ಪುತ್ತೂರು: ಮರಾಟಿ ಸೇವಾ ಸಂಘ ಹಾಗೂ ಮರಾಟಿ ಮಹಿಳಾ ಮತ್ತು ಯುವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅ.6ರಂದು ಕೊಂಬೆಟ್ಟಿನಲ್ಲಿರುವ ಮರಾಟಿ ಸೇವಾ ಸಂಘದ ಸಭಾ ಭವನದಲ್ಲಿ ನಡೆಯಿತು.
ಪ್ರಾರಂಭದಲ್ಲಿ ಅರ್ಚಕ ಆಶ್ಲೇಷ್ ಶಂಕರ್ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಿಳಾ ವೇದಿಕೆ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.
ಬಳಿಕ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆ (ಸಿಜಿಎಸ್‌ಟಿ) ಲೆಕ್ಕ ಪರಿಶೋಧನಾ ವಲಯ, ಉಡುಪಿ ಇದರ ಐ.ಆರ್.ಎಸ್. ಸಹಾಯಕ ಆಯುಕ್ತ ರಮೇಶ್ಚಂದ್ರ ಮಾತನಾಡಿ, ಸಾಧನೆ ಹಾಗೂ ವಿದ್ಯೆ ಇವತ್ತು ಎಲ್ಲರ ಸೊತ್ತಾಗಿದ್ದು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಹಿರಿಯರ ಪ್ರೋತ್ಸಾಹ ಅತ್ಯಗತ್ಯ. ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಅದೇ ರೀತಿ ಮರಾಟಿ ಸಮುದಾಯದ ಯುವಕರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ರಾಷ್ಟ್ರದ ಆರ್ಥಿಕ ಪ್ರಗತಿಗೆ ತಮ್ಮ ಕೊಡುಗೆ ನೀಡುವಂತೆ ಅವರು ಕರೆ ನೀಡಿದರು.
ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜಿನ ಆಯುರ್ವೇದ ಮನೋರೋಗ ಚಿಕಿತ್ಸಕಿ ಡಾ. ಅಕ್ಷತಾ ಅವರು ಮಾತನಾಡಿ, ಶರೀರ ಮತ್ತು ಮನಸ್ಸಿಗೆ ಹತ್ತಿರದ ಸಂಬಂಧವಿದ್ದು, ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಗ್ರಹಿಸುವಲ್ಲಿ ಗಮನ ಹರಿಸುವಂತೆ ಸಲಹೆ ನೀಡಿದ ಅವರು, ಅಭ್ಯಾಸ ಹಾಗೂ ವೈರಾಗ್ಯದಿಂದ ಮನಸ್ಸನ್ನು ನಿಗ್ರಹಿಸಬಹುದು. ವಿದ್ಯಾರ್ಥಿಗಳು ಕನಸು ಕಂಡು ಉತ್ತಮ ನಿರ್ಧಾರ ಕೈಗೊಳ್ಳುವುದು, ಶಿಸ್ತು, ಶ್ರದ್ಧೆ/ಭಕ್ತಿ, ಸಮರ್ಪಣಾ ಮನೋಭಾವ ಎಂಬ 5 ಸೂತ್ರವನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವಸಂತೆ ಸಲಹೆ ನೀಡಿದರು. ಖಿನ್ನತೆ, ಆತಂಕ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಪೇಕ್ಷಿಸದೇ ಅದನ್ನು ಪ್ರಾರಂಭಿಕ ಹಂತದಲ್ಲೇ ಸೂಕ್ತ ಕೌನ್ಸಿಲಿಂಗ್ ಮತ್ತು ಚಿಕಿತ್ಸೆಯ ಮೂಲಕ ಗುಣಪಡಿಸುವ ವಿಚಾರದಲ್ಲಿ ಹೆತ್ತವರು ಮತ್ತು ವಿದ್ಯಾರ್ಥಿಗಳು ಹಿಂಜರಿಕೆಯಿಲ್ಲದೆ ತಜ್ಞರ ಸಲಹೆ ಪಡೆಯುವಂತೆ ಕಿವಿ ಮಾತು ಹೇಳಿದರು.
