ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0


3,58,72,019.84 ರೂ. ವ್ಯವಹಾರ, 1,72 ಲಕ್ಷ ರೂ ನಿವ್ವಳ ಲಾಭ- ಕೃಷ್ಣ ಭಟ್ ಕುಕ್ಕುಜೆ

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 3,58,72,019.84 ರೂ.ಗಳ ವ್ಯವಹಾರವನ್ನು ನಡೆಸಿ, 1,72 ಲಕ್ಷ ರೂ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆರವರು ಹೇಳಿದರು.


ಅವರು ಸೆ. 24ರಂದು ಸವಣೂರು ಯುವ ಸಭಾ ಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ 10 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 40 ಪೈಸೆ ಬೋನಸ್ ಅನ್ನು ನೀಡಲಾಗುವುದು ಎಂದ ಅವರು, ಸಂಘವು 39ನೇ ವರುಷದಲ್ಲಿ ಮುನ್ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹದಿಂದ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಲ್ಲಿ ಪ್ರಯತ್ನಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸುವಂತೆ ವಿನಂತಿಸಿದರು.


ರೈತರು ಹೆಚ್ಚು ಹಾಲು ಸಂಘಕ್ಕೆ ಹಾಕಬೇಕು- ಡಾ.ಸತೀಶ್ ರಾವ್
ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್‌ರವರು ಮಾತನಾಡಿ ಸವಣೂರು ಭಾಗದ ರೈತರು ಹೆಚ್ಚು ಹಾಲು ಸಂಘಕ್ಕೆ ಹಾಕಬೇಕು. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಹೈನುಗಾರರಿಗೆ ಮುಂದಿನ ದಿನಗಳಲ್ಲಿ ಮಾಹಿತಿಯನ್ನು ನೀಡುವ ಕಾರ್‍ಯವನ್ನು ಮಾಡುತ್ತೇವೆ. ಹಾಲಿಗೆ ಹೆಚ್ಚಿನ ದರ ನಿಗದಿ ಆಗಬೇಕೆಂಬ ಬೇಡಿಕೆಯನ್ನು ರಾಜ್ಯ ಸರಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು

ಅಜೋಲದಿಂದ ಲಾಭ- ಶ್ರೀದೇವಿ
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿರವರು ಮಾತನಾಡಿ ಕೇವಲ ಹಿಂಡಿ ಮಾತ್ರ ಹಾಕಿದರೆ ಸಾಲದು, ಜೊತೆಗೆ ರೈತರು ಅಜೋಲವನ್ನು ಬಳಕೆ ಮಾಡಿದಾಗ ಹೈನುಗಾರಿಕೆಯಲ್ಲಿ ಲಾಭವಾಗಲಿದೆ ಎಂದರು.

ಹಾಲಿನ ಪ್ರಮಾಣವನ್ನು ಜಾಸ್ತಿ ಮಾಡಬೇಕು, – ಸೀತಾರಾಮ ರೈ :
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸಂಘವು 39 ವರ್ಷಗಳಿಂದ ಅತ್ಯುತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು, ಹಾಲಿನ ಪ್ರಮಾಣವನ್ನು ಜಾಸ್ತಿ ಮಾಡಬೇಕು, ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡ ಬೇಕು. ಈ ಬಗ್ಗೆ ಆಡಳಿತ ಮಂಡಳಿ, ಸದಸ್ಯರುಗಳು ಮುತುವರ್ಜಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಲಿಗೆ ದರ ಜಾಸ್ತಿ ಮಾಡಿ- ಗಿರಿಶಂಕರ್ ಸುಲಾಯ
ಸೊಸೈಟಿಯಲ್ಲಿ ಈಗ ದೊರೆಯುವ ಹಾಲಿನ ರೇಟಿನಿಂದ ಹಸು ಸಾಕಲು ಸಾಧ್ಯವಿಲ್ಲ. ಲೀಟರ್ ಹಾಲಿಗೆ 50 ರೂಪಾಯಿ ಆದರೂ, ಹೈನುಗಾರರಿಗೆ ಸಿಗಬೇಕು. ದೇಶಿ ತಳಿಯಾಗಿರುವ ಮಲೆನಾಡು ಗಿಡ್ಡ ತಳಿಯನ್ನು ಬೆಳೆಸಬೇಕು ಎಂದು ಹೇಳಿದರು.

ನೇರೋಳ್ತಡ್ಕದಲ್ಲಿ ಹಾಲು ಖರೀದಿ ಕೇಂದ್ರ
ಸವಣೂರು ಹಾಲು ಸೊಸೈಟಿಯಿಂದ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ಎಂಬಲ್ಲಿ ಹಾಲು ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿದ್ದೇವೆ, ಇದರಿಂದ ಈ ಭಾಗದಲ್ಲಿ 24 ಲೀಟರ್ ಹಾಲಿನ ಪ್ರಮಾಣ ಜಾಸ್ತಿ ಆಗಿದೆ ಎಂದು ಸಂಘದ ಉಪಾಧ್ಯಕ್ಷೆ ಆಶಾ ರೈ ಕಲಾಯಿರವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚು ಹಾಲು ಹಾಕಿದವರಿಗೆ ಸನ್ಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ- ಸವಣೂರು ಕೆ.ಸೀತಾರಾಮ ರೈ , ದ್ವಿತೀಯ-ಸುದರ್ಶನ್ ನಾೖಕ್‌ ಕಂಪ ಹಾಗೂ ತೃತೀಯ – ಪದ್ಮಯ್ಯ ಗೌಡ ಪರಣೆರವರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು

ಪ್ರತಿಭಾ ಪುರಸ್ಕಾರ:
ಪಿಯುಸಿ ಪರೀಕ್ಷೆಯಲ್ಲಿ 470 ಅಂಕಗಳಿಸಿದ ಹೇಮಂತ್ ಮೆದುರವರ ಪರವಾಗಿ ಅವರ ತಂದೆ ಚಂದ್ರಶೇಖರ್ ಮೆದು ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಪರೀಕ್ಷೆಯಲ್ಲಿ 500 ಅಂಕ ಪಡೆದ ಕೌಶಿಕ್‌ರವರ ಪರವಾಗಿ ಅವರ ತಂದೆ ಮನೋಹರ್ ಇಡ್ಯಾಡಿರವರಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಗೋಪಾಲಕೃಷ್ಣ ಗೌಡ ಆರೇಲ್ತಡಿ, ಪ್ರೇಮಚಂದ್ರ ಮೆದು, ಜಯರಾಮ ರೈ ಸೋಂಪಾಡಿ, ಸೂರಪ್ಪ ಗೌಡ ಬದಿಯಡ್ಕ, ಪದ್ಮಯ್ಯ ಗೌಡ ಪರಣೆ, ಗಂಗಾಧರ ಸುಣ್ಣಾಜೆ, ಆಶಾಲತಾ ಬರೆಮೇಲು, ಗೀತಾ ಕುದ್ಮನಮಜಲು, ಬಾಬು ಮುಗೇರು, ಪ್ರಶಾಂತ್ ಕುಮಾರ್ ಗುಂಡ್ಯಡ್ಕ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ ಸ್ವಾಗತಿಸಿ, ಉಪಾಧ್ಯಕ್ಷೆ ಆಶಾ ರೈ ಕಲಾಯಿ ವಂದಿಸಿದರು. ಕಾರ್‍ಯದರ್ಶಿ ಹರೀಶ್ ವರದಿ ವಾಚಿಸಿದರು. ಸಂಘದ ಸದಸ್ಯ ರಾಜೇಶ್ ರೈ ಮುಗೇರು ಪ್ರಾರ್ಥನೆಗೈದು,ಕಾರ್‍ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಬ್ಬಣ್ಣ ರೈ ಖಂಡಿಗ, ಸುಪ್ರೀತ್ ರೈ ಖಂಡಿಗ, ಮಾಜಿ ನಿರ್ದೇಶಕ ಸುದರ್ಶನ್ ನಾೖಕ್‌ ಕಂಪ, ಸವಣೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕರುಗಳಾದ ಪ್ರಕಾಶ್ ರೈ ಸಾರಕರೆ, ಗಂಗಾಧರ್ ಪೆರಿಯಡ್ಕ, ಮಾಜಿ ನಿರ್ದೇಶಕರುಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ನಾರಾಯಣ ಗೌಡ ಪೂವ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಪುತ್ತೂರು ಎಪಿಎಂಸಿ ಮಾಜಿ ನಿರ್ದೇಶಕ ಎ.ಆರ್.ಚಂದ್ರ, ನ್ಯಾಯವಾದಿ ಮಹೇಶ್ ಕೆ.ಸವಣೂರು, ಸತೀಶ್ ಶೆಟ್ಟಿ ಕಿನಾರ, ರಾಘವ ಗೌಡ ಸವಣೂರು ಸಹಿತ ಸವಣೂರು ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.


ಸಂತಾಪ ಸೂಚನೆ- ಸಂಘದ ಸ್ಥಾಪಕಾಧ್ಯಕ್ಷ ಮಹಾಲಿಂಗ ಭಟ್ ಕುಕ್ಕುಜೆರವರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು. ಸಂಘದ ಹಸಿರು ತೋಟ ಮೇಲ್ವಿಚಾರಕ ರಮೇಶ್ , ಹಾಲು ಪರೀಕ್ಷಕಿ ಸುಜಾತ, ಸಹಾಯಕಿ ಶೋಭಾ ಸಹಕರಿಸಿದರು.


ಮುಂದಿನ ತಿಂಗಳು ಸವಣೂರಿನಲ್ಲಿ ಶಿಬಿರ
ಸವಣೂರು ಭಾಗದಲ್ಲಿ ಹಾಲು ಉತ್ಪಾದನೆ ಜಾಸ್ತಿ ಆಗಬೇಕು, ಈ ಬಗ್ಗೆ ರೈತರಲ್ಲಿ ಆಸಕ್ತಿ ಬೆಳೆಯಲು ಮತ್ತು ಹೈನುಗಾರಿಕೆಯಿಂದ ಸಿಗುವ ವಿವಿಧ ಉಪಯೋಗಗಳ ಬಗ್ಗೆ ಮುಂದಿನ ತಿಂಗಳು ಕೊನೆಯ ವಾರ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸವಣೂರಿನಲ್ಲಿ ಹೈನುಗಾರಿಕೆ ಬಗ್ಗೆ ಮಾಹಿತಿ ಶಿಬಿರ ಮಾಡಲಿದ್ದೇವೆ ಎಂದು ಸವಣೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here