ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಗಾಗಿ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಲಿದೆ-ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪ

0

ಪುತ್ತೂರು: ಗೃಹಲಕ್ಷ್ಮೀ ಯೋಜನೆಗಾಗಿ ಹಣಕ್ಕೆ ತೊಂದರೆ ಆಗುತ್ತಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ 12ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಲಿದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.


ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಅ.18ರಂದು ಪುತ್ತೂರಿಗೆ ಆಗಮಿಸಿದ ಅವರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುಳ್ಯದಲ್ಲಿ ಸುಮಾರು 3000 ಸೇರಿದಂತೆ ದ.ಕ ಜಿಲ್ಲೆಯಲ್ಲಿ 40,000ಕ್ಕೂ ಮಿಕ್ಕಿ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಅಧಿಕಾರ ಹಿಡಿಯಲು ನೀಡಿದ ಗ್ಯಾರಂಟಿ ಯೋಜನೆಗಾಗಿ ಅದನ್ನು ಬಳಸುತ್ತಿದ್ದಾರೆ. ರೂ.1.18ಕೋಟಿಗಿಂತಲೂ ಹೆಚ್ಚು ಬಿಪಿಎಲ್ ಕಾರ್ಡ್‌ದಾರರಿದ್ದು ಗೃಹಲಕ್ಷ್ಮೀ ಯೋಜನೆಗೆ ಈಗ ಹಣಕ್ಕೆ ತೊಂದರೆ ಆಗುತ್ತಿದ್ದು 12 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಮುಂದಾಗಿದ್ದಾರೆ. ಬಡವರು, ಸಾಮಾನ್ಯ ಕೂಲಿ ಕಾರ್ಮಿಕರ ಬಿಪಿಎಲ್ ಕಾರ್ಡ್ ರದ್ದಾದರೆ ಅಂತ್ಯೋದಯದಲ್ಲಿ ಕೇಂದ್ರ ಸರಕಾರ ನೀಡುವ 5 ಕೆಜಿ ಉಚಿತ ಅಕ್ಕಿ, ಚಿಕಿತ್ಸೆಗಾಗಿ ರೂ.5 ಲಕ್ಷ ನೀಡುವ ಆಯುಸ್ಮಾನ್ ಭಾರತ್, ಬಡವರ ಮಕ್ಕಳ ಶಾಲಾ ದಾಖಲಾತಿ, ಅರೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ರಿಯಾಯಿತಿ ಸೇರಿದಂತೆ ಕೇಂದ್ರ ಸರಕಾರದಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಸಿಗುವ ಎಲ್ಲಾ ಸವಲತ್ತುಗಳು ರದ್ದಾಗಲಿದೆ. ಗೃಹಲಕ್ಷ್ಮೀ ಯೊಜನೆಗಾಗಿ ಬಡವರಿಗಾಗಿ ಕೇಂದ್ರ ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ತೊಂದರೆ ಉಂಟಾದರೆ ಬಹುದೊಡ್ಡ ಅನಾಹುತ ಉಂಟಾಗಲಿದೆ. ಅದಕ್ಕಾಗಿ ಬಿಜೆಪಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು.


