ಸಂತ ಫಿಲೋಮಿನಾ ಪ. ಪೂ ಕಾಲೇಜು:ಜೋಟ ಕಾರ್ಯಕ್ರಮ

0

ಸ್ಕೌಟ್ ಮತ್ತು ಗೈಡ್ ವ್ಯಕ್ತಿತ್ವ ವಿಕಸನಕ್ಕೆ ಮೂಲ ಹಾದಿ: ರೆ ಫಾ ಅಶೋಕ್ ರಾಯನ್ ಕ್ರಾಸ್ತಾ

ಪುತ್ತೂರು : ಪುತ್ತೂರು ಸ್ಥಳೀಯ ಸಂಸ್ಥೆಗಳು ಮತ್ತು ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಆಯೋಜನೆಯಲ್ಲಿ ಅ.20 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜೋಟ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಫಿಲೋಮಿನಾ ಪ .ಪೂ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಶಿಸ್ತಿನ ಜೀವನಕ್ಕೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಉತ್ತಮ ಸಹಕಾರಿ. ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ವ್ಯಕ್ತಿತ್ವ ವಿಕಸನಕ್ಕೆ ಮೂಲ ಹಾದಿ ಎಂದರು.


ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ದ. ಕ ಜಿಲ್ಲಾ ಸಂಸ್ಥೆಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಮಾತನಾಡಿ ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜೊತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀಧರ್ ರೈ ಮಾತನಾಡಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲಾ ಶಾಲಾ ಮಕ್ಕಳು ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.


ಅತಿಥಿಗಳಾದ ಸಾಯಿಕುಮಾರ್ ಮಹಾಂತೇಶ್ ಮತ್ತು ಮಂಜುನಾಥ್ ಕುರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಗೈಡ್ಸ್ ವಿಭಾಗದ ಜಿಲ್ಲಾ ಸಂಘಟನಾ ಆಯುಕ್ತರು ಮತ್ತು ಗೈಡ್ ತರಬೇತುದಾರರಾದ ಸುನಿತಾ. ಎಂ ಸ್ವಾಗತಿಸಿ, ಪ್ರಾಸ್ತವಿಕಾ ಮಾತುಗಳನ್ನಾಡಿದರು.
ಎಲ್ಲಾ ಬೋಧಕ ಬೋಧಕೇತರ ವರ್ಗದವರು ಮತ್ತು ಎಲ್ಲಾ ವಿದ್ಯಾ ಸಂಸ್ಥೆಗಳ ಬನ್ನಿ, ಕಪ್ ಬುಲ್ ಬುಲ್, ಸ್ಕೌಟ್ ಗೈಡ್ ಹಾಗೂ ರೋವರ್ಸ್ ರೇಂಜರ್ಸ್ ಗಳು ಉಪಸ್ಥಿತರಿದ್ದರು .ಎಲ್ಲಾ ವಿದ್ಯಾರ್ಥಿಗಳು ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಾಲೇಜಿನ ರೇಂಜರ್ಸ್ ಗಳಾದ ನಿತ್ಯ ಮತ್ತು ಬಳಗ ಸ್ಕೌಟ್ ಪ್ರಾರ್ಥನಾ ಗೀತೆ ಹಾಡಿದರು. ಕಾಲೇಜಿನ ಉಪನ್ಯಾಸಕರಾದ ಶರತ್ ಆಳ್ವ ಕಾರ್ಯಕ್ರಮ ನಿರೂಪಿಸಿ , ರೋವರ್ ಸ್ಕೌಟ್ ನಾಯಕ ಹಾಗೂ ಉಪನ್ಯಾಸಕ ಚಂದ್ರಾಕ್ಷ ವಂದಿಸಿದರು.

LEAVE A REPLY

Please enter your comment!
Please enter your name here