ಗ್ರಾಮೀಣ ಸೇವೆಗಳು ಸ್ಥಗಿತ | ಪರದಾಡುತ್ತಿರುವ ನಾಗರಿಕರು
ಪುತ್ತೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿರುವ ಗ್ರಾಮೀಣಾಭಿವೃದ್ಧಿ,ಪಂಚಾಯತ್‌ರಾಜ್ ಇಲಾಖಾಧಿಕಾರಿಗಳು, ನೌಕರರು, ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಠ ಮುಷ್ಕರ ಮುಂದುವರಿದಿದ್ದು ಜಿಲ್ಲೆಗೆ ಸಂಬಂಧಿಸಿ ಅ.7ರಂದು ದ.ಕ.ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಮುಷ್ಕರ ನಡೆಯಿತು.
ಎರಡು ದಿನಗಳ ಕಾಲ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮುಷ್ಕರವನ್ನು ಅಂತ್ಯಗೊಳಿಸಿ ಅ.7ರಿಂದ ರಾಜ್ಯದಾದ್ಯಂತ ಆಯಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮುಷ್ಕರ ಮುಂದುವರಿದಿದ್ದು ಮಂಗಳೂರುನಲ್ಲಿ ದ.ಕ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.ಮುಷ್ಕರದಿಂದಾಗಿ ಪಂಚಾಯತ್ ಕಚೇರಿಗಳು ಬಂದ್ ಆಗಿದ್ದು ಕುಡಿಯುವ ನೀರು, ನೈರ್ಮಲ್ಯ ಹಾಗೂ ದಾರಿದೀಪ ನಿರ್ವಹಣೆ ಕಾರ್ಯ ಮಾತ್ರ ನಡೆದಿದೆ.ಇತರ ಸೇವೆಗಳು ಸ್ಥಗಿತಗೊಂಡಿದ್ದರಿಂದಾಗಿ ನಾಗರಿಕರು ಪರದಾಡುವಂತಾಗಿದೆ.
ಸಿಇಒ ಭೇಟಿ:
ಮುಷ್ಕರ ನಿರತರ ಬಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಽಕಾರಿ ಡಾ.ಆನಂದ್ ಭೇಟಿ ನೀಡಿ ಮನವಿ ಸ್ವೀಕರಿಸಿ, ಬೇಡಿಕೆಗಳ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಹರೀಶ್ ಕೆ.ಇ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಜಯ ಶಂಕರ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ., ಉಪಾಧ್ಯಕ್ಷ ಲಕ್ಷ್ಮಣ ಎಚ್.ಕೆ., ರೋಹಿಣಿ, ರಾಜ್ಯ ಪರಿಷತ್ ಪ್ರತಿನಿಽ ರಮೇಶ್, ಸಂಘಟನಾ ಕಾರ್ಯದರ್ಶಿ ಅವಿನಾಶ್ ಬಿ,ಆರ್.,ಗೌರವ ಸಲಹೆಗಾರ ಯಶವಂತ ಬೆಳ್ಚಡ, ಪಂಚ ನೌಕರರ ಸಂಘದ ಜಿಲ್ಲಾಧ್ಯಕ್ಷ ದಯಾನಂದ ನಾಯ್ಕ, ಪುತ್ತೂರು ತಾಲೂಕು ಅಧ್ಯಕ್ಷ ಹೊನ್ನಪ್ಪ ಸೇರಿದಂತೆ 450ಕ್ಕೂ ಅಧಿಕ ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.
ಅ.10ರಂದು ಸಭೆ:
ಗ್ರಾ.ಪಂ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಅ.10ರಂದು ಸಭೆ ನಡೆದು ಮಾತುಕತೆ ನಡೆಯಲಿದ್ದು ಅ.10ರ ತನಕ ಮುಷ್ಕರ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ ತಿಳಿಸಿದ್ದಾರೆ.