ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದ ಮಹಾಸಭೆ-ಸನ್ಮಾನ

0

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ಸೆ21ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.


ಮಹಾಸಭೆ ಬಳಿಕ ನಡೆದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿದ ಕರ್ನಾಟಕ ಸರಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಜಿಲ್ಲೆಗೆ ಮಾದರಿಯಾಗಿದೆ. ಸಂಘ ಆರಂಭಗೊಂಡ 2ನೇ ವರ್ಷದಲ್ಲೇ 45 ಲಕ್ಷ ರೂ.ಲಾಭ, 100 ಸ್ವಸಹಾಯ ಸಂಘ ರಚನೆ ಮಾಡುವ ಸಾಧನೆ ಕಾಮಧೇನು ಮಹಿಳಾ ಸಹಕಾರಿ ಸಂಘ ಮಾಡಿದೆ. ಸಂಘದ ಮೂಲಕ ಮಹಿಳಾ ಸಬಲೀಕರಣವಾಗಿದೆ ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರಂಭಿಸಿದ್ದರು. ರಾಜ್ಯದಲ್ಲಿ ಮೋಟಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ವೇಳೆ ಸ್ತ್ರಿ ಶಕ್ತಿ ಸಂಘಗಳ ರಚಿಸಿ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯ ಜಾರಿಗೆ ತಂದಿದ್ದರು ಎಂದು ಹೇಳಿದ ಮಮತಾ ಗಟ್ಟಿಯವರು ಈಗಿನ ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜವಾಬ್ದಾರಿಯಾಗಿದೆ. ಕಾಮಧೇನು ಮಹಿಳಾ ಸಹಕಾರಿ ಸಂಘ ಆಯೋಜಿಸಿರುವ ಕಾರ್ಯಕ್ರಮ ಇತರರಿಗೂ ಪ್ರೇರಣೆಯಾಗಲಿ. ಸಂಘ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.

’ಬದುಕಿಗೊಂದು ಸೂರು’ಸಾಲ ಯೋಜನೆ ಬಿಡುಗಡೆ:
ಅಂಗವಿಕಲರಿಗೆ ಮನೆ ನಿರ್ಮಾಣಕ್ಕಾಗಿ ಶೇ.5ರ ಬಡ್ಡಿದರದಲ್ಲಿ 3 ಲಕ್ಷ ರೂ.ಸಾಲ ನೀಡುವ ’ಕಾಮಧೇನು ಬದುಕಿಗೊಂದು ಸೂರು’ ಸಾಲ ಯೋಜನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಮಹಿಳೆಯರಿಗೆ ಶಕ್ತಿ ತುಂಬಿದಲ್ಲಿ ರಾಜ್ಯ, ದೇಶ ಉದ್ಧಾರವಾಗಲಿದೆ. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳೂ ಮಹಿಳೆಯರಿಗೆ ಶಕ್ತಿ ತುಂಬಿವೆ. ಮಹಿಳೆಯರು ತಮ್ಮ ಹಕ್ಕು ಪಡೆಯಲು ಮುಂದೆ ನಿಂತು ಹೋರಾಟ ಮಾಡಬೇಕೆಂದು ಹೇಳಿದರು. ಕಾಮಧೇನು ಬದುಕಿಗೊಂಡು ಸೂರು ಸಾಲ ಯೋಜನೆ ದೇವರು ಮೆಚ್ಚುವಂತದ್ದು. ಈ ಯೋಜನೆಯಡಿ ಮನೆ ನಿರ್ಮಾಣ ಮಾಡುವವರಿಗೆ ವೈಯಕ್ತಿಕ ನೆಲೆಯಲ್ಲಿ ನಾನೂ ಕಿರು ಕಾಣಿಕೆ ನೀಡುವುದಾಗಿ ಹೇಳಿದರು.

