ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಶಿಕ್ಷಕರನ್ನು ಆಧುನಿಕ ಶಿಕ್ಷಣ ನೀತಿ ಮತ್ತು ಕಲಿಕಾ ವಿಷಯಗಳಲ್ಲಿ ಪರಿಣತರನ್ನಾಗಿ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಮಕ್ಕಳಿಗೆ ಆಧುನಿಕ ರೀತಿಯಲ್ಲಿ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ಈ ಮೂರು ದಿನಗಳ ರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡಲಾಗಿದೆ. ಮೊದಲನೇ ದಿನ ತರಬೇತಿಯನ್ನು ಚೆನ್ನೈನ ಪ್ರತಿಷ್ಠಿತ ಶಿಕ್ಷಣ ತರಬೇತುದಾರ ವೆಂಕಟೇಶ್ವರ್, ಎರಡನೇ ದಿನ ಮಂಗಳೂರಿನ ಪ್ರಖ್ಯಾತ ತರಬೇತುದಾರ ರಫೀಕ್ ಮಾಸ್ಟರ್, ಕೊನೆಯದಂದು ದೆಹಲಿಯ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ನ ಶಿಕ್ಷಣ ತಜ್ಞೆ ರುಚಿಯಾದವ್ ರವರು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಜನಪ್ರಿಯ ಶಾಲೆಯ ಶಿಕ್ಷಕರಿಗೆ ಚಟುವಟಿಕೆ ಆಧಾರಿತ ಕಲಿಕೆ, ತರಗತಿ ನಿರ್ವಹಣೆ, ವಿದ್ಯಾರ್ಥಿಗಳ ಮನೋವಿಜ್ಞಾನ ಹೀಗೆ ಹಲವಾರು ವಿಚಾರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ತರಬೇತುದಾರ ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಮಂಗಳೂರು ಇವರನ್ನು ಸನ್ಮಾನಿಸಲಾಯಿತು ಮತ್ತು ತರಬೇತಿ ಪಡೆದ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.
ಶಾಲೆಯಲ್ಲಿ ಪ್ರತಿ ವರ್ಷ ಎರಡು ಬಾರಿ ಈ ರೀತಿಯ ರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನಡೆಸಿಕೊಂಡು ಬರುತ್ತಿದ್ದು ಇದು ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಸಹಾಯವಾಗಲಿದೆ.