ಬಡಗನ್ನೂರು: ಶಾಲಾ ಶಿಕ್ಷಣ ಮತ್ತು &ಸಾಕ್ಷರತೆ ಇಲಾಖೆ- ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಪಟ್ಟೆ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವು ಅ.22 ರಂದು ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಿತು.
ಸವಣೂರು ವಲಯ ನೋಡೆಲ್ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಇಚ್ಛೆ ಶಕ್ತಿ ಹಾಗೂ ಬದ್ದತೆ ಮೂಲಕ ಊರವರ ಸಹಕಾರ ಮತ್ತು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ರವರ ಪರಿಶ್ರಮ ಮತ್ತು ಆಡಳಿತ ಮಂಡಳಿ ಇಲಾಖೆಯೊಂದಿಗೆ ಕೈಜೋಡಿಸುವುದರಿಂದ ಇಷ್ಟೊಂದು ಉತ್ತಮವಾಗಿ ಕ್ರೀಡಾಕೂಟ ಅಯೋಜಿಸಲು ಸಾಧ್ಯವಾಗಿದೆ. ಸರ್ಕಾರ ಕ್ರೀಡಾಕೂಟ ನಡೆಸಲು ಎಷ್ಟು ಧನಸಹಾಯ ನೀಡುತ್ತದೆ ಎಂಬುದು ಗೊತ್ತಿರುವ ವಿಷಯ. ಈ ನಿಟ್ಟಿನಿಂದ ನಮ್ಮ ವಿದ್ಯಾರ್ಥಿಗಳಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಾಗವಹಿಸಲು ಸಾಧ್ಯವಾಗುವುದಿಲ್ಲ ಎಂಬುದು ವಿಶಾಧನೀಯ ಎಂದರು.
ಕಾರ್ಯಕ್ರಮವನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿ ಉದ್ಘಾಟಿಸಿ ಕ್ರೀಡೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಪೂರಕವಾಗಿದೆ .ಮಕ್ಕಳ ಭಾಗವಹಿಸಿವಿಕೆ ಮುಖ್ಯವಾದದ್ದು ಸೋಲು ಗೆಲುವು ಸಾಮಾನ್ಯ. ಮುಂದೆ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಜಯ ಸಾಧಿಸಿ ಎಂದರು.
ಕುಂಬ್ರ ಕ್ಲಸ್ಟರ್ ಮುಖ್ಯಸ್ಥೆ ಶಶಿಕಲಾ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ಪಟ್ಟೆ ವಿದ್ಯಾಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಸರ್ವೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಸಹದೇವ ಮಾತನಾಡಿ ನನ್ನ ಹುಟ್ಟೂರಿನ ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಯಲ್ಲಿ ಇಷ್ಟೊಂದು ಉತ್ತಮ ರೀತಿಯಲ್ಲಿ ಕ್ರೀಡಾಕೂಟ ಅಯೋಜಿಸಿರುವುದು ಹೆಮ್ಮೆ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಗಳ ನಿರ್ದೇಶಕ ನಹುಷ್ ಪಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಮುಖ್ಯವಾದುದು ವೈದ್ಯೋ ನಾರಾಯಣೋ ಹರಿ ಎಂಬಂತೆ ನಾವು ಮಾಡುವ ಕರ್ಮವನ್ನು ಮಾಡುತ್ತ ಇರಬೇಕು ಮಿಕ್ಕಿದ್ದು ಭಗವಂತನದ್ದು ಎಂದರು.
ಪಟ್ಟೆ ವಿದ್ಯಾಸಂಸ್ಥೆಯ ನಿರ್ದೇಶಕ ಶಿರೀಷ್ ಪಿ.ಬಿ ಅತಿಥಿಗಳಿಗೆ ಹೂ ಹಾಗೂ ಪುಸ್ತಕ ನೀಡಿ ಸ್ವಾಗತಿಸಿದರು.ವೇದಿಕೆಯಲ್ಲಿ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಎಸ್. ಡಿ.ಯಂ.ಸಿ ಅಧ್ಯಕ್ಷ ಕೇಶವ ಪ್ರಸಾದ ನೀಲಗಿರಿ, ಪ್ರತಿಭಾ ಪ್ರೌಢಶಾಲಾ ಎಸ್. ಡಿ.ಯಂ.ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಕರ್ನಾಟಕ ರಾಜ್ಯ ದೈ.ಶಿಕ್ಷಣ ಶಿಕ್ಷಕರ ಸಂಘದ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಸವಣೂರು ಕ್ಲಸ್ಟರ್ ಮುಖ್ಯಸ್ಥೆ ಪರಮೇಶ್ವರಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಸ್ವಾಗತಿಸಿದರು.ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ ಸಿ ಯಚ್ ವಂದಿಸಿದರು.ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ರಾಷ್ಟ್ರಮಟ್ಟದ ಕ್ರೀಡಾಪಟು ತನುಶ್ರೀ ರೈ ಬಡಕಾಯೂರು ಕ್ರೀಡಾ ಪ್ರತಿಜ್ಞೆಗೈದರು
ಕಾರ್ಯಕ್ರಮದಲ್ಲಿ 39 ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 39 ಶಾಲೆಯ ಸುಮಾರು 900 ಕ್ರೀಡಾ ಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.