ಪ್ರಥಮ ಬಾರಿಗೆ ಜಿಲ್ಲೆಯಲ್ಲಿಯೇ ಬೃಹತ್ ಆರೋಗ್ಯ ಶಿಬಿರ-ವಿಕ್ರಂ ದತ್ತ
ಪುತ್ತೂರು:ಪ್ರಸ್ತುತ ವಿದ್ಯಾಮಾನದಲ್ಲಿ ಅಲ್ಲಲ್ಲಿ ವೈದ್ಯಕೀಯ ಶಿಬಿರಗಳು ನಡೆಯುತ್ತಿದ್ದರೂ ಈ ವೈದ್ಯಕೀಯ ಶಿಬಿರಕ್ಕೆ ಫಲಾನುಭವಿಗಳು ಹಾಜರಾಗುವುದು ಬಹಳ ಕಡಿಮೆ. ಯಾಕೆಂದರೆ ಶಿಬಿರಕ್ಕೆ ಹಾಜರಾದರೆ ತನಗೆ ಯಾವುದು ತೊಂದರೆ ಎಂಬ ಮುನ್ಸೂಚನೆ ಲಭಿಸುತ್ತದೆ ಎಂದು. ಆದರೆ ರೋಟರಿ ಪುತ್ತೂರು ಕ್ಲಬ್ ಹಮ್ಮಿಕೊಂಡ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಪ್ರಥಮ ಬಾರಿಗೆ ಜಿಲ್ಲೆಯಲ್ಲಿಯೇ ಬೃಹತ್ ಆರೋಗ್ಯ ಶಿಬಿರವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರುನಿಂದ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಸೆ.29 ರಂದು ಪುತ್ತೂರು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಏರ್ಪಡಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ರೋಟರಿ ಜಿಲ್ಲಾ ಕಾರ್ಯಕ್ರಮವೆನಿಸಿದ ಸಂಧ್ಯಾ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಕ್ಲಬ್ ಈಗಾಗಲೇ ಫಲಾನುಭವಿಗಳಿಗೆ ನೆರವಾಗಲು ವೀಲ್ಚೆಯರ್ ಅನ್ನು ಹಸ್ತಾಂತರಿಸಿದ್ದು ಮತ್ತೊಂದು ಸಕರಾತ್ಮಕ ಆರೋಗ್ಯದ ನಿಟ್ಟಿನಲ್ಲಿ ಫಲಾನುಭವಿಗಳಿಗೆ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ಏರ್ಪಡಿಸಿರುವುದು ಅಭಿನಂದನೀಯ ಎಂದ ಅವರು ಆದಿತ್ಯವಾರ ರಜೆ ಇದ್ದರೂ ರೋಟರಿ ಪುತ್ತೂರುನಲ್ಲಿನ ವೈದ್ಯರು ವಿಶ್ವ ಹೃದಯ ದಿನದಂದು ಸೇವೆ ನೀಡಿರುವುದು ಶ್ಲಾಘನೀಯ. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ವೈದ್ಯರುಗಳು ಸೂಚಿಸಿದ ರೀತಿಯನ್ನು ಅನುಸರಿಸಿ ಆರೋಗ್ಯವಂತ ಜೀವನ ನಿಮ್ಮದಾಗಲಿ ಎಂದರು.
