ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ರಂಗದ ಸಾಧಕರು ಮತ್ತು ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಈ ಬಾರಿ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕಲ್ಕೂರಾ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಮ್ಮ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮಾಡಿದ ಹಲ ಬಗೆಯ ಸೇವಾ ಕಾರ್ಯಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಬಹುಮುಖೀ ಸಾಧಕ ಕಲ್ಕೂರ:
ನವೆಂಬರ್ 16,1960 ರಂದು ಉಡುಪಿಯ ಸಗ್ರಿಯಲ್ಲಿ ಮಂಜುನಾಥ ಕಲ್ಕೂರ ಮತ್ತು ಲಲಿತಾ ಕಲ್ಕೂರ ದಂಪತಿಗೆ ಹಿರಿಯ ಪುತ್ರನಾಗಿ ಜನಿಸಿದ ಪ್ರದೀಪ ಕುಮಾರ ಕಲ್ಕೂರ ಪ್ರಾಥಮಿಕ ಶಿಕ್ಷಣವನ್ನು ಕಡಿಯಾಳಿ ಶಾಲೆ, ಪ್ರೌಢಶಾಲೆಯನ್ನು ಕಮಲಾ ಬಾಯಿ ಹೈಸ್ಕೂಲ್ ನಲ್ಲಿ ಪೂರೈಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ಬಳಿಕ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೊಮಾ ಪದವೀಧರರಾದರು. ಕಲ್ಕೂರ ಎಡ್ವರ್ಟೈಸರ್ಸ್ ಸಮೂಹ ಸಂಸ್ಥೆಗಳನ್ನು ಮಂಗಳೂರಿನಲ್ಲಿ ಆರಂಭಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಜೊತೆ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿರಂತರ ಐದು ಅವಧಿಗಳಿಗೆ ಅವಿರೋಧವಾಗಿ ಆಯ್ಕೆಗೊಳ್ಳುವ ಮೂಲಕ ಅತ್ಯಂತ ಯಶಸ್ವೀ ಸಾಹಿತ್ಯಪರ ಕೆಲಸಗಳು, ಸಮ್ಮೇಳನಗಳನ್ನು ಆಯೋಜಿಸಿ ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರರಾದರು. ಇದಲ್ಲದೆ ತನ್ನದೇ ನೇತೃತ್ವದ ಕಲ್ಕೂರ ಪ್ರತಿಷ್ಠಾನ ಮೂಲಕ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಕಳೆದ ನಾಲ್ಕು ದಶಕಗಳಿಂದ ಶ್ರೀ ಕ್ಷೇತ್ರ ಕದ್ರಿಯ ಆವರಣದಲ್ಲಿ ಆಯೋಜಿಸಿ ಮಕ್ಕಳಲ್ಲಿ ರಾಷ್ಟ್ರೀಯ ಹಾಗೂ ಧಾರ್ಮಿಕ ಚಿಂತನೆ ಬೆಳೆಸುವ ಕಾಯಕದಲ್ಲಿ ತೊಡಗಿರುವರು. ಕನ್ನಡ ರಾಜ್ಯೋತ್ಸವ, ಕಾರಂತ ಹುಟ್ಟು ಹಬ್ಬ, ಸಾವಯವ ಕೃಷಿ ಸಂತೆ, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಯಕ್ಷಗಾನ, ಸಾಹಿತಿ – ಕಲಾವಿದರ ಸಂಸ್ಮರಣೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಜೋಡಿಸಿಕೊಂಡು, ಹಿರಿ ಕಿರಿಯ ಪ್ರತಿಭೆಗಳನ್ನು ಗೌರವಿಸುವ ಸತ್ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಕವನ, ಪ್ರಬಂಧ, ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕಲ್ಕೂರ ಪ್ರಕಾಶನದ ಮೂಲಕ ಯಕ್ಷಗಾನ ಸಹಿತ ಅನೇಕ ಪುಸ್ತಕಗಳ ಪ್ರಕಾಶನ ವನ್ನೂ ಮಾಡಿರುವರು.
ಉಡುಪಿಯ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಪರಮಾಪ್ತ ಶಿಷ್ಯರಾಗಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸಮಿತಿಯ ಗೌರವ ಕಾರ್ಯದರ್ಶಿಯಾಗಿ, ಶಾರದಾ ಸಮೂಹ ವಿದ್ಯಾ ಸಂಸ್ಥೆ ಸಹಿತ ಇನ್ನೂ ಅನೇಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಪೋಷಕರಾಗಿ ಸೇವಾನಿರತರಾಗಿರುವ ಕಲ್ಕೂರರದು ಬಹುಮುಖೀ ವ್ಯಕ್ತಿತ್ವ. ಇದಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.ತಿರುಪತಿ ತಿರುಮಲ ದೇವಸ್ಥಾನ ಕೊಡಮಾಡುವ ‘ಪುರಂದರ ದಾಸಾನುಗ್ರಹ ಪ್ರಶಸ್ತಿ’ , ಉಡುಪಿ ಶ್ರೀಕೃಷ್ಣ ಮಠದ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’, ಸಹಿತ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
ಕದ್ರಿ ದೇವಳದಲ್ಲಿ ಪ್ರಶಸ್ತಿ ಪ್ರದಾನ:
ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ 12ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ್ವಾದಶ ಸರಣಿಯ ಉದ್ಘಾಟನಾ ಸಮಾರಂಭ ನ.11ರಂದು ನಡೆಯಲಿದ್ದು ಅಂದು ಪ್ರದೀಪ ಕುಮಾರ್ ಕಲ್ಕೂರರು ಯಕ್ಷಾಂಗಣದ ರಾಜ್ಯೋತ್ಸವ ಗೌರವ ಸ್ವೀಕರಿಸುವರು. ಬಳಿಕ,ನ.17ರವರೆಗೆ ರಾಜಾ ದಂಡಕ, ಕಚ – ದೇವಯಾನಿ, ಸೈಂಧವ ವಧೆ, ತ್ರಿಶಂಕು ಸ್ವರ್ಗ, ಬಿನದ ದಾಂಪತ್ಯ, ಸುದರ್ಶನೋಪಖ್ಯಾನ, ಸತೀ ಶಕುಂತಳೆ ಮತ್ತು ‘ರೆಂಜೆ ಬನೊತ ಲೆಕ್ಯೆಸಿರಿ (ತುಳು)’ ಯಕ್ಷಗಾನ ತಾಳಮದ್ದಳೆಗಳು ಜರಗಲಿವೆ ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.