ಕಾಂಗ್ರೆಸ್ ಸರಕಾರ ಪಂ.ರಾಜ್ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ:
ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರವಾಗಿದ್ದು ಅ ಸರಕಾರ ವ್ಯವಸ್ಥಿತವಾಗಿ ನಡೆದರೆ ಎಲ್ಲಾ ಗ್ರಾ.ಪಂಗಳಿಗೂ ಹೆಚ್ಚಿನ ಅನುದಾನ, ಅವಕಾಶ, ಅಧಿಕಾರ ಕೊಟ್ಟರೆ ಸಾಮಾನ್ಯ ಜನರ ಸಮಸ್ಯೆ ಪರಿಹಾರ ನೀಡುವ ಅಧಿಕಾರ ವಿಕೇಂದ್ರಕರಣದ ಕ್ಪಲನೆಯಿದೆ. ಅದಕ್ಕಾಗಿ ನರೇಂದ್ರ ಮೋದಿ ಸರಕಾರ 15ನೇ ಹಣಕಾಸು ಯೋಜನೆಯಲ್ಲಿ ನೇರವಾಗಿ ಪಂಚಾಯತ್‌ಗೆ ಅನುದಾನ ನೀಡುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸ್ವಚ್ಚ ಭಾರತ್ ಯೋಜನೆಯಲ್ಲಿ ಪರಿಪೂರ್ಣ ಶೌಚಾಲಯ, ದೀನ್ ದಯಾಲ್ ಯೋಜನೆ ಮೂಲಕ ವಿದ್ಯುತ್ ಇಲ್ಲದಿರುವ ಎಲ್ಲಾ ಮನೆಗಳಿಗೂ ವಿದ್ಯುತ್ ಪಂಚಾಯತ್ ಮೂಲಕ ಅನುಷ್ಠಾನ ಮಾಡಿದೆ. ಗ್ರಾ.ಪಂಗೆ ಸ್ವಂತ ಸರಕಾರದಂತೆ ಕೆಲಸ ಮಾಡಲು ಅವಕಾಶ ನೀಡುತ್ತಿದೆ. ಅಧಿಕಾರ ವಿಕೇಂದ್ರಿಕರಣದ ಮೂಲಕ ಜನ ಸಾಮಾನ್ಯರಿಗೆ ಸವಲತ್ತು ದೊರೆಯಲು ಬಿಜೆಪಿ ಸರಕಾರ ಅವಕಾಶ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ತನ್ನ ಕಟುವಾದ ನಿರ್ಧಾರದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸ ಮಾಡುತ್ತಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿ ಜನರಿಗೆ ನೀಡುತ್ತಿದ್ದ 9/11ನ್ನು ನೇರವಾಗಿ ಪಂಚಾಯತ್‌ನಿಂದ ಕಿತ್ತು ಪ್ರಾಧೀಕಾರಕ್ಕೆ ನೀಡಿದೆ. ಪ್ರಾಧಿಕಾರದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾದಾಗ ಜನ ಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ. ರಾಜ್ಯ ಸರಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದರಿಂದ ಜನ ಸಾಮಾನ್ಯರಿಗೆ ಸಮಸ್ಯೆ ಉಂಟಾಗಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.


ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾ.ಪಂಗಳ ಸಬಲೀಕರಣಕ್ಕೆ ಸಾಕಷ್ಟು ಯೋಜನೆ ತಂದಿದೆ. 2008ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆದ್ದು ನಾನು 2008-09ರಲ್ಲಿ ಬಜೆಟ್‌ನಲ್ಲಿ ಗ್ರಾ.ಪಂ ಸದಸ್ಯರ ಗೌರವಧನ ನೀಡುವಂತೆ ಮನವಿ ಮಾಡಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರೂ.27ಕೋಟಿ ಅನುದಾನ ನೀಡಿದ್ದು ರಾಜ್ಯದ 94,000 ಗ್ರಾ.ಪಂ ಸದಸ್ಯರಿಗೆ ಗೌರವಧನ ದೊರೆತಿದೆ. 250 ಇದ್ದ ಗೌರವಧನ ಈಗ ಸಾವಿರಕ್ಕೆ ಏರಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸದಸ್ಯರು, ಉಪಾಧ್ಯಕ್ಷರು, ಅಧ್ಯಕ್ಷರ ಗೌರವ ಧನ ಹೆಚ್ಚಿಸವುದಾಗಿ ನಾನು ಭರವಸೆ ನೀಡಿದ್ದು ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾದಾಗಾಗ ಅದು ಏರಿಕೆಯಾಗಿದೆ. ಸದಸ್ಯರ ಗೌರವ ಧನ 100ರಿಂದ ಏರಿಕೆ ಮಾಡಲು ನಾನೇ ಕಾರಣ. ಅಲ್ಲದೆ ರಾಜ್ಯದಲ್ಲಿ ನಮ್ಮ ಸರಕಾರದ ಅವಧಿಯಲ್ಲಿ ತಾ.ಪಂ ಜಿ.ಪಂಗಳಿಗೆ ವಿಶೇಷ ಅನುದಾನ ನೀಡಿದೆ ಎಂದರು.


