ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಶಾರದಾಪೂಜೆ

0

ಅಕ್ಷರವನ್ನು ಆರಾಧಿಸುವ ಪರಂಪರೆ ನಮ್ಮದೆಂಬುದು ಹೆಮ್ಮೆ : ರಾಕೇಶ ಕಮ್ಮಜೆ


ಪುತ್ತೂರು: ಯಾರೂ ಅಕ್ಷರ ದ್ವೇಷಿಗಳಾಗಬಾರದು. ಅಕ್ಷರವನ್ನು ಪ್ರೀತಿಸುತ್ತಾ ಸಾಗಿದಂತೆ ನಮ್ಮ ಜ್ಞಾನ ವೃದ್ಧಿಯಾಗುತ್ತಾ ಹೋಗುತ್ತದೆ. ಅಕ್ಷರವನ್ನು ಗೌರವಿಸುವ, ಆರಾಧಿಸುವ ಪರಂಪರೆಗೆ ನಾವು ಸೇರಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿರಬೇಕು. ಅಕ್ಷರ ಸರಸ್ವತಿಯ ವರಪುತ್ರ-ಪುತ್ರಿಯರಾಗಿ ನಾವು ಹೊರಹೊಮ್ಮಬೇಕು. ಆಗ ಸುಜ್ಞಾನ ನಮ್ಮದಾಗುತ್ತದೆ ಎಂದು ಅಂಬಿಕಾ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಶ್ರೀ ಶಾರದಾಪೂಜೆಯ ಪ್ರಯುಕ್ತ ಆಯೋಜಿಸಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.


ಪುಸ್ತಕಗಳನ್ನು ಓದುವುದು ಕೂಡ ಶ್ರೀ ಶಾರದಾ ದೇವಿಯ ಆರಾಧನೆಯೇ ಆಗಿದೆ. ಹಾಗಾಗಿ ಮಂತ್ರಗಳಿಂದಷ್ಟೇ ಶಾರದೆಯನ್ನು ಪೂಜಿಸಬಹುದು ಅಂದುಕೊಳ್ಳಬೇಕಾದದ್ದಿಲ್ಲ. ನಮ್ಮ ಆಸಕ್ತಿಯ ಯಾವುದೇ ಪುಸ್ತಕ, ಪತ್ರಿಕೆ ಓದುವುದು ಕೂಡ ಆಕೆಗೆ ನಮಿಸುವುದರ ಭಾಗವೇ ಆಗಿದೆ. ವಾರ್ಷಿಕವಾಗಿ ಒಮ್ಮೆ ಮಂತ್ರಪುಷ್ಪಗಳಿಂದ ಶಾರದೆಯನ್ನು ಪೂಜಿಸಿದರೆ ಉಳಿದ ದಿನಗಳಲ್ಲಿ ಅಕ್ಷರ ಅಧ್ಯಯನದ ಮೂಲಕ ಪೂಜಿಸಬಹುದು ಎಂದು ನುಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ನಮ್ಮ ಸನಾತನ ಧರ್ಮ ಅನೇಕ ಹಬ್ಬಗಳ ಆಚರಣೆಗೆ ನಮಗೆ ಅವಕಾಶ ಮಾಡಿಕೊಟ್ಟಿದೆ. ಪ್ರತಿಯೊಂದು ಆಚರಣೆಯೂ ನಮ್ಮಲ್ಲಿ ಒಂದು ಶಕ್ತಿಯನ್ನು ತುಂಬುತ್ತಾ ಸಾಗುತ್ತದೆ. ಧಾರ್ಮಿಕವಾದ ಚಟುವಟಿಕೆಗಳು ನಮ್ಮಲ್ಲಿ ಸಂಸ್ಕೃತಿ, ಸಂಸ್ಕಾರಗಳನ್ನು ತುಂಬುತ್ತವೆ ಎಂದರು.


ಧಾರ್ಮಿಕ ಉಪನ್ಯಾಸ ನೀಡಿದ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಮಾತನಾಡಿ, ಒಂಬತ್ತು ಅನ್ನುವುದಕ್ಕೆ ಹಿಂದೂ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಮಗುವೊಂದು ಜನಿಸುವುದು ನವ ಮಾಸಗಳ ನಂತರ. ಹಾಗೆಯೇ ನವ ಗ್ರಹ, ನವರಾತ್ರಿ, ನವ ಧಾನ್ಯ, ನವರತ್ನ, ನವರಸ ಹೀಗೆ ಒಂಬತ್ತರ ಮಹತ್ವ ಅಪಾರವಾದದ್ದು. ಒಂಬತ್ತು ದಿನಗಳ ಹಬ್ಬ ಒಬ್ಬ ತಾಯಿಯಾದವಳ ವಿಶ್ವರೂಪವನ್ನು ಅನಾವರಣಗೊಳಿಸುತ್ತದೆ ಎಂದರು.


ಕಾರ್ಯಕ್ರದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಭಜನೆ, ಸ್ತೋತ್ರಪಠಣ ನಡೆಯಿತು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ., ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ, ಉಪನ್ಯಾಸಕಿ ಶ್ರೀಕೀರ್ತನಾ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ಕಛೇರಿ ಮುಖ್ಯಸ್ಥೆ ಗಾಯತ್ರೀದೇವಿ, ಮಾಧ್ಯಮಕೇಂದ್ರ ನಿರ್ವಾಹಕ ಮೋಹನ ಆಚಾರ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳಿಂದ ಶ್ರೀಶಾರದಾಮಾತೆಗೆ ಪುಷ್ಪಾರ್ಚನೆ ನಡೆಯಿತು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here