ಪೊಲೀಸರಿಗೆ ಸನ್ಮಾನ:
ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪಿಗಳನ್ನು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆ ಪಿಎಸ್‌ಐ ಅವಿನಾಶ್, ಎಎಸ್‌ಐ ಲಾರೆನ್ಸ್ ಹಾಗೂ ಪೊಲೀಸರ ತಂಡವನ್ನು ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಅವಿನಾಶ್ ಅವರು, ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟಿದ್ದ ಆರೋಪಿಗಳನ್ನು ಸಂಘದವರ ದೂರಿನ ಮೇರೆಗೆ ಬಂದಿಸಲಾಗಿದ್ದು, ಈ ಆರೋಪಿಗಳೂ ಐದಾರು ಸಹಕಾರ ಸಂಘಗಳಿಗೆ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಯಾರಿಗೂ ಸಂಶಯ ಬಾರದಂತೆ ನಕಲಿ ಆಭರಣಕ್ಕೆ ಚಿನ್ನದ ಕೋಟಿಂಗ್ ಮಾಡಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೈತನ್ಯ ಹಾಗೂ ಅಧ್ಯಕ್ಷೆ ಉಷಾ ಅಂಚನ್‌ರವರ ಜಾಣತನದಿಂದ ಆರೋಪಿಗಳು ಸಿಕ್ಕಿಬೀಳುವಂತೆ ಆಗಿದೆ. ಪೊಲೀಸ್ ಇಲಾಖೆಗೆ ಈ ರೀತಿ ಸಹಕಾರ ದೊರೆತಲ್ಲಿ ಪೊಲೀಸ್ ಇಲಾಖೆಯ ಕೆಲಸವು ಸುಲಭವಾಗುತ್ತದೆ ಎಂದರು.

ಮಹಿಳಾ ಸೈನಿಕರಿಗೆ/ಸಾಧಕರಿಗೆ ಸನ್ಮಾನ:
ನಿವೃತ್ತ ಮಹಿಳಾ ಸೈನಿಕರಾದ ಲಿಸ್ಸಿ ಡೊಮಿನಿಕ್, ಶಾಂಡಿ ಸೆಬಾಸ್ಟಿನ್ ಹಾಗೂ ಅಲ್ಫೋನ್ಸಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾಗಟ್ಟಿ, ಸಾಮಾಜಿಕ ಕಾರ್ಯಕರ್ತ, ಗೌರವಧನವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ನೆಲ್ಯಾಡಿ ಗ್ರಾ.ಪಂ.ಸದಸ್ಯ ಮಹಮ್ಮದ್ ಇಕ್ಬಾಲ್, ಕ್ರೀಡೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯೆಯರ ಮಕ್ಕಳಾದ ಆದರ್ಶ ಶೆಟ್ಟಿ, ಜಯೇಶ್ ಎಸ್., ಕಿಶಾನ್, ಕೀರ್ತೆಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಧನಸಹಾಯ:
ಬಡ ಕುಟುಂಬದ ಮಹಿಳೆ ಶ್ರೀದೇವಿಯವರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ವಿತರಣೆ ಮಾಡಲಾಯಿತು.

ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಪೆರ್ನೆ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಿಶಿರ, ವಿಜಯಕುಮಾರ್ ಸೊರಕೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ ವಂದಿಸಿದರು. ನಿರ್ದೇಶಕಿ ಮೈತ್ರಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಮೇಘನಾ ಶೈನ್, ನಿರ್ದೇಶಕರಾದ ರತಿ ಡಿ., ವಾರಿಜಾಕ್ಷಿ, ವಿನೀತಾ ಎಂ.ಬಿ., ಪ್ರವೀಣಿ, ಶಾಲಿನಿ, ಸಂಪಾವತಿ, ಜಯಂತಿ, ಡೈಸಿ ವರ್ಗೀಸ್ ಹಾಗೂ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರು, ವಿವಿಧ ಕ್ಷೇತ್ರದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here