ಗದ್ದಿಗೆ ಕರಾವಳಿ ಮರಾಟಿ ಸಮಾವೇಶದ ಗೌರವಾಧ್ಯಕ್ಷ ಡಾ. ಸುಂದರ್ ನಾಯ್ಕ್ ಮಾತನಾಡಿ, ಮುಂದಿನ ತಿಂಗಳು ಮೂಡಬಿದಿರೆಯಲ್ಲಿ ನಡೆಯಲಿರುವ ದ.ಕ., ಉಡುಪು, ಕೊಡಗು, ಕಾಸರಗೋಡು ಜಿಲ್ಲೆಗಳ ಮರಾಟಿ ಸಮುದಾಯದವರ ಬೃಹತ್ ಸಮಾವೇಶದ ರೂಪುರೇಷಗಳ ಬಗ್ಗೆ ಸಭೆಗೆ ವಿವರವಾದ ಮಾಹಿತಿಯನ್ನು ನೀಡಿದರು. ಮತ್ತು 33 ವರ್ಷಗಳ ಬಳಿಕ ನಡೆಯುತ್ತಿರುವ ಮರಾಟಿ ಸಮುದಾಯದವರ ಈ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸುವಲ್ಲಿ ಸಮುದಾಯದ ಸರ್ವ ಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರು.
ಸಂಘದ ಕಾನೂನು ಸಲಹಾ ಸಮಿತಿಯ ಸದಸ್ಯ ಮಂಜುನಾಥ್ ಎನ್.ಎಸ್ ಮಾತನಾಡಿ, ಮೂಡಬಿದಿರೆಯಲ್ಲಿ ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ 2024 ಇದಕ್ಕೆ ಸಂಬಂಧಿಸಿದಂತೆ ಪುತ್ತೂರು ಸಂಘ ನಡೆಸುತ್ತಿರುವ ಪೂರ್ವಭಾವಿ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ದುಗ್ಗಪ್ಪ ನಾಯ್ಕ ಬಡಾವು ಮಾತನಾಡಿ, ನಮ್ಮ ಜೀವನದಲ್ಲಿ ನಾವು ಪಿತೃ ಋಣ, ಗುರು ಋಣ, ದೇವ ಋಣ ಹಾಗೂ ಸಮಾಜದ ಋಣವನ್ನು ತೀರಿಸಲು ಸಾಧ್ಯವಿಲ್ಲ, ಆ ನಿಟ್ಟಿನಲ್ಲಿ ನಮ್ಮ ಕಾರ್ಯಚಟುವಟಿಕೆಗಳು ನಡೆಯಬೇಕು. ಪ್ರತಿಭಾ ಪುರಸ್ಕಾರಗೊಂಡ ವಿದ್ಯಾರ್ಥಿಗಳು ಮುಂದೆ ಈ ಸಂಘದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಸಂಘದ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ನೀಡುವಂತೆ ಹೇಳಿದರು.
ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಪರೀಕ್ಷೆಗಳಲ್ಲಿ ವಿಶೇಷ ಅಂಕ ಸಾಧನೆ ಮಾಡಿದ ಸಮಾಜದ ಪ್ರತಿಭಾನ್ವಿತ 62 ಮಂದಿ ವಿದ್ಯಾರ್ಥಿಗಳಿಗೆ ಸುಮಾರು ರೂ.50,000 ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳ ಪರವಾಗಿ ಅಂಶು ಕುಮಾರ್ ಸಂಸ್ಕೃತ ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಸಭೆಯ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾನಿಧಿಗೆ ದೇಣಿಗೆ:
ಸಂಘದ ಅಧ್ಯಕ್ಷ ಎನ್ ದುಗ್ಗಪ್ಪ ನಾಯ್ಕ ಬಡಾವುರವರ ಕುಟುಂಬದ ವತಿಯಿಂದ ಸಂಗ್ರಹಿಸಲಾದ ರೂ.50,500 ಹಾಗೂ ಮುಖ್ಯ ಅತಿಥಿ ಡಾ. ಅಕ್ಷತಾ ರೂ.5000, ರಮೇಶ್ಚಂದ್ರ ತೂ.7,೦೦೦ವನ್ನು ಮಾತೃ ಸಂಘದ ವಿದ್ಯಾನಿಧಿಗೆ ದೇಣಿಗೆ ನೀಡಿದರು. ಅಲ್ಲದೆ ಸಭಾ ಕಾರ್ಯಕ್ರಮದಲ್ಲಿ ವಿದ್ಯಾ ನಿಧಿಗೆ ದೇಣಿಗೆ ಸಂಗ್ರಹಿಸಲಾಗಿದ್ದು ಸಮಾಜ ಬಾಂಧವರು ದೇಣಿಗೆ ನೀಡಿ ಸಹಕರಿಸಿದರು.
