ಪುತ್ತೂರು: BSNL ನಿವೃತ್ತ ನೌಕರರ ಸಂಘದ ಸದಸ್ಯರ ವಾರ್ಷಿಕ ಸ್ನೇಹಕೂಟ ಕಾರ್ಯಕ್ರಮವು ಸೆ.28ರಂದು ಪುತ್ತೂರಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಚಂದ್ರಶೇಖರ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಿವೃತ್ತ ನೌಕರರು ತಮ್ಮ ಆರೋಗ್ಯದ ಬಗೆಗೆ ಸದಾ ಜಾಗೃತರಾಗಿದ್ದು, ನಿಯಮಿತ ತಪಾಸಣೆಗಳನ್ನು ಮಾಡುತ್ತಿರಬೇಕು ಹಾಗೂ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಒಳ್ಳೆಯ ಹವ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದರು. ಬಳಿಕ, ಪಿಂಚಣಿದಾರರಿಗೆ ಸರಕಾರದ ವತಿಯಿಂದ ಕೊಡಲ್ಪಡುವ ಕೆಲವು ಮುಖ್ಯವಾದ ಆರೋಗ್ಯ ಕಾರ್ಡುಗಳನ್ನು ಮಾಡಿಸಿಕೊಳ್ಳಲು ಅಗತ್ಯವಿರುವ ಮಾಹಿತಿಗಳನ್ನು ನೀಡಿದರು.
ರಂಗನಾಥ್ ರಾವ್ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದಿಸಿದರು. ರಮಾದೇವಿ ಪ್ರಾರ್ಥಿಸಿದರು. ವೇದವಲ್ಲಿ, ಕರುಣಾಕರ, ಅನಂತೇಶ್ವರಯ್ಯ, ಐ. ಕೆ. ಬೊಳುವಾರು, ರಮಾದೇವಿ, ಶಂಕರಿ ಶರ್ಮ ಮುಂತಾದವರು ತಮ್ಮ ನಿವೃತ್ತ ಜೀವನದ ಅನುಭವಗಳನ್ನು ಹಂಚಿಕೊಂಡರು. ಮೋಜಿನ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.