*ವ್ಯವಸ್ಥಿತ ಮತ್ತು ಮಾದರಿ ಚತುಷ್ಪಥ ರಸ್ತೆ
*ಮಧ್ಯದಲ್ಲಿ ಹೂವಿನ ಗಿಡ, ಎರಡೂ ಬದಿಗಳಲ್ಲಿ ಹಣ್ಣಿನ ಗಿಡಗಳು
*ರೈಲ್ವೇ ಅಂಡರ್ ಪಾಸ್ ನಿರ್ಮಾಣ ಪ್ರಕ್ರಿಯೆಯೂ ಶೀಘ್ರ ಪೂರ್ಣ
ಪುತ್ತೂರು: ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿದ್ದು, ಅತ್ಯಂತ ವ್ಯವಸ್ಥಿತ, ಮಾದರಿಯಾದ ಕಾಂಕ್ರೀಟ್ ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಹಾರಾಡಿ ಬಳಿ ಇರುವ ರೈಲ್ವೇ ಅಂಡರ್ ಪಾಸ್ ನಿರ್ಮಾಣ ಪ್ರಕ್ರಿಯೆಯೂ ಅತ್ಯಂತ ವೇಗವಾಗಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಹಾರಾಡಿ ರೈಲ್ವೇ ಅಂಡರ್ ಪಾಸ್ ನಿರ್ಮಾಣದ ಸಲುವಾಗಿ ರೈಲ್ವೇ ಅಧಿಕಾರಿಗಳೊಂದಿಗೆ ಅ. 30 ರಂದು ಸ್ಥಳ ಪರಿಶೀಲನೆ ನಡೆಸಿದ ಶಾಸಕರು ‘ಸುದ್ದಿ’ ಯೊಂದಿಗೆ ಮಾತನಾಡಿ ‘ಉಪ್ಪಿನಂಗಡಿ – ಪುತ್ತೂರು ಚತುಷ್ಪಥ ರಸ್ತೆಗೆ ಈಗಾಗಲೇ 20 ಕೋಟಿ ರೂ. ಟೆಂಡರ್ ಆಗಿದೆ. ಈ ಬಾರಿ ಮತ್ತೆ 15 ಕೋಟಿ ರೂ. ಇಡಲಾಗಿದೆ. ಸಂಪೂರ್ಣ ಕಾಂಕ್ರಿಟ್ ರಸ್ತೆಗಳನ್ನಾಗಿ ಮಾಡಲಾಗುತ್ತದೆ. ರೈಲ್ವೇ ಅಂಡರ್ಪಾಸ್ ಪ್ರಕ್ರಿಯೆಯನ್ನು ಶೀಘ್ರವಾಗಿ ಡಿಪಿಆರ್ ಮಾಡಿಕೊಡಲು ರೈಲ್ವೇಯವರಿಗೆ ಸೂಚನೆ ನೀಡಿದ್ದೇವೆ. ರೈಲ್ವೇಯವರು ಕಾಮಗಾರಿ ನಡೆಸಬೇಕಾದರೆ 12 ಕೋಟಿ ರೂ. ಡೆಪಾಸಿಟ್ ಇಡಬೇಕಾಗುತ್ತದೆ. 50:50 ರೇಷಿಯೋದಲ್ಲಿ ಮಾಡಿಕೊಡಲು ಹೇಳಿದ್ದೇವೆ. ರಸ್ತೆ ಕಾಂಕ್ರಿಟೀಕರಣಕ್ಕೆ ನ. 4 ರಂದು ಶಿಲಾನ್ಯಾಸ ನಡೆಯಲಿದೆ.
ಭೂ ಸ್ವಾಧೀನದವರಿಗೆ ಪರಿಹಾರ ಕೊಡುವ ಕಾರ್ಯ ಆಗಲಿದೆ. ಭೂ ಮಾಲೀಕರ ಮನವೊಲಿಸುವ ಕಾರ್ಯವೂ ನಡೆಯಲಿದೆ’ ಎಂದ ಅವರು ‘ಒಟ್ಟಿನಲ್ಲಿ ಪುತ್ತೂರು – ಉಪ್ಪಿನಂಗಡಿ ಮಾದರಿ ಮತ್ತು ವ್ಯವಸ್ಥಿತ ರಸ್ತೆಯಾಗಿ ಜನರಿಗೆ ದೊರೆಯಲಿದೆ. ಮಧ್ಯದಲ್ಲಿ ಹೂವಿನ ಗಿಡ – ಎರಡೂ ಕಡೆಗಳಲ್ಲಿ ಹಣ್ಣಿನ ಗಿಡಗಳು ನೆಡುವ ಕಾರ್ಯ ನಡೆಯಲಿದೆ. ಗಿಡಗಳಿಗೆ ನೀರಾವರಿ ವ್ಯವಸ್ಥೆಯನ್ನೂ ಮಾಡಲಿದ್ದೇವೆ. ರೈಲ್ವೇ ಅಂಡರ್ಪಾಸ್ ಗಿಂತ ಮೊದಲು ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದರು. ಬಳಿಕ ಅವರು ಹಾರಾಡಿಯಿಂದ ಬೊಳುವಾರು ಜಂಕ್ಷನ್ ವರೆಗೆ ರಸ್ತೆ ಅಗಲೀಕರಣಕ್ಕೆ ಜಾಗ ಪರಿಶೀಲನೆ ನಡೆಸಿದರು.