ಉಪ್ಪಿನಂಗಡಿ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯಿತು ಅನುಮಾನಸ್ಪದ ನಡೆ-ಕಳ್ಳನೆಂಬ ಬಿಂಬ: ಮುರಿಯುತ್ತಿದೆಯೇ ಬೇಲಿ ಕಂಬ ?

0

ಉಪ್ಪಿನಂಗಡಿ: ನಸುಕಿನಲ್ಲಿ ಮನೆ ಬಾಗಿಲು ಬಡಿಯುವ, ಮೇಲ್ನೋಟಕ್ಕೆ ಕಳ್ಳತನದ ಯತ್ನವೆಂದೇ ಬಿಂಬಿಸಲ್ಪಡುವ ಪ್ರಕರಣ ನಡೆಯುತ್ತಿದ್ದ ಪೆರಿಯಡ್ಕದಲ್ಲಿ ಮತ್ತೆ ಯುವಕನೋರ್ವನ ಶಂಸಯಾಸ್ಪದ ಚಲನವಲನಗಳು ಈ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಲ ತಿಂಗಳ ಹಿಂದೆ, ಮನೆಗೆ ನುಗ್ಗುವ ವ್ಯಕ್ತಿ ನೇರವಾಗಿ ಮಹಿಳೆಯರು ಮಲಗುವ ಕೋಣೆಯನ್ನು ಪ್ರವೇಶಿಸಿರುವುದು, ಎಚ್ಚರಗೊಂಡಾಗ ಓಡಿ ತಪ್ಪಿಸಿಕೊಂಡಿರುವುದು ನಡೆದು ಸ್ಥಳೀಯ ಯುವಕರು ನಿದ್ದೆಗೆಟ್ಟು ರಾತ್ರಿಯಿಡೀ ಪತ್ತೆ ಕಾರ್ಯ ನಡೆಸುತ್ತಿದ್ದ ವಿದ್ಯಾಮಾನದ ನಡುವೆ, ಯುವತಿಯೋರ್ವರು ಸ್ಥಾನ ಮಾಡುತ್ತಿದ್ದ ವೇಳೆ ಕಿಟಕಿಯಿಂದ ಇಣುಕಲು ಹೋಗಿ ಜನರ ಕೈಗೆ ಸಿಕ್ಕಿ ಬಿದ್ದಿದ್ದ ಸ್ಥಳೀಯ ವ್ಯಾಪಾರಿ ಅಬ್ದುಲ್ ರಹಿಮಾನ್ ಎಂಬಾತ ಪೊಲೀಸರ ವಶವಾದ ಬಳಿಕ ಪರಿಸರದ ಮಂದಿ ಒಂದಷ್ಟು ಸಮಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಈ ಮಧ್ಯೆ ಮತ್ತೆ ಇಂತಹದ್ದೇ ಕೃತ್ಯಗಳು ಸಂಭವಿಸಲು ಪ್ರಾರಂಭವಾಗಿದ್ದು, ಕಳೆದೆರಡು ದಿನಗಳ ಹಿಂದೆ ವ್ಯಕ್ತಿಯೋರ್ವ ನಸುಕಿನ ಜಾವ 3.30 ರ ಸುಮಾರಿಗೆ ಪೆರಿಯಡ್ಕದ ಜಂಕ್ಷನ್ ಬಳಿಯೇ ರಸ್ತೆಯಲ್ಲಿ ವ್ಯಕ್ತಿಯೋರ್ವರು ಬರುವುದನ್ನು ಕಂಡು ಪೊದೆ ಗಿಡಗಳ ಎಡೆಯಲ್ಲಿ ಅಡಗಿಕೊಳ್ಳುವುದು, ಅಲ್ಲಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವುದು ಸಮೀಪದ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಅಲ್ಲದೇ, ಈತ ಅಲ್ಲಿಂದ ಓಡುವ ಸಂದರ್ಭ ಮಹಿಳೆಯರು ಧರಿಸುವ ಚಪ್ಪಲಿಯನ್ನು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಯುವಕರ ಗುಂಪಿನೊಳಗೆ ಮಾತಿನ ಚಕಮಕಿ ನಡೆದಿದೆ ಎಂದೂ ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಈಗಾಗಲೇ ಹಲವು ಮನೆಗಳಿಗೆ ನುಗ್ಗಿದ್ದ ಪ್ರಕರಣಗಳು ಘಟಿಸಿದ್ದರೂ ಯಾವೊಂದೂ ಮನೆಯಲ್ಲಿಯೂ ಕಳ್ಳತನ ನಡೆಯದಿರುವುದು ಪ್ರಕರಣದಲ್ಲಿ ನಿಗೂಢತೆಯನ್ನು ಮೂಡಿಸಿದೆ. ಮಾತ್ರವಲ್ಲದೆ ಒಂದೆರಡು ಮನೆ ಮಂದಿ ಪೊಲೀಸರಿಗೆ ದೂರು ನೀಡಿರುವುದನ್ನು ಬಿಟ್ಟರೆ ಬಹುತೇಕ ಪ್ರಕರಣಗಳು ಸದ್ದಿಲ್ಲದೆ ಶಮನವಾಗಿದೆ. ಒಟ್ಟಾರೆ ನಸುಕಿನಲ್ಲಿ ಮನೆಗೆ ನುಗ್ಗುವ ಕೃತ್ಯದಿಂದಾಗಿ ಪೆರಿಯಡ್ಕದ ನಿವಾಸಿಗರಿಗೆ ನೆಮ್ಮದಿ ಇಲ್ಲದಂತಾಗಿದೆ.

ಅಧಿಕೃತ ದೂರು ಬಂದಿಲ್ಲ-ಎಸ್‌ಐ ಅವಿನಾಶ್:
ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕೆಗೆ ಮಾಹಿತಿ ನೀಡಿದ ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್‌ರವರು. ಈ ಬಗ್ಗೆ ಯಾರೂ ಅಧಿಕೃತ ದೂರು ನೀಡಿಲ್ಲ. ಮೌಖಿಕ ದೂರು ನೀಡಿದ ಅನುಸಾರ ಘಟನಾ ಸ್ಥಳಕ್ಕೆ ಹೋಗಿ ಸಿಸಿ ಕ್ಯಾಮರಾ ಪರಿಶೀಲನೆ ಮಾಡಲಾಗಿದೆ. ಈ ಹಿಂದೆ ಅಲ್ಲಿ ಮನೆಗೆ ನುಗ್ಗಿದ ಆರೋಪದಡಿ ಬಂಧಿತನಾಗಿದ್ದ ವ್ಯಕ್ತಿಯ ಮೇಲೂ ಸಂದೇಹವಿರಿಸಿ ಪರಿಶೀಲನೆ ನಡೆಸಲಾಗಿದೆ. ಆದರೆ ದೃಶ್ಯಾವಳಿಯಲ್ಲಿ ಸೆರೆಯಾದ ವ್ಯಕ್ತಿಗೂ, ಈ ಹಿಂದಿನ ಪ್ರಕರಣದ ಆರೋಪಿಗೂ ಹೊಂದಿಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here