವ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾ ಟ್, ದೇವನಹಳ್ಳಿ, ಸಕಲೇಶಪುರ, ಹಾಸನ, ಮೈಸೂರು, ಶಿವಮೊಗ್ಗ, ಮಂಡ್ಯ, ಹೆಚ್.ಡಿ.ಕೋಟೆ ಮತ್ತು ಮಡಿಕೇರಿಯಲ್ಲಿರುವ ಅಂದಾಜು 300 ಎಕರೆ ಜಮೀನಿನ ಮೂರರಲ್ಲಿ ಒಂದು ಭಾಗವನ್ನು ತನಗೆ ನೀಡುವಂತೆ ಅನುರಾಧಾ ಕೇಸು ದಾಖಲಿಸಿದ್ದರು.ಆದರೆ, ಬೆಂಗಳೂರಿನ ಗಂಟಿಗಾನ ಹಳ್ಳಿಯ ಆಸ್ತಿಯ ಕೇಸಿನಲ್ಲಿ ಹಿನ್ನಡೆಯಾದ ಹಿನ್ನಲೆಯಲ್ಲಿ ಅನುರಾಧಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಇದಾದ ಕೆಲವೇ ದಿನಗಳ ಬಳಿಕ ನಡೆದ ಮಹತ್ವದ ಬೆಳವಣಿಗೆಯಲ್ಲಿ ರಾಜಿ ಮಾತುಕತೆಗೆ ನಿರ್ಧಾರಕ್ಕೆ ಬರಲಾಗಿದೆ. ಮೌಖಿಕವಾಗಿ ನಡೆದ ವಿಚಾರಣೆಯ ವೇಳೆ ನ್ಯಾಯಾಲಯವೂ ಇದಕ್ಕೆ ಸಮ್ಮತಿ ಸೂಚಿಸಿದೆ. ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಮುತ್ತಪ್ಪ ರೈ ಆಸ್ತಿಯ ಪಾಲುದಾರಿಕೆ ವಿವಾದ ತಾರ್ಕಿಕ ಅಂತ್ಯ ಕಾಣಲಿದೆ.

ಇದಕ್ಕೂ ಮುನ್ನ, ಮುತ್ತಪ್ಪ ರೈ ಒಡೆತನದ ಹನ್ನೊಂದು ಐಶಾರಾಮಿ ಕಾರುಗಳು ಕೆನರಾ ಮತ್ತು ವಿಜಯಾ ಬ್ಯಾಂಕಿನ ಠೇವಣಿ ಹಣದ ಮೇಲೂ ಅನುರಾಧಾ ತಮ್ಮ ಹಕ್ಕು ಪ್ರತಿಪಾದಿಸಿ ನ್ಯಾಯಾಲಯಕ್ಕೆ 700 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು. ಮಾತ್ರವಲ್ಲದೇ ಸಕಲೇಶಪುರದ ಬಾಳುಪೇಟೆ ಎಂಬಲ್ಲಿ ಮುತ್ತಪ್ಪ ರೈ ಒಡೆತನದ 200 ಎಕರೆ ಜಮೀನನ್ನು ಎಂ.ಆರ್.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಖರೀದಿಸಿದ್ದು, ಈ ಆಸ್ತಿಯ ಮೇಲೂ ಅನುರಾಧಾ ಕೇಸು ದಾಖಲಿಸಿದ್ದರು.ಪ್ರಕಾಶ್ ಶೆಟ್ಟಿ ಪರಿಹಾರ ನೀಡಿ ಸೌಹಾರ್ದಯುತವಾಗಿ ವಿವಾದ ಬಗೆಹರಿಸಿದ ನಂತರ ಅನುರಾಧಾ ಈ ಕೇಸನ್ನು ಹಿಂಪಡೆದುಕೊಂಡಿದ್ದರು.ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ನಿಧನದ ಬಳಿಕ 2016ರ ನವಂಬರ್ 27ರಂದು ಅನುರಾಧಾ ಅವರನ್ನು ಮುತ್ತಪ್ಪ ರೈ ವಿವಾಹವಾಗಿದ್ದರು.

LEAVE A REPLY

Please enter your comment!
Please enter your name here