ಶಾಲಾಭಿವೃದ್ಧಿಗಾಗಿ ಸಮಿತಿ ಸದಸ್ಯರಿಂದ ನವರಾತ್ರಿ ವೇಷ

0

‘ಭವತಿ ಭಿಕ್ಷಾಂದೇಹಿ ವಿದ್ಯಾ ದೇಗುಲ ಸೇವಾ ಯೋಜನೆಯಡಿಯಲ್ಲಿ ನಿಧಿ ಸಂಗ್ರಹ

ಉಪ್ಪಿನಂಗಡಿ: ಬಂಟ್ವಾಳ ತಾಲೂಕಿನ ದೇವಸ್ಯಮೂಡೂರು ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ನವರಾತ್ರಿಯ ಈ ಸಮಯದಲ್ಲಿ ವೇಷ ಧರಿಸಿ ‘ಭವತಿ ಭಿಕ್ಷಾಂದೇಹಿ’ ಎಂದು ನಿಧಿ ಸಂಗ್ರಹಿಸಲು ಮುಂದಾಗಿ ಗಮನ ಸೆಳೆದಿದ್ದಾರೆ.


ಶಾಲೆಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ದೊರೆಯಬೇಕಾದಲ್ಲಿಂದ ಸಹಕಾರ ದೊರೆಯದೇ ಹೋದಾಗ, 70 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕು ಮತ್ತು ಬೆಳಗಿಸಬೇಕು ಎಂಬ ಧ್ಯೇಯ ತೊಟ್ಟ ಶಾಲಾಭಿವೃದ್ಧಿಯ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಊರಿನ ವಿದ್ಯಾಭಿಮಾನಿಗಳು ‘ಭವತಿ ಭಿಕ್ಷಾಂದೇಹಿ ವಿದ್ಯಾ ದೇಗುಲ ಸೇವಾ ಯೋಜನೆ’ ಯ ಹೆಸರಲ್ಲಿ ನಿಧಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದು, ಅದಕ್ಕಾಗಿ ನವರಾತ್ರಿಯ ವೇಷ ಧರಿಸಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಸಂಚರಿಸಿ ನಿಧಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದಾರೆ.

ಅದಕ್ಕಾಗಿ ಶಾಲಾ ಎಸ್‌ಡಿಎಂಸಿ ಯ ಅಧ್ಯಕ್ಷ ವಸಂತ ಮುದಿಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕೆ. , ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹರೀಶ್ ರವರುಗಳು ಸ್ವತಹ ವೇಷ ಧರಿಸಿ ಸಂಚಾರ ಕೈಗೊಂಡಿದ್ದಾರೆ. ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ನವರಾತ್ರಿಯ ಸಂಧರ್ಭವನ್ನು ಬಳಸಿಕೊಂಡ ಅವರುಗಳ ನಡೆ ಶ್ಲಾಘನೆಗೆ ಒಳಗಾಗಿದೆ.


ಗುರುವಾರ ಚಾಲನೆ ಪಡೆದ ಈ ನಿಧಿ ಸಂಗ್ರಹ ಅಭಿಯಾನದ ವೇಷಧಾರಿ ಸಂಚಾರದ ಚಾಲನಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಪ್ರಮೀಳಾ, ಪ್ರಮುಖರಾದ ಸೀತಾರಾಮ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here