ನೀತಿ ಸಂಹಿತೆ ಮುಗಿದ ಬಳಿಕ ದೊಡ್ಡಮಟ್ಟದಲ್ಲಿ ಹೋರಾಟ:
ಬಿಪಿಎಲ್ ಕಾರ್ಡ್ ರದ್ದು ಮಾಡುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ಪೂಜಾರಿಯವರು, ಮನಸ್ಸೊ ಇಚ್ಚೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ. ಅರ್ಹತೆ ಮೇಲೆ ಮಾಡಬೇಕು. ಬಿಪಿಎಲ್ ಕಾರ್ಡ್ ಪಡೆಯಲು ಅದರದ್ದೆ ಆದ ಮಾನದಂಡವಿದೆ. ವಾಸ್ತವ ಸ್ಥಿತಿ ನೋಡಿಕೊಳ್ಳಬೇಕು. ಬಡವರು ಮನೆ ನಿರ್ಮಿಸಲು ಬ್ಯಾಂಕ್‌ನಿಂದ ಸಾಲ ಪಡೆಯುತ್ತಾರೆ. ಸಾಲ ಐಟಿ ಸರ್ಟಿಫಿಕೇಟ್ ಪಡೆಯುತ್ತಾನೆ. ಮನೆ ಕಟ್ಟಲು ಅನಿವಾರ್ಯವಾಗಿ ಸಾಲ ಮಾಡುತ್ತಾರೆ. ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ. ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ರದ್ದು ಮಾಡಬೇಕು. ರಾಜ್ಯದಲ್ಲಿರುವ ಸುಮಾರು 1.18ಕೋಟಿ ಬಿಪಿಎಲ್ ಕಾರ್ಡ್‌ದಾರರಲ್ಲಿ ಸುಮಾರು 12ಲಕ್ಷ ಕಾರ್ಡ್‌ಗಳು ರದ್ದಾಗಲಿದೆ ಎಂಬ ಸೂಚನೆ ದೊರೆತಿದೆ. ಉಡುಪಿಯಲ್ಲಿ 38,000, ದ.ಕ ಜಿಲ್ಲೆಯಲ್ಲಿ 40,000 ಬಿಪಿಎಲ್ ಕಾರ್ಡ್ ರದ್ದಾಗಲಿದೆ. ರಾಜ್ಯದಲ್ಲಿ 12 ಲಕ್ಷ ಕಾರ್ಡ್ ರದ್ದು ಮಾಡುವುದು ಆರೋಗ್ಯಕರ ಲಕ್ಷಣ ಅಲ್ಲ. ಬಡವರು ಮನೆ ಕಟ್ಟಲು ಸಾಲ ಮಾಡಿರಬಹುದು. ಅಂತವರನ್ನು ಹುಡಿಕಿ ಬಿಪಿಎಲ್ ರದ್ದು ಮಾಡುವುದು ಸರಿಯಲ್ಲ. ಶ್ರೀಮಂತರ ಕಾರ್ಡ್‌ಗಳನ್ನು ರದ್ದು ಮಾಡಲಿ. ಸರಕಾರದ ಈ ನಿಲುವಿನ ವಿರುದ್ದ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಬಿಜೆಪಿ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದರು.


