ಉಪ್ಪಿನಂಗಡಿ: ಬಿ.ಸಿ.ರೋಡ್- ಅಡ್ಡಹೊಳೆ ರಾಷ್ಟೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಜನಸಾಮಾನ್ಯರಿಗೆ ಹಲವು ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರುಗಳಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹೆಚ್ಚಿನ ಸಿಬ್ಬಂದಿಯನ್ನು ಹಾಕಿ ತ್ವರಿತಗತಿಯಾಗಿ ಕಾಮಗಾರಿಯನ್ನು ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಯವರು ತಿಳಿಸಿದರು.
ಇಲ್ಲಿನ 34 ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸ್ಥಳವನ್ನು ಅ.25ರಂದು ವೀಕ್ಷಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸೂಕ್ತ ನಿರ್ದೇಶನ ನೀಡಿದ ಶಾಸಕರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಉಪ್ಪಿನಂಗಡಿಯಲ್ಲಿ ಬರುವ ಎರಡು ಎತ್ತರಿಸಲ್ಪಟ್ಟ ರಸ್ತೆ, ಕಲ್ಲಡ್ಕದ ಮೇಲ್ಸೆತುವೆಯನ್ನು ಡಿಸೆಂಬರ್ ಕೊನೆಯೊಳಗೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇನ್ನು ನರಿಕೊಂಬು ಮತ್ತು ಮೆಲ್ಕಾರ್‌ನಲ್ಲಿರವ ಎತ್ತರಿಸಲ್ಪಟ್ಟ ರಸ್ತೆಯನ್ನು ನವೆಂಬರ್ ಕೊನೆಯೊಳಗೆ ಸಂಚಾರಕ್ಕೆ ಮುಕ್ತಗೊಳಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ಮಾರ್ಚ್ ತಿಂಗಳೊಳಗೆ ಎಲ್ಲಾ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನೀಡಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದಕ್ಕೂ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಉಪ್ಪಿನಂಗಡಿಯ ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಿಂಬದಿ ಸೇರಿದಂತೆ ಹಲವು ಕಡೆ ನೀರು ನಿಲ್ಲುವ ಸಮಸ್ಯೆಯ ಬಗ್ಗೆ ಸ್ಥಳೀಯರಿಂದ ದೂರು ಬಂದಿದ್ದು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರೊಂದಿಗೆ ರಸ್ತೆಯಲ್ಲಿ ಧೂಳು, ಸರ್ವೀಸ್ ರಸ್ತೆಗಳ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕೇಂದ್ರ ಸರಕಾರದ ಅಧೀನದಲ್ಲಿ ಬರುವುದಾದರೂ, ನಾನೋರ್ವ ಶಾಸಕನಾಗಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ನನಗೂ ಜವಾಬ್ದಾರಿ ಇದೆ. ಆದ್ದರಿಂದ ಅಧಿಕಾರಿಗಳನ್ನು ಕರೆದು ಪ್ರತಿ ಕಡೆಗಳಲ್ಲಿಯೂ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು ಚರಂಡಿ, ಹೆದ್ದಾರಿ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲು ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ಎಂಜಿನಿಯರ್ ಜೆ.ಎನ್. ಪಟ್ನಾಯಕ್, ಗುತ್ತಿಗೆದಾರ ಸಂಸ್ಥೆ ಕೆಎನ್‌ಆರ್‌ನ ಯೋಜನಾ ವ್ಯವಸ್ಥಾಪಕರಾದ ರಘುನಾಥ ರೆಡ್ಡಿ, ಮಹೇಂದ್ರಸಿಂಗ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯ ದೇವಿದಾಸ ರೈ ಬೆಳ್ಳಿಪ್ಪಾಡಿ, ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಅಸ್ಕರ್ ಅಲಿ, ಈಶ್ವರ ಭಟ್ ಪಂಜಿಗುಡ್ಡೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಶೀಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ನೆಲ್ಯಾಡಿಯಲ್ಲಿ ಎತ್ತರಿಸಲ್ಪಟ್ಟ ರಸ್ತೆ ನಿರ್ಮಾಣ ಮಾಡಿದ್ದರಿಂದ ಪೇಟೆಯ ನಡುವೆ ಗೋಡೆ ಕಟ್ಟಿದಂತಾಗಿದೆ ಎಂಬ ಬಗ್ಗೆ ಹಲವರ ದೂರು ಬಂದಿದ್ದರಿಂದ ಅದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವೇ ಎಂಬ ಬಗ್ಗೆ ನಾನು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯು ಕೇಂದ್ರ ಸರಕಾರದ ಕಾಮಗಾರಿ. ಇಲ್ಲಿ ಒಂದು ಯೋಜನೆ ಮಂಜೂರಾತಿ ಪಡೆದ ಬಳಿಕ ಅದನ್ನು ಬದಲಾವಣೆ ಮಾಡಲು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ಆದ್ದರಿಂದ ನೆಲ್ಯಾಡಿಯಲ್ಲಿ ಎತ್ತರಿಸಲ್ಪಟ್ಟ ರಸ್ತೆಯೇ ಮುಂದುವರಿಯಲಿದ್ದು, ಇದರ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಷ್ಟೇ ಇನ್ನು ಉಳಿದಿರುವುದು ಎಂದರು.