ಗದ್ದಿಗೆ ಸಮಾವೇಶಕ್ಕೆ ದೇಣಿಗೆ:
ಮೂಡಬಿದರೆಯಲ್ಲಿ ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ 2024 ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ ರೂ.25,000 ಮಾಜಿ ಅಧ್ಯಕ್ಷ ಸುಂದರ ನಾಯ್ಕ ರೂ.25,000 ಈಶ್ವರ ನಾಯ್ಕ ನಗರ ರೂ.5000 ಹಾಗೂ ಈಶ್ವರ ನಾಯ್ಕ ಪಡೀಲು ರೂ.5000 ದೇಣಿಗೆ ನೀಡಿದರು.
ಗದ್ದಿಗೆ ಸಮಾವೇಶ ಹಾಡುಗಳ ಬಿಡುಗಡೆ:
ಮೂಡಬಿದಿರೆಯಲ್ಲಿ ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶದ ಥೀಂ ಸಾಂಗ್ ಮತ್ತು ಇದಕ್ಕೆ ಸಂಬಂಧಿಸಿದ ಇತರೇ ಹಾಡುಗಳು ಬಿಡುಗಡೆಗೊಂಡಿತು. ಎಲ್ಲಾ ಹಾಡುಗಳನ್ನು ಶೀನಪ್ಪ ನಾಯ್ಕ ಎಸ್. ನೆಲ್ಯಾಡಿ ರಚಿಸಿದ್ದು, ಪೂರ್ಣಿಮಾ ಲೋಕೇಶ್ ನಾಯ್ಕ ಸಂಗೀತ ನಿರ್ದೇಶನ ಮಾಡಿ ಹಾಡಿದ್ದಾರೆ. ಗಂಗಾಧರ ನಾಯ್ಕ ಕೌಡಿಚ್ಚಾರು ಮತ್ತು ಕಾರ್ತಿಕ್ ನಾಯ್ಕ ಆರ್ಯಾಪು ಇವರು ಕೋರಸ್‌ನಲ್ಲಿ ಧ್ವನಿ ಸೇರಿಸಿದ್ದಾರೆ. ರಾಜ್ ಮ್ಯೂಸಿಕ್ ಕಬಕ ಇವರಿ ಎಡಿಟಿಂಗ್ ಹಾಗೂ ಲೋಕೇಶ್ ನಾಯ್ಕ ಪುರುಷರಕಟ್ಟೆ ಹಾಗೂ ವೆಂಕಪ್ಪ ನಾಯ್ಕ ಆರ್ಯಾಪು ಸಹಕರಿಸಿದ್ದಾರೆ.
ಯುವ ವೇದಿಕೆಗೆ ಗುರುತಿನ ಚೀಟಿ ವಿತರಣೆ:
ಯುವ ವೇದಿಕೆ ಸದಸ್ಯರಿಗೆ ಕೊಡಮಾಡುವ ಗುರುತಿನ ಚೀಟಿಯನ್ನು ಯುವವೇದಿಕೆಯ ಅಧ್ಯಕ್ಷ ವಸಂತ ಆರ್ಯಾಪು ಹಾಗೂ ಕಾರ್ಯದರ್ಶಿ ವಿಖ್ಯಾತ್ ಬಳ್ಳಯವರಿಗೆ ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಸಂಘದ ಕೋಶಾಧಿಕಾರಿ ಮೋಹನ ನಾಯ್ಕ ಎಂ., ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಕಾರ್ಯದರ್ಶಿ, ಯುವ ವೇದಿಕೆ ಅಧ್ಯಕ್ಷ ವಸಂತ ಆರ್ಯಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶೋಧಾ ಕೃಷ್ಣ ನಾಯ್ಕ ಪ್ರಾರ್ಥಿಸಿದರು. ಸಂಘದ ಸಂಚಾಲಕ ಪೂವಪ್ಪ ನಾಯ್ಕ ಕುಂಞಿಕುಮೇರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಎಸ್. ಶೀನಪ್ಪ ನಾಯ್ಕ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಹಾಗೂ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಿತ್ತು.