ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ-ಡಾ. ಹರಿಪ್ರಸಾದ್‌ ಎಸ್‌.ರವರಿಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ

0

ಬೆಟ್ಟಂಪಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ  ಪ್ರಶಸ್ತಿಯು ಈ ಬಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಗೆ ಲಭಿಸಿದೆ. ಸೆ. 26ರಂದು ಮಂಗಳೂರಿನ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ.ಎಲ್‌ ಧರ್ಮ ಅವರು 2022-23ನೇ ಸಾಲಿನ ʻಅತ್ಯುತ್ತಮ ಎನ್ಎಸ್ಎಸ್  ಘಟಕʼ ಪ್ರಶಸ್ತಿಯನ್ನು ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅವರಿಗೆ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಕಾಲೇಜಿನ ರಾ.ಸೇ.ಯೋ. ಯೋಜನಾಧಿಕಾರಿಗಳಾಗಿದ್ದ ಡಾ. ಹರಿಪ್ರಸಾದ್ ಎಸ್. ಅವರಿಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು. ಡಾ. ಹರಿಪ್ರಸಾದ್‌ ಎಸ್‌. ರವರು ಪ್ರಸ್ತುತ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಎನ್‌ಎಸ್‌ಎಸ್‌ ಘಟಕ ಯೋಜನಾಧಿಕಾರಿಗಳಾಗಿದ್ದಾರೆ.


ಮೇಲಿನ ಅವಧಿಯಲ್ಲಿ ಘಟಕವು ನಡೆಸಿದ ವೈವಿಧ್ಯಮಯ ಸಮಾಜಮುಖೀ ಚಟುವಟಿಕೆಗಳನ್ನೂ ವಿದ್ಯಾರ್ಥಿಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನೂ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ನೂರಕ್ಕೂ ಮಿಕ್ಕು ಎನ್ ಎಸ್ ಎಸ್ ಘಟಕಗಳನ್ನು ಹೊಂದಿರುವ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬೆಟ್ಟಂಪಾಡಿ ಕಾಲೇಜಿನ ಎನ್ ಎಸ್ ಎಸ್ ಘಟಕವು ಇತ್ತೀಚಿನ ವರ್ಷಗಳಲ್ಲಿ ತುಂಬ ಸಕ್ರಿಯವಾಗಿದ್ದು ಈ ಪರಿಸರದಲ್ಲಿ ಹತ್ತು ಹಲವು ವಿನೂತನ ಯೋಜನೆಗಳಿಂದ ಜನಪ್ರಿಯವಾಗಿದೆ. ಇದೇ ಮೊದಲ ಬಾರಿಗೆ ಕಾಲೇಜಿಗೆ ಈ ಉನ್ನತ ಗೌರವವು ಪ್ರಾಪ್ತವಾಗಿದ್ದು ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಗೌರವಕ್ಕೆ ಕಾರಣಕರ್ತರಾದ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮತ್ತು ಯೋಜನಾಧಿಕಾರಿಗಳು ಅಭಿನಂದನಾರ್ಹರು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ತಿಳಿಸಿದ್ದಾರೆ.

ಡಾ. ಹರಿಪ್ರಸಾದ್‌ ಎಸ್‌. 


ಘಟಕದ ಪ್ರಮುಖ ಸೇವಾ ಚಟುವಟಿಕೆಗಳು:
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗೆ ಒಳಪಡುವ ಎಲ್ಲಾ ಬಸ್ಸು ತಂಗುದಾಣಗಳನ್ನು ಶುಚಿಗೊಳಿಸುವ ಮತ್ತು ನಿರ್ವಹಿಸುವ ಅಭಿಯಾನ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನೆಲೆಯಲ್ಲಿ ಕಾರ್ಯಕ್ರಮಗಳು, ಕೊರೋನ ವೈರಸ್ ನಿರ್ಮೂಲನ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜೊತೆ ಕೈ ಜೋಡಿಸಿಕೊಂಡು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಸ್ವಯಂಸೇವಕರ ನಿಯೋಜನೆ, ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವುದರ ಜೊತೆಗೆ ಜವಾಬ್ದಾರಿಯನ್ನು ತಿಳಿಸುವ ಉದ್ದೇಶಗಳನ್ನು ಇಟ್ಟುಕೊಂಡು ಆಯೋಜನೆಗೊಂಡ ವನಪರ್ವ ಅಭಿಯಾನ, ಎಂ ಜಿ ಎನ್ ಸಿ ಆರ್ ಇ ಹೈದರಾಬಾದ್ ಸಹಯೋಗದೊಂದಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಇವುಗಳು 2020-21, 2021-22 ಮತ್ತು 2022-23 ಶೈಕ್ಷಣಿಕ ವರ್ಷಗಳ ಎನ್ಎಸ್ಎಸ್ ಘಟಕದ ಪ್ರಮುಖ ಕಾರ್ಯಕ್ರಮಗಳಾಗಿವೆ.

LEAVE A REPLY

Please enter your comment!
Please enter your name here