ಜಾತಿ-ಮತ ಬಿಟ್ಟು ಪಕ್ಷಾತೀತವಾಗಿ ಸಹಭಾಗಿಗಳಾಗೋಣ: ಅಶೋಕ್ ರೈ
ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಅಂತರ್ ವಿವಿ ಕ್ರೀಡಾಕೂಟ ‘ಕ್ರಾಸ್ ಕಂಟ್ರಿ ರೇಸ್’ ಆಯೋಜನೆಗೊಂಡಿದ್ದು, ಇದರಿಂದ ಉಪ್ಪಿನಂಗಡಿಯ ಹೆಸರನ್ನು ದೇಶಾದ್ಯಂತ ಪಸರಿಸಲು ಅವಕಾಶ ಸಿಕ್ಕಿದಂತಾಗಿದೆ. ಆದ್ದರಿಂದ ಈ ಕ್ರೀಡಾಕೂಟದಲ್ಲಿ ಜಾತಿ-ಮತ ಭೇದವನ್ನು ಮರೆತು, ಪಕ್ಷಾತೀತವಾಗಿ ಎಲ್ಲರೂ ಸಹಭಾಗಿಗಳಾಬೇಕು. ಈ ಮೂಲಕ ಎಲ್ಲರೂ ಇದರ ಯಶಸ್ಸಿಗೆ ಕಾರಣಕರ್ತರಾಗಬೇಕು ಎಂದು ಕಾಲೇಜಿನ ಅಧ್ಯಕ್ಷರು, ಶಾಸಕರಾದ ಅಶೋಕ್ ಕುಮಾರ್ ರೈ ತಿಳಿಸಿದರು.
ಅ. 26ರಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಸರಕಾರಿ ಕಾಲೇಜಿಗೆ ರಾಷ್ಟ್ರ ಮಟ್ಟದ ಕ್ರೀಡೆ ಆಯೋಜನೆ ಮಾಡಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಉಪ್ಪಿನಂಗಡಿಯು ದೇಶ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಇದರಲ್ಲಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಹೀಗಿರುವಾಗ ಇಂತಹ ಅವಕಾಶವನ್ನು ನಾವುಗಳು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಮುಂದಾಗಬೇಕು. ಇದಕ್ಕೆ ಬೇಕಾದ ಅನುದಾನವನ್ನು ಸರಕಾರದಿಂದ ಒದಗಿಸಿಕೊಡಲು ನಾನು ಬದ್ಧನಿದ್ದೇನೆ ಎಂದರಲ್ಲದೆ, ಎಲ್ಲರನ್ನು ಸೇರಿಸಿಕೊಂಡು ಸಮಿತಿಯೊಂದನ್ನು ರಚಿಸಲು ಸೂಚಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿ, 10 ಕಿಲೋ ಮೀಟರ್ ದೂರದ ರಾಷ್ಟ್ರಮಟ್ಟದ ಅಂತರ್ವಿವಿಗಳ ಕ್ರಾಸ್ ಕಂಟ್ರಿ ರೇಸ್ ಇಲ್ಲಿ ನಡೆಯಲಿದ್ದು, ದೇಶದಾದ್ಯಂತದಿಂದ ಸುಮಾರು 1500 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟ ಆಯೋಜಿಸುತ್ತೇವೆ ಎಂದು ದೇಶದ 11 ವಿವಿಗಳು ಅರ್ಜಿ ಸಲ್ಲಿಸಿದ್ದವು. ಆದರೆ ಅದನ್ನು ಆಯೋಜನೆ ಮಾಡುವ ಸೌಭಾಗ್ಯ ನಮಗೆ ಒದಗಿ ಬಂದಿದೆ. ಈ ಕ್ರೀಡಾ ಕೂಟಕ್ಕೆ 30 ಮಂದಿ ಟೆಕ್ನಿಕಲ್ ಅಧಿಕಾರಿಗಳು ಕರ್ನಾಟಕದಿಂದ ಬರಲಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯ ದಾಖಲೆಗಳನ್ನು ಚಿಪ್ ಮೂಲಕ ಕಂಪ್ಯೂಟರೀಕೃತವಾಗಿ ಮಾಡಲಾಗುವುದು. 150 ವಿಶ್ವವಿದ್ಯಾನಿಲಯಗಳು ಇದರಲ್ಲಿ ಭಾಗವಹಿಸಲಿದ್ದು, ಒಂದು ವಿವಿಯಿಂದ 6 ಮಂದಿಯ ತಂಡ ಭಾಗವಹಿಸಲಿದೆ. ನ.19ರಂದು ಈ ಕ್ರೀಡಾಕೂಟ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯ ಮೆರವಣಿಗೆ ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಲಿದೆ. ಅಪರಾಹ್ನ 4 