ದಾನ ಮಾಡುವುದರೊಂದಿಗೆ ಅಂಗಾಂಗಗಳು ಮತ್ತೊಬ್ಬರ ಜೀವ ಉಳಿಸಬಹುದಾಗಿದೆ-ಡಾ.ದೀಪಕ್ ರೈ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಪ್ರಸ್ತುತ ವಿದ್ಯಾಮಾನದಲ್ಲಿ ವಿಶ್ವದಲ್ಲಿ ಸುಮಾರು ಎರಡು ಕೋಟಿ ಜನರು ಹೃದಯಾಘಾತ ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಚಿತ್ರನಟ ಪುನೀತ್ ರಾಜ್ಕುಮಾರ್ ಫಿಟ್ ಆಗಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಜೊತೆಗೆ 12 ವರ್ಷದ ಬಾಲಕಿ ಇದೇ ಹೃದಯಾಘಾತಕ್ಕೆ ಒಳಗಾಗಿ ಜೀವ ಕಳೆದುಕೊಂಡಿದ್ದಾರೆ. ಹಿಂದೆ 50 ವರ್ಷದ ಬಳಿಕ ಹೃದಯಾಘಾತ ಸಂಭವಿಸುತ್ತಿತ್ತು, ಆದರೆ ಇಂದಿನ ವಿದ್ಯಾಮನದಲ್ಲಿ?. ಎಂದ ಅವರು ಒತ್ತಡದ ಜೀವನ, ವ್ಯಾಯಾಮದ ಕೊರತೆ, ಆಹಾರ ಶೈಲಿಯಲ್ಲಿ ವ್ಯತ್ಯಯ, ಧೂಮಪಾನ, ಮದ್ಯಪಾನ ಇವುಗಳಿಂದ ವ್ಯಕ್ತಿಗೆ ಹೃದಯಾಘಾತವಾಗುವ ಸಂಭವ ಹೆಚ್ಚು. ಅದರಲ್ಲೂ ಮಧುಮೇಹ ವಿಷಯದಲ್ಲಿ ರಾಜಧಾನಿ ಭಾರತವಾಗಿದೆ ಎಂದ ಅವರು ದೇಹವನ್ನು ಸುಟ್ಟು ಹಾಕುವ ಹಾಗೂ ಮಣ್ಣು ಮಾಡುವ ಬದಲು ದಾನ ಮಾಡುವುದರಿಂದ ಆ ವ್ಯಕ್ತಿಯಲ್ಲಿನ ಅಂಗಾಂಗಗಳು ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಮೂರು ಬೃಹತ್ ಯೋಜನೆಯನ್ನು ಸಮಾಜಕ್ಕೆ ಪರಿಚಯಿಸಲಿದ್ದೇವೆ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ರವರು ಸ್ವಾಗತಿಸಿ ಮಾತನಾಡಿ, ರೋಟರಿ ಜಿಲ್ಲೆ 3181 ಇದರಲ್ಲಿ ಜಿಲ್ಲಾ ಕಾರ್ಯವೆನಿಸಿದ ಹೃದಯವನ್ನು ರಕ್ಷಿಸು ಎಂಬಂತೆ ಇಂದು ವಿಶ್ವ ಹೃದಯ ದಿನದಂಗವಾಗಿ ಕ್ಲಬ್ ಎಲ್ಲರ ಸಹಕಾರದೊಂದಿಗೆ ಯಶಸ್ವಿ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿದೆ. ರೋಟರಿ ಪುತ್ತೂರು ಕ್ಲಬ್ ಕಳೆದ 60 ವರ್ಷಗಳಲ್ಲಿ ಬ್ಲಡ್ ಬ್ಯಾಂಕ್, ಮನೆಗಳ ನಿರ್ಮಾಣ, ಡಯಾಲಿಸಿಸ್ ಸೆಂಟರ್, ರಕ್ತ ಸಂಗ್ರಹ ಬಸ್, ಕಣ್ಣಿನ ಆಸ್ಪತ್ರೆ ಹೀಗೆ ಶಾಶ್ವತ ಕೊಡುಗೆಗಳನ್ನು ಸಮಾಜಕ್ಕೆ ನೀಡಿದೆ. ಮುಂದಿನ ದಿನಗಳಲ್ಲಿ ಮೂರು ಬೃಹತ್ ಯೋಜನೆಯನ್ನು ಸಮಾಜಕ್ಕೆ ಪರಿಚಯಿಸಲಿದ್ದೇವೆ ಎಂದರು.
ಕ್ಲಬ್ನಲ್ಲಿ 22 ಮಂದಿ ವೈದ್ಯರುಗಳು ಇರುವುದು ನಮ್ಮ ಭಾಗ್ಯ-ಉಮಾನಾಥ್ ಪಿ.ಬಿ:
ಕಾರ್ಯಕ್ರಮ ಸಂಯೋಜಕ ಉಮಾನಾಥ್ ಪಿ.ಬಿ ಮಾತನಾಡಿ, ಈ ಬೃಹತ್ ವೈದ್ಯಕೀಯ ಶಿಬಿರವನ್ನು ಏರ್ಪಡಿಸುವುದು ಅಧ್ಯಕ್ಷ ಡಾ.ಶ್ರೀಪತಿ ರಾವ್ರವರ ಕನಸಾಗಿತ್ತು ಮಾತ್ರವಲ್ಲ ಕ್ಲಬ್ ಸದಸ್ಯರೆಲ್ಲರ ಸಹಕಾರದಿಂದ ಈ ವೈದ್ಯಕೀಯ ಶಿಬಿರ ಯಶಸ್ವಿಯಾಗಿ ಮೂಡಿ ಬಂದಿದೆ. ಅರವತ್ತು ವರ್ಷವನ್ನು ಪೂರೈಸಿರುವ ಈ ರೋಟರಿ ಪುತ್ತೂರು ಸಂಸ್ಥೆಯು ವೈದ್ಯಕೀಯಕ್ಕೆ ಸಂಬಂದಪಟ್ಟಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ಮಾತ್ರವಲ್ಲ ನಮ್ಮ ಕ್ಲಬ್ನಲ್ಲಿನ 111 ಸದಸ್ಯರ ಪೈಕಿ 22 ಮಂದಿ ಜನಪ್ರಿಯ ಆಸ್ಪತ್ರೆಯ ವೈದ್ಯರುಗಳು ಇರುವುದು ನಮ್ಮ ಭಾಗ್ಯವಾಗಿದೆ ಎಂದರು.
