ಪುತ್ತೂರು:ತೆಂಕಿಲ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ ಕ್ಯಾಂಪಸ್‌ನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲ, ಕಿಶೋರ, ತರುಣ ವಿಭಾಗದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕವನ್ನು ಹೊಂದಿರುವ ದಕ್ಷಿಣ ಮಧ್ಯ ಕ್ಷೇತ್ರ ಮೇಲುಗೈ ಸಾಧಿಸಿದೆ.
ಕಳೆದ 4 ದಿನಗಳಿಂದ ಬಾಲ, ಕಿಶೋರ, ತರುಣ ಎಂಬ ಮೂರು ವಿಭಾಗದಲ್ಲಿ ಪಂದ್ಯಾಟ ನಡೆಯಿತು. 6ರಿಂದ 8ನೇ ತರಗತಿ, 9ರಿಂದ 10ನೇ ತರಗತಿ ಮತ್ತು ಪಿಯುಸಿ ವಿಭಾಗದಲ್ಲಿ ಪಂದ್ಯಾಟ ನಡೆಯಿತು.ಸುಮಾರು 606 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.ಮೂರು ವಿಭಾಗದಲ್ಲೂ ದಕ್ಷಿಣ ಮಧ್ಯ ಕ್ಷೇತ್ರ ಮೇಲುಗೈ ಸಾಧಿಸಿದೆ.ಇದರಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ತ, ಶಾರದಾ, ಮುಂಡಾಜೆ, ಕೈರಂಗಳ ಶಾಲೆಗಳ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದಾರೆ.ಅ.19ರಂದು ಬೆಳಿಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.
ಗೆಲುವಿಗಿಂತ ಪಂದ್ಯ ಯಶಸ್ವಿ ಮುಖ್ಯ :
ವಿದ್ಯಾಭಾರತಿ ಕರ್ನಾಟಕದ ಸಂಘಟನಾ ಮಂತ್ರಿ ಉಮೇಶ್ ಅವರು ಮಾತನಾಡಿ ಪಂದ್ಯಾಟದಲ್ಲಿ ಗೆಲುವು ಮತ್ತು ಗೆಲ್ಲಿಸುವವರ ಅವಶ್ಯಕತೆ ಹೇಗೆ ಇರುತ್ತದೆಯೋ ಅದೇ ರೀತಿ ಪಂದ್ಯ ಯಶಸ್ವಿಯಾಗುವುದೂ ಮುಖ್ಯ.ಈ ಯಶಸ್ವಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಗಿದೆ.ಅದೇ ರೀತಿ ಪಂದ್ಯಾಟದಲ್ಲಿ ಗೆಲುವನ್ನು ಸಾಧಿಸಿದವರು ತಮ್ಮ ಗೆಲುವಿಗೆ ಕಾರಣಕರ್ತರಾದ ತಮ್ಮ ಸಂಸ್ಥೆ, ಶಿಕ್ಷಕರು, ಪೋಷಕರು, ತರಬೇತುದಾರರಿಗೆ ತಮ್ಮ ಗೆಲುವನ್ನು ಸಮರ್ಪಣೆ ಮಾಡುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ತೋರಿಸಬೇಕೆಂದರು.ಇವತ್ತು ಶಿಕ್ಷಣಕ್ಕೆ ಎಲ್ಲೂ ಅಂತ್ಯವಿಲ್ಲ.ಜೀವನ ಪೂರ್ತಿ ಕಲಿಯುವುದೇ ಶಿಕ್ಷಣ.ಅದೇ ರೀತಿ ಕ್ರೀಡೆಯನ್ನು ಆಯೋಜಿಸಿದ ವಿವೇಕಾನಂದ ವಿದ್ಯಾ ಸಂಸ್ಥೆಯಿಂದ ಉತ್ತಮ ಆತಿಥ್ಯ ಸಿಕ್ಕಿದೆ.ಅವರಿಗೆ ವಿದ್ಯಾಭಾರತಿ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದವರು ಹೇಳಿದರು.
ಪಂದ್ಯಾಟದಲ್ಲಿ ಆಕ್ಷೇಪವೇ ಇಲ್ಲದ್ದು ವಿಶೇಷ:
ಖೇಲ್‌ಕೂದ್ ಪ್ರಮುಖ್ ಕಿಶೋರ್ ಚೌಹಾನ್ ಅವರು ಮಾತನಾಡಿ ಕ್ರೀಡಾಪಟುಗಳ ಸಹಕಾರದಿಂದಾಗಿ ಪಂದ್ಯಾಟ ಉತ್ತಮವಾಗಿ ಮೂಡಿಬಂದಿದೆ.ಎಲ್ಲೂ ವಿರೋಧ ಅಥವಾ ಆಕ್ಷೇಪವೇ ಕಂಡು ಬಂದಿಲ್ಲ.ಪಂದ್ಯಾಟದಲ್ಲಿ ಯಾರು ಪರಾಭವ ಆಗುವುದಿಲ್ಲ.ಇಲ್ಲಿ ಗೆಲ್ಲುವ ಮತ್ತು ಗೆಲ್ಲಿಸುವ ತಂಡ ಮಾತ್ರ ಇರುವುದು.ಗೆಲ್ಲಿಸಿದ ತಂಡ ಮುಂದಿನ ದಿನ ಪ್ರಯತ್ನ ಪಟ್ಟು ಖುದ್ದು ಗೆಲುವು ಸಾಽಸಬೇಕೆಂದರು.
