ನಿಡ್ಲೆ: ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆ-ಅರಣ್ಯಾಧಿಕಾರಿಗಳ ಕಾರ್ಯಾಚರಣೆ, ಒಣ ಮಾಂಸವಾಗಿ ಪರಿವರ್ತಿಸಿರುವುದು ಪತ್ತೆ

0

ಉಪ್ಪಿನಂಗಡಿ: ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಭೇಟೆ ನಡೆಯುತ್ತಿರುವ ಆರೋಪದ ಬೆನ್ನಲ್ಲೇ ಹಾಡು ಹಗಲೇ 4 ಮಂದಿ ಭೇಟೆ ಬೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಗುಂಡಿಕ್ಕಿ ಕೊಂದು ಒಣ ಮಾಂಸವನ್ನಾಗಿ ಪರಿವರ್ತಿಸಿದ ಘಟನೆಯನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ.


ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಅ.11ರಂದು ಬೆಳಿಗ್ಗೆ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಅದನ್ನು ತುಂಡು ಮಾಡಲಾಗಿ ಪಿಕ್‌ಅಪ್ ವಾಹನದ ಮೂಲಕ ಸಾಗಾಟ ಮಾಡಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿತ್ತು. ಬೂಡುಜಾಲು ಅರಣ್ಯ ಅಂಚಿನಲ್ಲಿ ಇರುವ ತೋಟಕ್ಕೆ ಬೃಹತ್ ಗಾತ್ರದ ಕಾಡುಕೋಣವೊಂದು ಬರುತ್ತಿತ್ತೆನ್ನಲಾಗಿದ್ದು, ಇದನ್ನೇ ಕಾದು ಕುಳಿತಿದ್ದ ಶಿಬಾಜೆ ಪರಿಸರದ ಹಾಗೂ ಶಿರಾಡಿ ಪರಿಸರದವರನ್ನು ಒಳಗೊಂಡ ಬೇಟೆಗಾರರ ತಂಡ ಗುರುವಾರ ರಾತ್ರಿ ಕಾಡುಕೋಣಕ್ಕೆ ಗುಂಡಿಕ್ಕಿದ್ದಾರೆ. ಗುಂಡೇಟು ತಿಂದ ಕಾಡುಕೋಣ ಓಡಿ ಹೋಗಿದ್ದು, ಮರುದಿನ ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಅನತಿ ದೂರದಲ್ಲಿ ನರಳಿಕೊಂಡಿದ್ದ ಕಾಡುಕೋಣವನ್ನು ಪತ್ತೆ ಹಚ್ಚಿ ಮತ್ತೆ ಗುಂಡು ಹಾರಿಸಿ ಅದನ್ನು ಸಾಯಿಸಿರುವುದಾಗಿದೆ.


ಗುಂಡು ಹೊಡೆದು ಸಾಯಿಸಿದ ಕಾಡುಕೋಣವನ್ನು ಅಲ್ಲೇ ತುಂಡು ಮಾಡಲಾಗಿ ಆರೋಪಿಗಳ ಪೈಕಿ ಒರ್ವನಾದ ರಾಜು ಮನೆಗೆ ಪಿಕ್‌ಅಪ್ ವಾಹನದಲ್ಲಿ ತಂದು ಅಲ್ಲಿ ಅದನ್ನು ಒಣ ಮಾಂಸವಾಗಿ ಪರಿವರ್ತಿಸಿ ಶೇಖರಿಸಿ ಇಡಲಾಗಿರುವುದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರ ತಂಡ ಪತ್ತೆ ಹಚ್ಚಿದೆ.


ಬೇಯಿಸಿ, ಒಣಗಿಸಿ ಕೇರಳಕ್ಕೆ ಮಾರಾಟ:
ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವ ನಿಡ್ಲೆ, ಶಿಬಾಜೆ, ಶಿರಾಡಿ ಪರಿಸರದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆಯಾಡುವ ತಂಡವೊಂದು ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಬಳಿಕ ಅದನ್ನು ಒಣ ಮಾಂಸವನ್ನಾಗಿ ಮಾಡಿ ಒಣಗಿಸಿ 3ರಿಂದ 5, 10 ಕೆ.ಜಿ.ಯ ಪ್ಯಾಕ್ ಮಾಡಿ ಕೇರಳ ಸಾಗಾಟ ಮಾಡಲಾಗುತ್ತಿದೆ. ಈ ರೀತಿಯಾಗಿ ಒಣಗಿಸಿದ ಮಾಂಸ 1 ಕೆ.ಜಿ.ಗೆ 1300 ರೂಪಾಯಿಯಿಂದ 1500 ರೂಪಾಯಿ ತನಕ ಬಾರೀ ಬೇಡಿಕೆಯಲ್ಲಿ ಮಾರಾಟ ನಡೆಯುತ್ತದೆ ಎಂದು ಹೇಳಲಾಗಿದ್ದು, ಇಲ್ಲಿನ ತಂಡವೊಂದು ಇದೇ ಕೃತ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಗಳೆಲ್ಲರೂ ಪರಾರಿಯಾಗಿದ್ದು, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳಿಂದ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here