ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಆರೋಪ ಸಾಬೀತು:ಅಪರಾಧಿಗೆ 5 ವರ್ಷ ಸಜೆ,ದಂಡ

0

ಪುತ್ತೂರು: ಪ್ರೌಢಶಾಲೆಯಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎ-ಟಿಎಸ್‌ಸಿ-1) ತೀರ್ಪು ನೀಡಿದೆ.


ಬೆಳ್ತಂಗಡಿ ಹತ್ಯಡ್ಕ ಅರಸಿನಮಕ್ಕಿ ಪಡ್ಡಾಯಿಬೆಟ್ಟು ಮೂಲದವರಾಗಿದ್ದು ಪ್ರಸ್ತುತ ಕಲ್ಲಮುಂಡ್ಕೂರು ನಿವಾಸಿಯಾಗಿರುವ ಶಿಕ್ಷಕ ಗುರುವ ಮೊಗೇರ ಯಾನೆ ಗುರುವ ಎಂ.ಪಿ. (49ವ.)ಶಿಕ್ಷೆಗೊಳಗಾದ ಅಪರಾಧಿ.


ವಿದ್ಯಾರ್ಥಿನಿಯರಿಗೆ ರಜೆ ಬೇಕಿದ್ದರೆ ಅಥವಾ ಪಠ್ಯಕ್ಕೆ ಸಂಬಂಧಪಟ್ಟಂತೆ ಏನಾದರೂ ಸಂದೇಹವಿದ್ದರೆ ಶಾಲೆಯಲ್ಲಿರುವ ಪ್ರತ್ಯೇಕ ಕೊಠಡಿಗೆ ಬರಲು ಹೇಳುತ್ತಿದ್ದ ಆರೋಪಿ, ಕೆಲವೊಮ್ಮೆ ಒಬ್ಬೊಬ್ಬ ವಿದ್ಯಾರ್ಥಿನಿಯರನ್ನೇ ರೂಮಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಪ್ರಧಾನ ಶಿಕ್ಷಕರಲ್ಲಿ ದೂರು ನೀಡಿದ್ದರು. ವಿದ್ಯಾರ್ಥಿನಿಯೊಬ್ಬರಿಗೆ ಸತತ ಲೈಂಗಿಕ ಕಿರುಕುಳ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತರ 5 ಮಂದಿ ವಿದ್ಯಾರ್ಥಿನಿಯರೂ ಆರೋಪಿ ವಿರುದ್ಧ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎ-ಟಿಎಸ್‌ಸಿ-1) ನ್ಯಾಯಾಧೀಶರಾದ ಡಿ.ವಿನಯ್ ಸಮಗ್ರ ವಿಚಾರಣೆ ನಡೆಸಿ, ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಅಪರಾಧಿಗೆ ಐಪಿಸಿ 354 (ಲೈಂಗಿಕ ಕಿರುಕುಳ)ರಡಿ 1 ವರ್ಷ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಸಜೆ, ಕಲಂ 10 (ಪೊಕ್ಸೋ)ರಡಿ 5 ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಜೆ, ಕಲಂ 12 (ಪೊಕ್ಸೋ)ರಡಿ 3 ವರ್ಷ ಸಾದಾ ಸಜೆ ಮತ್ತು 3 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಅಪರಾಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಗರ ಮಹಿಳಾ ಠಾಣೆಯ ಉಪನಿರೀಕ್ಷಕ ಶಿವರುದ್ರಮ್ಮ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ವಾದಿಸಿದ್ದರು.ಆರೋಪಿಗೆ ಮದುವೆಯಾಗಿದ್ದು ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ.

7 ತಿಂಗಳಲ್ಲೇ ತೀರ್ಪು

ದೇಶಾದ್ಯಂತ ಪೋಕ್ಸೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಪ್ರಕರಣದಲ್ಲಿ ಕೇವಲ 7 ತಿಂಗಳಲ್ಲೇ ತೀರ್ಪು ಹೊರಬಿದ್ದಿದೆ. 2024ರ ಮಾ.12ರಂದು ಮುಖ್ಯ ಶಿಕ್ಷಕರು ನೀಡಿದ್ದ ದೂರಿನಂತೆ ಮಂಗಳೂರು ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ದೇಶಾದ್ಯಂತ ಪೋಕ್ಸೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಪ್ರಕರಣದಲ್ಲಿ ಕೇವಲ 7 ತಿಂಗಳಲ್ಲೇ ತೀರ್ಪು ಹೊರಬಿದ್ದಿದೆ. 2024ರ ಮಾ.12ರಂದು ಮುಖ್ಯ ಶಿಕ್ಷಕರು ನೀಡಿದ್ದ ದೂರಿನಂತೆ ಮಂಗಳೂರು ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here