ಎಲ್ಲರಿಗೂ ಕೃತಜ್ಞತೆ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೃಷ್ಣ ಭಟ್ ಅವರು ಮಾತನಾಡಿ ಪಂದ್ಯಾಟದಲ್ಲಿ ಕ್ರೀಡಾ ಸ್ಪೂರ್ತಿಯಲ್ಲಿ ಭಾಗವಹಿಸುವುದು ಮುಖ್ಯ. ಅದು ಇಲ್ಲಿ ನಡೆದಿದೆ.ಬೇರೆ ಬೇರೆ ರಾಜ್ಯಗಳಿಂದ ಬಂದಿರುವವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ ಆತಿಥ್ಯ ನೀಡಿದೆ.ನಮ್ಮ ಆತಿಥ್ಯ ಸ್ವೀಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ತಂಡದ ತರಬೇತುದಾರರು ಮತ್ತು ಕ್ರೀಡಾಪಟುಗಳು ಕ್ರೀಡಾ ಕೂಟದ ಅಭಿಪ್ರಾಯ ಮಂಡಿಸಿದರು.ದಕ್ಷಿಣ ಮಧ್ಯಕ್ಷೇತ್ರಿಯ ಖೇಲ್ ಕೂದ್ ಪ್ರಮುಖ್ ಸತ್ಯನಾರಾಯಣ, ಖೇಲ್ ಕೂದ್ ಪ್ರಮುಖ್ ಸಂಯೋಜಕ್ ಹರಿದಾಸ್, ವಿವೇಕಾನಂದ ಶಾಲೆಯ ಸಂಚಾಲಕ ರವಿನಾರಾಯಣ, ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ರಮೇಶ್ಚಂದ್ರ ನಾಯಕ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಪ್ರಜಾ ಮತ್ತು ಬಳಗ ಸರಸ್ವತಿ ಪ್ರಾರ್ಥನೆ ಮಾಡಿದರು.ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ ಸ್ವಾಗತಿಸಿದರು.ದಕ್ಷಿಣ ಕನ್ನಡ ಖೇಲ್ ಕೂದ್ ಪ್ರಮುಖ್ ಕರುಣಾಕರ್ ವಂದಿಸಿದರು.ವೆಂಕಟೇಶ್‌ಪ್ರಸಾದ್ ಸಂಪನ್ನ ಮಂತ್ರ ಪಠಿಸಿದರು.ಕವಿತಾ ಕೆ.ಜಿ., ಸುಜಾತ ಕೆ ಕಾರ್ಯಕ್ರಮ ನಿರೂಪಿಸಿದರು.
ವಾಲಿಬಾಲ್ ಸ್ಪರ್ಧಾ ಫಲಿತಾಂಶ:
14ರ ವಯೋಮಾನದ ಹುಡುಗರ ವಿಭಾಗದಲ್ಲಿ ವೆಸ್ಟ್ ಯು.ಪಿ (ಪ್ರ), ದಕ್ಷಿಣ ಮಧ್ಯ ಕ್ಷೇತ್ರ (ದ್ವಿ), ದಕ್ಷಿಣ ಕ್ಷೇತ್ರ (ತೃ), ಬಿಹಾರ್ ಕ್ಷೇತ್ರ (ಚ), ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ (ಪ್ರ), ದಕ್ಷಿಣ ಮಧ್ಯಕ್ಷೇತ್ರ (ದ್ವಿ), ಬಿಹಾರ ಕ್ಷೇತ್ರ( ತೃ), ಪಶ್ಚಿಮ ಕ್ಷೇತ್ರ(ಚ), 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಈಸ್ಟ್ ಯು.ಪಿ (ಪ್ರ), ದಕ್ಷಿಣ ಮಧ್ಯ ಕ್ಷೇತ್ರ(ದ್ವಿ), ವೆಸ್ಟ್ ಯು.ಪಿ(ತೃ), ದಕ್ಷಿಣ ಕ್ಷೇತ್ರ(ಚ), ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ(ಪ್ರ), ದಕ್ಷಿಣ ಮಧ್ಯ ಕ್ಷೇತ್ರ(ದ್ವಿ), ರಾಜಸ್ತಾನ ಕೇತ್ರ(ತೃ), ವೆಸ್ಟ್ ಯು.ಪಿ(ಚ), 19ರ ವಯೋಮಾನದ ಬಾಲಕರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ(ಪ್ರ), ಈಸ್ಟ್ ಯು.ಪಿ(ದ್ವಿ), ಉತ್ತರಪ್ರದೇಶ(ತೃ), ವೆಸ್ಟ್ ಯು.ಪಿ(ಚ), ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ(ಪ್ರ), ದಕ್ಷಿಣ ಕ್ಷೇತ್ರ(ದ್ವಿ), ರಾಜಸ್ತಾನ ಕ್ಷೇತ್ರ(ತೃ), ಉತ್ತರ ಪ್ರದೇಶ(ಚ) ಸ್ಥಾನ ಪಡೆದು ಕೊಂಡಿದೆ. ಈ ಸಂದರ್ಭ ವೈಯುಕ್ತಿ ಬಹುಮಾನವನ್ನೂ ನೀಡಲಾಯಿತು.