ಸರಕಾರಿ ಉದ್ಯೋಗ ಕೊಡಿಸುವುದಾಗಿ ಗೆಳತಿಯಿಂದಲೇ 13.11ಲಕ್ಷ ರೂ.ವಂಚನೆ- ಮಹಿಳೆಯಿಂದ ಉಪ್ಪಿನಂಗಡಿ ಪೊಲೀಸರಿಗೆ ದೂರು

0

ಉಪ್ಪಿನಂಗಡಿ: ಕಾಸರಗೋಡು ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಉದ್ಯೋಗ ಭರವಸೆ ನೀಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಜಾಲದ ಬಾಹು ಉಪ್ಪಿನಂಗಡಿಗೂ ವ್ಯಾಪ್ತಿಸಿದ್ದು, ಉದ್ಯೋಗ ಬಯಸಿದ ತನ್ನ ಗೆಳತಿಯಿಂದಲೇ 13,11,600/- ರೂಪಾಯಿ ಹಣ ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.


ಸಚಿತಾ ರೈ ಎಂಬಾಕೆಯ ವಿರುದ್ದ ರಕ್ಷಿತಾ ಎಂಬವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಕೇರಳ ರಾಜ್ಯದ ನೀರಾವರಿ ಇಲಾಖೆ ಅಥವ ಎಸ್‌ಬಿಐ ಬ್ಯಾಂಕಿನಲ್ಲಿ ಉದ್ಯೋಗ ಒದಗಿಸುವ ಅವಕಾಶವಿದೆ ಎಂದು ನಂಬಿಸಿ , ವಿವಿಧ ನೆಪಗಳನ್ನು ಮುಂದಿರಿಸಿ ವಿವಿಧ ಕಂತುಗಳಲ್ಲಿ ಒಟ್ಟು 13,11,600 ರೂಪಾಯಿ ಹಣವನ್ನು ಪಡೆಯಲಾಗಿದೆ ಎಂದೂ, ಸದ್ರಿ ಹಣದ ಪೈಕಿ 8,66,868 ನ್ನು ಬ್ಯಾಂಕ್ ಖಾತೆಯ ಮೂಲಕ ವರ್ಗಾಯಿಸಲಾಗಿದ್ದರೆ, ಉಳಿಕೆ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸಿರುತ್ತೇನೆಂದು ದೂರಿನಲ್ಲಿ ತಿಳಿಸಿದ್ದಾರೆ.


ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸಚಿತಾ ರೈ ಪ್ರಸಕ್ತ ವಿವಾಹಿತರಾಗಿ ಕಾಸರಗೋಡಿನ ಪೆರ್ಲದಲ್ಲಿ ಶಿಕ್ಷಕಿಯಾಗಿದ್ದು, ಅಲ್ಲಿನ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೋರ್ವನನ್ನು ವಿವಾಹಿತಳಾಗಿ ಸರಕಾರಿ ಉದ್ಯೋಗ ಒದಗಿಸಿಕೊಡಲು ತಾನು ಸಮರ್ಥಳೆಂದು ಬಿಂಬಿಸಿ ಹಾಗೂ ನಂಬಿಸಿ ತನಗೆ ಸರಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿ ಒಂದಷ್ಟು ಖರ್ಚು ತಗಲುತ್ತದೆ ಎಂದು ಮೊದಲನೇಯ ಕಂತು ಪಡೆದು, ಬಳಿಕ ವಿವಿಧ ನೆಪಗಳನ್ನು ಮುಂದಿರಿಸಿ ಒಟ್ಟು 13 ಲಕ್ಷಕ್ಕೂ ಮಿಕ್ಕಿದ ಹಣವನ್ನು ಪಡೆದಿರುತ್ತಾಳೆಂದು ತಿಳಿಸಿರುತ್ತಾರೆ.


ನಿವೃತ್ತಿ ಜೀವನವನ್ನು ಡೋಲಾಯಮಾನವಾಗಿಸಿದ ಈ ವಂಚನಾ ಜಾಲ
ರಕ್ಷಿತಾ ರವರ ತಂದೆ ನಿಗಮವೊಂದರ ಉದ್ಯೋಗಿಯಾಗಿದ್ದು , ಇತ್ತೀಚೆಗೆ ನಿವೃತಿಯಾಗಿರುತ್ತಾರೆ. ನಿವೃತ್ತಿಯ ವೇಳೆ ದೊರಕಿದ ಹಣದಲ್ಲಿ ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಮೊದಲ ಕಂತು ನೀಡಿದ್ದರು. ಬಳಿಕ ನಂಬಿಕೆಯನ್ನು ಮೂಡಿಸುವಂತೆ ಮತ್ತೆ ಮತ್ತೆ ಹಣವನ್ನು ಕೇಳಿದಾಗ , ಮೊದಲು ಕೊಟ್ಟ ಹಣದ ಸುರಕ್ಷತೆಯ ನೆಲೆಯಲ್ಲಿ ಮತ್ತೆ ಮತ್ತೆ ಹಣವನ್ನು ಪಾವತಿಸುತ್ತಾ ಹೋದ ಅವರು ಇದೀಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿದ್ದು, ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ.

ಉದ್ಯೋಗದ ಭರವಸೆಯನ್ನು ನೀಡಿ ಬಡಪಾಯಿಗಳಿಂದ ಹಣವನ್ನು ದೋಚುವ ಇಂತಹ ಜಾಲವನ್ನು ಮಟ್ಟ ಹಾಕಿ ವಂಚನೆಗೆ ಒಳಗಾದವರಿಗೆ ನ್ಯಾಯ ಒದಗಿಸುವ ಬಗ್ಗೆ ಸರಕಾರಿ ಯಂತ್ರ ಗಮನ ಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here