ರೋಟರಿ ಸದಸ್ಯೆ ಪ್ರೀತಾ ಹೆಗ್ಡೆ ಪ್ರಾರ್ಥಿಸಿದರು. ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ಕಾರ್ಯದರ್ಶಿ ದಾಮೋದರ್ ಕೆ ವಂದಿಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ಮಾಜಿ ವಲಯ ಸೇನಾನಿ ಪ್ರೊ.ಝೇವಿಯರ್ ಡಿ’ಸೋಜರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ರೋಟರಿ ಹಿರಿಯ ಸದಸ್ಯ ಡಾ.ಎಂ.ಎಸ್ ಭಟ್ ಹಾಗೂ ಡಾ.ನಝೀರ್ ಅಹಮದ್ರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಮುದಾಯ ವಿಭಾಗ ನಿರ್ದೇಶಕ ರಾಜ್ಗೋಪಾಲ್ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ.ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ವಿಭಾಗಗಳಲ್ಲಿ ಭಾಗವಹಿಸಿದವರು..
*ರಕ್ತ ವರ್ಗೀಕರಣ ಮತ್ತು ರಕ್ತದಾನ-14+7, *ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ-102, *ಕಿಡ್ನಿ ಸಂಬಂಧಪಟ್ಟ ಕಾಯಿಲೆಗಳಿಗೆ-25, *ಕಿಡ್ನಿ ಡಯಾಲಿಸಿಸ್-11, *ಬಾಯಿಯ ತಪಾಸಣೆ ಮತ್ತು ದಂತ ಚಿಕಿತ್ಸೆ-45, *ಬಿಪಿ-106, *ಸಕ್ಕರೆ ಕಾಯಿಲೆ-106, *ಇಸಿಜಿ-50, *ಶ್ವಾಸಕೋಶ ತಪಾಸಣೆ-30, *ಹೋಮಿಯೋಪತಿ ಚಿಕಿತ್ಸೆ-15, *ಆಯುರ್ವೇದಿಕ್ ಚಿಕಿತ್ಸೆ-15, *ಸ್ತನ ಕ್ಯಾನ್ಸರ್-10, *ಮೂತ್ರಜನಕಾಂಗದ ಚಿಕಿತ್ಸೆ-10, *ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ-34, *ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ-6, *ಬಿಎಂಡಿ-30
16 ವಿಭಾಗಗಳು..200ಕ್ಕೂ ಮಿಕ್ಕಿ ಫಲಾನುಭವಿಗಳು..
ಈ ಬೃಹತ್ ವೈದ್ಯಕೀಯ ಶಿಬಿರದಲ್ಲಿ 16 ವಿಭಾಗಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಏರ್ಪಡಿಸಲಾಗಿದ್ದು ಸುಮಾರು 200ಕ್ಕೂ ಮಿಕ್ಕಿ ಫಲಾನುಭವಿಗಳು ಈ ಶಿಬಿರದಲ್ಲಿ ಪಾಲ್ಗೊಂಡರು ಮಾತ್ರವಲ್ಲ ನೂರಾರು ಮಂದಿ ಫಲಾನುಭವಿಗಳು ಹತ್ತಾರು ವಿಭಾಗಗಳಲ್ಲಿ ಪಾಲ್ಗೊಂಡು ಪರೀಕ್ಷೆಯನ್ನು ಮಾಡಿಕೊಂಡಿದ್ದು ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ.
ಗಾಲಿ ಕುರ್ಚಿ ಹಸ್ತಾಂತರ..
ರೋಟರಿ ಜಿಲ್ಲಾ ಯೋಜನೆಯಡಿಯಲ್ಲಿ ರೋಟರಿ ಕ್ಲಬ್ ಪುತ್ತೂರುನಿಂದ ಪುತ್ತೂರಿನ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಲಿ ಕುರ್ಚಿಯನ್ನು ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.