ಅನಾಥರಿಗೆ ನೀಡುವ ಸಹಕಾರದಿಂದ ಅಲ್ಲಾಹುನಿಂದ ಸಂತೃಪ್ತಿ ದೊರೆಯಲಿದೆ: ಜಿಫ್ರಿ ತಂಙಳ್
ಉಪ್ಪಿನಂಗಡಿ: ಅನಾಥರು, ಅಸಹಾಯಕರಿಗೆ ಸಹಕಾರ ನೀಡುವುದರ ಜೊತೆಗೆ ಒಬ್ಬಾತ ವ್ಯಕ್ತಿ ಯಾವುದೋ ಕೆಟ್ಟ ಚಟಕ್ಕೆ ಬಿದ್ದು, ದಾರಿ ತಪ್ಪಿದ್ದರೆ ಆತನನ್ನು ಸರಿ ದಾರಿಗೆ ತರುವುದು ಕೂಡಾ ಉತ್ತಮ ಸೇವೆಯಲ್ಲಿ ಗುರುತಿಸಲ್ಪಡುತ್ತದೆ. ಈ ರೀತಿಯ ಸಹಕಾರ, ಸಹಾಯ ಮಾಡುವ ವ್ಯಕ್ತಿಗೆ ಅಲ್ಲಾಹುವಿನ ಕಡೆಯಿಂದ ಯಾವತ್ತೂ ಸಂಪ್ರೀತಿ ದೊರಕಲಿದೆ ಎಂದು ಬೆಳ್ತಂಗಡಿ ದಾರುಸ್ಸಲಾಂ ಸೆಂಟರ್ ಅಧ್ಯಕ್ಷ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಹೇಳಿದರು.
ಅವರು ಅ. 18ರಂದು ಗಂಡಿಬಾಗಿಲು ಮಸೀದಿ ಸಭಾಂಗಣದಲ್ಲಿ ನಡೆದ ಬೆಳ್ತಂಗಡಿ ದಾರುಸ್ಸಲಾಂ ಸೆಂಟರ್‌ನ 8ನೇ ವಾರ್ಷಿಕೋತ್ಸವ ನಿಮಿತ್ತದ ಸದಸ್ಯತ್ವ ಅಭಿಯಾನ ಮತ್ತು ಸಂಶುಲ್ ಉಲೇಮಾ ಉರೂಸ್ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 2016ರಲ್ಲಿ ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಆರಂಭವಾದ ದಾರುಸ್ಸಲಾಂ ಸಂಸ್ಥೆಯ ಅಡಿಯಲ್ಲಿ ಇಂದು ದಾರುಸ್ಸಲಾಂ ದಅವಾ ಕಾಲೇಜು, ಮಹಿಳಾ ಶರೀಅತ್ ಕಾಲೇಜು, ದರ್ಸ್ ತರಗತಿಗಳು ನಡೆಯುತ್ತಿದ್ದು, ಈ ಸಂಸ್ಥೆ ಕೇವಲ ವಿದ್ಯಾಭ್ಯಾಸ, ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಸಮುದಾಯದಲ್ಲಿ ಇರುವ ಬಡವರು, ಅನಾಥರು, ಅಸಹಾಯಕರನ್ನು ಹುಡುಕಿ ತಂದು ಇಲ್ಲಿ ಅವರಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವ ಸೇವೆ ನಡೆಯುತ್ತಿದೆ. ಮುಂದೆ ಇನ್ನಷ್ಟು ಯೋಜನೆ ಅನುಷ್ಠಾನ ಆಗಲಿದೆ ಎಂದರು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಶೌಕತ್ ಫೈಝಿ ಮಾತನಾಡಿ ಸಮುದಾಯದ ಒಳಿತಿಗಾಗಿ ನಡೆಯುತ್ತಿರುವ ಸಂಸ್ಥೆಯ ಬಗ್ಗೆ ನಾವು ಹೆಮ್ಮೆ ಪಡಬೇಕಾಗಿದೆ, ಈ ಸಂಸ್ಥೆಯಲ್ಲಿ ಸದಸ್ಯರಾಗುವ ಮೂಲಕ ಅಲ್ಲಿನ ಸೇವೆಯಲ್ಲಿ ನಾವು ಭಾಗಿಗಳಾಗಬೇಕು ಎಂದರು.
ಸಂಸ್ಥೆಯ ಇಸಾಕ್ ಕೌಸರಿ, ಅಶ್ರಫ್ ಯಮಾನಿ ಮಾತನಾಡಿದರು. ಸಮಾರಂಭದಲ್ಲಿ ಗಂಡಿಬಾಗಿಲು ಮಸೀದಿ ಸಮಿತಿ ಖಜಾಂಚಿ ಹಸೈನಾರ್ ಹಾಜಿ, ಆತೂರು ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಿ.ಕೆ. ಮಹಮ್ಮದ್ ಹಾಜಿ, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕ ಅಬ್ದುಲ್ ಅಝೀಜ್, ಬಡಿಲ ಹುಸೇನ್, ಸಿಹಾಬ್ ಅಝ್‌ಹರಿ ಮತ್ತಿತರರು ಉಪಸ್ಥಿತರಿದ್ದರು.
ಗಂಡಿಬಾಗಿಲು ಮಸೀದಿ ಸಮಿತಿ ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್ ಸ್ವಾಗತಿಸಿ, ದಾರುಸ್ಸಲಾಂ ಸೆಂಟರ್‌ನ ಅಬ್ದುಲ್ ರಜಾಕ್ ಬೆಳ್ತಂಗಡಿ ವಂದಿಸಿದರು. ಇಸ್ಮಾಯಿಲ್ ತಂಙಳ್ ಕಾರ್ಯಕ್ರಮ ನಿರೂಪಿಸಿದರು.