9/11ನ್ನು ನಮ್ಮ ಸರಕಾರ ತೆಗೆದಿಲ್ಲ:
ಪಂಚಾಯತ್‌ನಲ್ಲಿ ನೀಡುತ್ತಿದ್ದ 9/11 ಅಧಿಕಾರವನ್ನು ನಾವು ತೆಗೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಕಳೆದ ಅವಧಿಯಲ್ಲಿ ಬೊಮ್ಮಾಯಿ ಸರಕಾರ 9/11ನ್ನು ಪಂಚಾಯತ್‌ನಿಂದ ತೆಗೆದಿದ್ದರೆ ಇವರು ಯಾಕೆ ಮಾಡಬೇಕಿತ್ತು. ಈಗ ಅವರೇ ಪಂಚಾಯತ್‌ನಿಂದ ತೆಗೆದು ಪ್ರಾಧಿಕಾರಕ್ಕೆ ನೀಡಿದ್ದಾರೆ. ತೆಗೆಯಿರಿ ಎಂದು ಯಾರೂ ಮೆರವಣಿಗೆ ಮಾಡಿಲ್ಲ. ವಿನಾ ಕಾರಣ ತೆಗೆದಾಗ ಜನರಿಗೆ ತೊಂದರೆ ಆಗುತ್ತಿದೆ. ವಿವಿಧ ಪಿಂಚಣಿ ಯೋಜನೆಗಳನ್ನು ಪಂಚಾಯತ್‌ನಲ್ಲಿ ಪಿಡಿಓ ಪರಿಶೀಲನೆ ನಡೆಸಿ 24 ಗಂಟೆಯೊಳಗೆ ನೀಡುತ್ತಾರೆ. ಜನನ, ಮರಣ ಪ್ರಮಾಣ ಪತ್ರ ನೀಡಲು ಪಂಚಾಯತ್ ಮೂಲಕ ನೀಡಲು ಬಿಜೆಪಿ ಸರಕಾರ ಅವಕಾಶ ನೀಡಿದೆ. ಇದಕ್ಕಾಗಿ ಪಿಡಿಓಗಳನ್ನು ಬಿ ದರ್ಜೆಗೆ ಏರಿಸಲು ಕ್ರಮಕೈಗೊಳ್ಳಲಾಗಿತ್ತು. ಇದರ ಭಾಗವಾಗಿ ಪಿಡಿಓಗಳ ಪ್ರತಿಭಟನೆ ನಡೆಸಿದ್ದಾರೆ.


ವಿಧಾನ ಪರಿಷತ್‌ನ ಉಪ ಚುನಾವಣೆಯಲ್ಲಿ ಅಂಕಿ ಅಂಶಗಳ ಪ್ರಕಾರ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ನಿಖರವಾಗಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಆದರೂ ಇನ್ನಷ್ಟು ಹೆಚ್ಚಿನ ಮತಗಳಿಂದ ಗೆಲುವು ಆಗಬೇಕು. ಈ ಚುನಾವಣೆಯಲ್ಲಿ ಅತ್ಯಂತ ಹಿಂದುಳಿದ ಸಣ್ಣ ಸಮುದಾಯ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಅವಕಾಶ ನೀಡಿರುವುದು ಪಕ್ಷದ ಕ್ರಾಂತಿಕಾರಿ ಕಲ್ಪಣೆಯಾಗಿದೆ. ಚುನಾವಣೆಯಲ್ಲಿ ಪಕ್ಷದಲ್ಲಿ ಇರುವ ಮತಕ್ಕಿಂತ ಅಧಿಕ ಮತಗಳು ಚಲಾವಣೆಯಾಗಿ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಬರಲಿದ್ದಾರೆ ಎಂದರು. ಪಂಚಾಯತ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಚುನಾವಣಾ ಉಸ್ತುವಾರಿ ನಿತೀಶ್ ಶಾಂತಿವನ, ಸಹ ಸಂತೋಷ್ ರೈ ಕೈಕಾರ, ಸಂತೋಷ್ ರೈ, ಅರುಣ್ ಕುಮಾರ್ ಪುತ್ತಿಲ, ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here