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದ್ದು, ಸ್ಪರ್ಧಾಳುಗಳು ಇಲ್ಲಿನ ಕ್ರೀಡಾಂಗಣದಿಂದ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯಾಗಿ ಕರಾಯಕ್ಕೆ ಹೋಗಿ ಬಳಿಕ ಅಲ್ಲಿಂದ ಉಪ್ಪಿನಂಗಡಿಯ ಪೇಟೆ ರಸ್ತೆಯಾಗಿ ಕಾಲೇಜು ಕ್ಯಾಂಪಸ್ನೊಳಗೆ ಆಗಮಿಸುವುದರೊಂದಿಗೆ ಈ ರೇಸ್ ಕೊನೆಗೊಳ್ಳಲಿದೆ. ಇದು ಕೇವಲ ಒಂದು ದಿನದ ಕ್ರೀಡೆಯಾದರೂ, ಸ್ಪರ್ಧಾಳುಗಳು ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳಲು, ಇಲ್ಲಿನ ಓಟದ ರಸ್ತೆಯನ್ನು ಅಭ್ಯಸಿಸಲು ನಾಲ್ಕೈದು ದಿನ ಮುಂಚಿತವಾಗಿಯೇ ಉಪ್ಪಿನಂಗಡಿಗೆ ಆಗಮಿಸಿಲಿದ್ದಾರೆ ಎಂದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ನಮ್ಮ ಸರಕಾರಿ ಕಾಲೇಜಿಗೆ ಲಭಿಸಿರುವ ಈ ಅವಕಾಶವನ್ನು ನಾವು ತುಂಬು ಮನಸ್ಸಿನಿಂದ ಸ್ವೀಕರಿಸಿ ಕೂಟವನ್ನು ಯಶಸ್ವಿ ಮಾಡಬೇಕಾಗಿದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಊರಿನ ಪ್ರಮುಖರು ಪಕ್ಷಾತೀತವಾಗಿ ಇದರಲ್ಲಿ ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ಸೇರಿರುವ ಊರ ನಾಗರೀಕರನ್ನು ಒಳಗೊಂಡಂತೆ ಸಮಿತಿ ರಚಿಸಲಾಗಿರುವ ಬಗ್ಗೆ ಡಾ. ರಾಜಾರಾಮ್ ಕೆ.ಬಿ. ಸಭೆಯಲ್ಲಿ ಓದಿ ಹೇಳಿದರು. ಈ ಸಭೆಗೆ ಬರಲು ಅನಾನುಕೂಲ ಆಗಿರುವ ಬಹಳಷ್ಟು ಮಂದಿ ಇರಬಹುದು, ಅಂತಹವರನ್ನು ಈ ಸಮಿತಿಗೆ ಸೇರಿಸಿಕೊಂಡು ಉಪ ಸಮಿತಿ ರಚನೆಗೆ ಶಾಸಕರು ನಿರ್ದೇಶನ ನೀಡಿದರು. ಮುಂದಿನ ದಿನಗಳಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಿಡಿಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಕೃಷ್ಣ ರಾವ್ ಅರ್ತಿಲ, ದೇವಿದಾಸ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ರಫ್ ಬಸ್ತಕ್ಕಾರ್, ವಿನ್ಸೆಂಟ್ ಫೆರ್ನಾಂಡಿಸ್, ಯು.ಟ. ತೌಸೀಫ್, ಶಾಂಭವಿ ರೈ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಅಜೀಜ್ ಬಸ್ತಿಕ್ಕಾರ್, ಜಯಂತ ಪೊರೋಳಿ, ಇಸ್ಮಾಯಿಲ್ ಇಕ್ಬಾಲ್, ಅನಿ ಮಿನೇಜಸ್, ಅಬ್ದುರ್ರಹ್ಮಾನ್ ಯುನಿಕ್, ವಿಕ್ರ ಶೆಟ್ಟಿ ಅಂತರ, ಅಬ್ದುಲ್ ರಶೀದ್, ಚಂದಪ್ಪ ಮೂಲ್ಯ, ಆದಂ ಕೊಪ್ಪಳ, ಜಾನ್ ಕೆನ್ಯೂಟ್, ರವೀಂದ್ರ ದರ್ಬೆ, ಅನುರಾಧಾ ಶೆಟ್ಟಿ, ಕೈಲಾರ್ ರಾಜ್ಗೋಪಾಲ್ ಭಟ್, ಶರೀಕ್ ಅರಫ, ಯು. ರಾಮ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರಭಾರ ಶೇಖರ್ ಸ್ವಾಗತಿಸಿದರು. ಉಪನ್ಯಾಸಕರಾದ ಬಾಲಾಜಿ ವಂದಿಸಿದರು. ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.