ನೆಲ್ಯಾಡಿ: ಇಕೋ ಕಾರು ಹಾಗೂ ಆಕ್ಟಿವಾ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಆಕ್ಟಿವಾ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಮೂವರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅ.20ರಂದು ಸಂಜೆ ನಡೆದಿದೆ.
ಸ್ಕೂಟರ್ ಸವಾರ ಬೆದ್ರೋಡಿ ನಿವಾಸಿ ಚೇತನ್ ಕುಮಾರ್(33ವ.), ಸಹಸವಾರರಾಗಿದ್ದ ಲಿಖಿತ್ (10) ಮತ್ತು ಅದ್ವಿತ್ (4) ಗಾಯಗೊಂಡವರಾಗಿದ್ದಾರೆ. ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಮಹಮ್ಮದ್ ರಫೀಕ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಇಕೋ ಕಾರನ್ನು (ಕೆಎ 21, ಝೆಡ್ 9373) ಅವರು ಬೆದ್ರೋಡಿಯಲ್ಲಿ ಒಮ್ಮೆಲೇ ರಸ್ತೆಯ ಎಡ ಬದಿಗೆ ಚಲಾಯಿಸಿದ ಪರಿಣಾಮ ಕಾರು ಮುಂದಿನಿಂದ ಚೇತನ್ ಕುಮಾರ್ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಕ್ಟಿವಾ ಸ್ಕೂಟರ್ (ಕೆಎ 21, ಇಸಿ 7595)ನ ಹಿಂಬದಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಸ್ಕೂಟರ್ ಪಲ್ಟಿಯಾಗಿ ಸವಾರ ಚೇತನ್ಕುಮಾರ್, ಸಹ ಸವಾರರಾದ ಲಿಖಿತ್, ಅದ್ವಿತ್ ಗಾಯಗೊಂಡಿದ್ದಾರೆ. ಈ ಪೈಕಿ ಚೇತನ್ ಕುಮಾರ್ ಹಾಗೂ ಅದ್ವಿತ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿ ಚಿಕಿತ್ಸೆ ನೀಡಿ, ಲಿಖಿತ್ನನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಚೇತನ್ಕುಮಾರ್ ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.