ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ 

0

35,25,340 ರೂ ವ್ಯವಹಾರ , 1,13,669 ನಿವ್ವಳ ಲಾಭ ,ಲೀಟರ್ ಗೆ 59 ಪೈಸೆ ಬೋನಸ್ 

ಪುತ್ತೂರು: ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.21ರಂದು ಮಣಿಕ್ಕಾರ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಪಿ.ವಿನೋದ್ ರೈ ಮಾತನಾಡಿ, ಸಂಘವು ಸದಸ್ಯರ ಸಹಕಾರದಲ್ಲಿ ಅಭಿವೃದ್ದಿಯಾಗುತ್ತಿದ್ದು,ಸದಸ್ಯರು ಸಂಘಕ್ಕೆ ಹೆಚ್ಚು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದ ಅವರು ಸದಸ್ಯರಿಗೆ ಪ್ರತೀ ಲೀಟರ್‌ ಗೆ 59 ಪೈಸೆ ಬೋನಸ್‌ ನೀಡುವುದಾಗಿ ಘೋಷಿಸಿದರು. 

ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಕುರಿತಂತೆ ನಿವೇಶನದ  ಕಾರ್ಯಗಳಾಗುತ್ತಿದ್ದು,ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್‌ರಾಜ್‌ಶೆಟ್ಟಿ ಅವರೂ ಸಹಕಾರ ನೀಡುತ್ತಿದ್ದಾರೆ ಎಂದರು. ಸಂಘದ ಕಾರ್ಯದರ್ಶಿ ಮೋಹನ ಗೌಡ ವರದಿ ವಾಚಿಸಿ, ಸಂಘವು ವಾರ್ಷಿಕ  35,25,340 ರೂ ವ್ಯವಹಾರ ನಡೆಸಿ3,94,040 ರೂ ಒಟ್ಟು ಆದಾಯ ಬಂದಿದ್ದು, ಆಡಳಿತಾತ್ಮಕ ಖರ್ಚು 2,80,390 ಆಗಿದ್ದು,ವರದಿ ಸಾಲಿನಲ್ಲಿ 1,13,669 ನಿವ್ವಳ ಲಾಭ ಬಂದಿದೆ ಎಂದರು.

ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಮಾತನಾಡಿ, ಸಂಘಕ್ಕೆ ಸದಸ್ಯರು ಗುಣಮಟ್ಟದ ಹಾಲು ಪೂರೈಸಬೇಕು.ಸಂಘವು ಆಹಾರ ಭದ್ರತಾ ಮತ್ತು ಸುರಕ್ಷಾ ಕಾಯ್ದೆಯಡಿ ನೊಂದಾವಣೆಯಾಗಿದ್ದು, ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಎಲ್ಲಾ ಜಾನುವಾರುಗಳಿಗೆ ವಿಮೆ ಮಾಡಿಸಿಕೊಳ್ಳುವುದು ಆವಶ್ಯಕ.ಸದಸ್ಯರು ಒಕ್ಕೂಟದಿಂದ ದೊರಕುವ ಎಲ್ಲಾ ಅನುದಾನ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕು .ಹಾಲು ಮಾರಾಟ ,ಖರೀದಿ ಹಾಗೂ ಲವಣ ಮಿಶ್ರಣ ಮಾರಾಟ ಮಾಡಿಯೇ ಸಂಘ 1,13,669 ರೂ.ಲಾಭ ಗಳಿಸಿರುವುದು ಅಭಿನಂದನೀಯ ಎಂದರು.

ಸಂಘದ ಉಪಾಧ್ಯಕ್ಷ ಎನ್ ಎಸ್.ವೆಂಕಪ್ಪ ಗೌಡ ಮಾತನಾಡಿ, ರೈತರಿಗೆ ಲೀಟರ್ ಹಾಲಿಗೆ ಕನಿಷ್ಠ 50 ರೂ ಆದರೂ ಸಿಗಬೇಕು. ಪಶು ಆಹಾರಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.ಇದೇ ರೀತಿ ಮುಂದುವರೆದರೆ ಹೈನುಗಾರಿಕೆ ನಿಲ್ಲುವ ಸಾಧ್ಯತೆಗಳೂ ಇದೆ ಎಂದರು.

ಸದಸ್ಯ ಸಂಜೀವ ಪೂಜಾರಿ ಮಾತನಾಡಿ, ಹಾಲು ಉತ್ಪಾದಕರ ನೆರವಿಗೆ ಒಕ್ಕೂಟ ನಿಲ್ಲಬೇಕು.ಈಗಾಗಲೇ ಹಲವು ಮಂದಿ ಹೈನುಗಾರಿಕೆ ನಿಲ್ಲಿಸಿದ್ದಾರೆ.ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದ್ದು,ಆದಾಯ ಕಡಿಮೆಯಾಗುತ್ತಿದೆ ಎಂದರು.ಸದಸ್ಯ ಸಚಿನ್ ರಾಜ್ ಶೆಟ್ಟಿ ಮಾತನಾಡಿ, ಹಾಲಿನ ಫ್ಯಾಟ್ ಮತ್ತು ಡಿಗ್ರಿಯ ಮಾನದಂಡ ಸಡಿಲಿಸಬೇಕು.ಪಶು ಆಹಾರದ ಬೆಲೆ ಏರಿಕೆ ಮಾಡುವಾಗ ರೈತರ ಬಗ್ಗೆಯೂ ಆಲೋಚಿಸಬೇಕು.ಹಾಲಿಗೆ ಕನಿಷ್ಠ 50 ರೂ ಸಿಗಬೇಕು ಎಂದರು.

ಸದಸ್ಯ ಪ್ರವೀಣ್ ಚೆನ್ನಾವರ ಮಾತನಾಡಿ, ಈ ಬಾರಿ ವ್ಯವಹಾರ ಹಾಗೂ ಲಾಭ ಕಡಿಮೆಯಾಗಿದ್ದರೂ ,ಆಡಳಿತ ಮಂಡಳಿ ಎಚ್ಚರಿಕೆಯಿಂದ ಆಡಳಿತಾತ್ಮಕ ಖರ್ಚುಗಳನ್ನು ಕಡಿಮೆ ಮಾಡಿದೆ.ಇದಕ್ಕಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಪ್ರವೀಣ್ ಕುಮಾರ್‌ ರೈ ನಳೀಲು, ಸದಾಶಿವ ರೈ ಬಾಕಿಜಾಲು, ಸುಂದರ ಪಾಲ್ತಾಡು, ಸೈಯ್ಯದ್ ಮೊಯ್ದೀನ್ ಸಾಹೇಬ್ ಚೆನ್ನಾವರ, ಸಿ.ಪಿ.ಪ್ರೇಮಲತಾ ರೈ ಚೆನ್ನಾವರ ಪಟ್ಟೆ, ಪ್ರೇಮ ಕೆ.ಜಿ. ಕೊಲ್ಯ, ನೀಲಮ್ಮ ಕಾಪುತಮೂಲೆ ಉಪಸ್ಥಿತರಿದ್ದರು.  

 ಸಾಕ್ಷಿ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಮೋಹನ ಗೌಡ ಬಿ.ಸ್ವಾಗತಿಸಿ,ಹಾಲು ಪರೀಕ್ಷಕಿ ವನಜ ಬಿ. ವಂದಿಸಿದರು. ಸೈಯ್ಯದ್ ಗಫೂ‌ರ್ ಸಾಹೇಬ್ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here