ಭಕ್ತಕೋಡಿ: ಅಂಗಡಿ ತೆರವು ವಿಚಾರದಲ್ಲಿ ವಾಕ್ಸಮರ, ಪರ-ವಿರೋಧ ಅಭಿಪ್ರಾಯ – ನೀರಿನ ಬಿಲ್ ಕಡಿಮೆ ಮಾಡಿ ನಿರ್ಣಯ ಅಂಗೀಕಾರ-ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ

0

ಪುತ್ತೂರು: ಭಕ್ತಕೋಡಿ ಜಂಕ್ಷನ್‌ನಲ್ಲಿರುವ ಅಂಗಡಿಯೊಂದರ ಪರವಾನಿಗೆ ನವೀಕರಣ ಅರ್ಜಿ ವಿಚಾರದಲ್ಲಿ, ಚರ್ಚೆ, ವಾಕ್ಸಮರ ನಡೆದು ಬಳಿಕ ಕಾನೂನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಣಯ ಆದ ವಿದ್ಯಾಮಾನ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಅವರ ಅಧ್ಯಕ್ಷತೆಯಲ್ಲಿ ಅ.29ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಭಕ್ತಕೋಡಿಯಲ್ಲಿ ಅಂಗಡಿ ಹೊಂದಿರುವ ವನಿತಾ ದಯಾನಂದ ಎಂಬವರು ತಮ್ಮ ಅಂಗಡಿಯ ಪರವಾನಿಗೆ ನವೀಕರಣಕ್ಕೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದು, ಅದು ಸಭೆಯಲ್ಲಿ ಪ್ರಸ್ತಾಪಗೊಂಡಿತು. ಈ ವೇಳೆ ಸದಸ್ಯೆ ರಸಿಕಾ ರೈ ಮೇಗಿನಗುತ್ತು ಮಾತನಾಡಿ ಹಲವಾರು ವರ್ಷಗಳಿಂದ ಭಕ್ತಕೋಡಿಯಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡುತ್ತಿರುವ ಅವರ ಅಂಗಡಿಯನ್ನು ಅಲ್ಲಿ ಕಟ್ಟಡವೊಂದು ನಿರ್ಮಾಣವಾದ ನೆಪದಲ್ಲಿ ತೆರವು ಮಾಡುವಂತೆ ಹೇಳಿದ್ದಾರೆ, ಮಾತ್ರವಲ್ಲದೇ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಳಿಸಿದ್ದಾರೆ, ಇದೆಲ್ಲಾ ಯಾವ ನ್ಯಾಯ ಎಂದು ಪ್ರಶ್ನಿಸಿದರು. ಆ ಅಂಗಡಿಯವರು ಗ್ರಾ.ಪಂನ ಸ್ಥಳೀಯ ಸದಸ್ಯರ ಬಳಿ ಸಮಸ್ಯೆ ಹೇಳಿದ್ದು ಅದಕ್ಕೆ ಪರಿಹಾರ ಸಿಗದಿದ್ದಾಗ ನಮ್ಮ ಬಳಿ ಬಂದಿದ್ದಾರೆ, ಅಲ್ಲಿ ಬಡವರ ಬದಲು ಶ್ರೀಮಂತರು ವ್ಯಾಪಾರ ಮಾಡುತ್ತಿದ್ದರೆ ಅವರನ್ನು ಅಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಮಾಲಕರು ತೆರವು ಮಾಡಿಸುತ್ತಿದ್ದರಾ ಎಂದು ರಸಿಕಾ ರೈ ಪ್ರಶ್ನೆ ಮಾಡಿದರು. ಧ್ವನಿಗೂಡಿಸಿದ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ಆ ಅಂಗಡಿಯ ವಿದ್ಯುತ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸಿದ್ದು ತಪ್ಪು. ಅಲ್ಲಿನ ವಿಚಾರವನ್ನು ಪಿಡಬ್ಲ್ಯೂಡಿ ಇಲಾಖೆಯೇ ನೋಡಿಕೊಳ್ಳಬೇಕೆಂದೂ ಅದರಲ್ಲಿ ಗ್ರಾ.ಪಂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆವತ್ತು ಮಾಡಿದ್ದ ನಿರ್ಣಯ ಏನಾಯಿತು ಎಂದು ಪ್ರಶ್ನಿಸಿದರು. ಸದಸ್ಯ ಬಾಬು ಕಲ್ಲಗುಡ್ಡೆ ಧ್ವನಿಗೂಡಿಸಿ ಅಲ್ಲಿನ ವಿಚಾರದಲ್ಲಿ ಗ್ರಾ.ಪಂ ಮೂಗು ತೂರಿಸುವುದಿಲ್ಲ ಎಂದು ಹೇಳಿ ಈಗ ಯಾಕೆ ಮೂಗು ತೂರಿಸಿದ್ದು? ಎಂದು ಪ್ರಶ್ನಿಸಿದರು.
ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತಡ್ಕ ಮಾತನಾಡಿ ಭಕ್ತಕೋಡಿಯಿಂದ ಸರ್ವೆ ವರೆಗೆ ಇರುವ ಎಲ್ಲ ಅನಧಿಕೃತ ಅಂಗಡಿಗಳನ್ನೂ ತೆರವುಗೊಳಿಸಿ ಎಂದು ಹೇಳಿದರು.


ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಭಕ್ತಕೋಡಿಯಲ್ಲಿ ಅಂಗಡಿ ಹೊಂದಿರುವವರು ತಳ್ಳುಗಾಡಿಗೆಂದು ಪರ್ಮಿಶನ್ ಪಡೆದು ಬಳಿಕ ಅಂಗಡಿ ಮಾಡಿಕೊಂಡಿದ್ದಾರೆ, ತಳ್ಳುಗಾಡಿಗೆ ಪರವಾನಿಗೆ ನವೀಕರಣ ಮಾಡಲು ಆಗುವುದಿಲ್ಲ, ತಳ್ಳುಗಾಡಿಗೂ, ಅಧಿಕೃತ ಅಂಗಡಿಗೂ ಇರುವ ವ್ಯತ್ಯಾಸ ಗೊತ್ತಿಲ್ವಾ ಎಂದು ಕೇಳಿದರು.


ಅಲ್ಲಿ ಹೊಸ ಕಟ್ಟಡ ನಿರ್ಮಿಸುತ್ತಿರುವವರು ಲಕ್ಷಾಂತರ ರೂ.ತೆರಿಗೆ ಕಟ್ಟುವಾಗ ಅವರ ಕಟ್ಟಡದ ಮುಂಭಾಗದಲ್ಲಿರುವ ಅಂಗಡಿಯನ್ನು ಅನಿವಾರ್ಯವಾಗಿ ತೆಗೆಸಬೇಕಾಗುತ್ತದೆ. ಅಲ್ಲಿರುವ ಇನ್ನೊಂದು ಅಂಗಡಿಯವರಿಗೆ ನಷ್ಟ ಆಗಬಾರದೆನ್ನುವ ಕಾರಣಕ್ಕೆ ಕಟ್ಟಡದ ಮಾಲೀಕ ಪ್ರಸನ್ನ ಭಟ್ ಅವರು ಹಣ ನೀಡಿದ್ದು ಈ ಅಂಗಡಿಯವರಿಗೂ ನೀಡುವುದಾಗಿ ಹೇಳಿದ್ದಾರೆ, ಮಾತ್ರವಲ್ಲದೇ ರೂ.2.5 ಸಾವಿರ ಬಾಡಿಗೆಗೆ ಅಂಗಡಿ ಕೊಠಡಿ ನೀಡುವುದಾಗಿಯೂ ಹೇಳಿದ್ದಾರೆ. ಹಾಗಿದ್ದರೂ ‘ನಮಗೆ ಇಷ್ಟೇ ಹಣ ಸಿಗಬೇಕು’ ಎನ್ನುವುದು ಸರಿಯಲ್ಲ, ಯಾರಿಗೂ ಅನ್ಯಾಯ ಆಗಬಾರದು, ಹಾಗಂತ ಕಾನೂನು ರೀತಿಯಲ್ಲಿ ಆಗುವ ಕಾರ್ಯದ ವಿರುದ್ಧ ನಾವು ನಿಲ್ಲುವುದು ಸರಿಯಲ್ಲ ಎಂದರು.


ಬಿಸಿಯೇರಿದ ಚರ್ಚೆಯ ನಡುವೆ ಕಮಲೇಶ್ ಮತ್ತು ರಸಿಕಾ ರೈ ಮಧ್ಯೆ ತುಸು ಮಾತಿನ ಚಕಮಕಿಯೂ ನಡೆಯಿತು.
ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ, ಈ ವಿಚಾರವಾಗಿ ನಾವು ಅವರಲ್ಲಿ ಮಾತನಾಡಿದ್ದೇವೆ, ಇಂತಿಷ್ಟು ಮೊತ್ತ ಕೊಟ್ಟರೆ ಅಂಗಡಿ ತೆರವು ಮಾಡುವ ಬಗ್ಗೆ ಒಪ್ಪಿಕೊಂಡಿದ್ದರು. ಬಳಿಕ ಹೆಚ್ಚು ಸಿಗಬೇಕೆಂದು ಹೇಳಿದ್ದಾರೆ, ನಮಗೆ ಎಲ್ಲರೂ ಸಮಾನರು, ಗ್ರಾ.ಪಂ ಯಾರ ಪರವೂ ಇಲ್ಲ, ವಿರುದ್ದವೂ ಇಲ್ಲ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ನಮಗಿಲ್ಲ ಎಂದು ಹೇಳಿದರು.
ಪಿಡಿಓ ಅಜಿತ್ ಜಿ.ಕೆ ಮಾತನಾಡಿ, ನೀವಿಲ್ಲಿ ಎಷ್ಟೇ ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ, ಏಕೆಂದರೆ ಕಾನೂನಾತ್ಮಕವಾಗಿ ಅಲ್ಲಿರುವ ಅಂಗಡಿಯನ್ನು ತೆರವು ಮಾಡಬೇಕಾಗುತ್ತದೆ, ನಮಗೆ ವ್ಯಕ್ತಿ ಮುಖ್ಯವಲ್ಲ, ನಿಯಮ, ಕಾನೂನು ಮುಖ್ಯ ಎಂದು ಹೇಳಿದರು.

ನೀರಿಲ್ ಬಿಲ್ ಕಡಿಮೆ ಮಾಡಿ ನಿರ್ಣಯ:
ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಕಡಿಮೆ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು. 20೦ ಇರುವ ನೀರಿನ ಬಿಲ್‌ನ್ನು 100 ರೂ. ಮಾಡಿ ಎಂದು ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು ಆಗ್ರಹಿಸಿದರು. ಬಾಬು ಕಲ್ಲಗುಡ್ಡೆ ಮಾತನಾಡಿ 2೦೦ ರೂ ನೀರಿನ ಬಿಲ್ ಜನರಿಗೆ ಹೊರೆಯಾಗ್ತದೆ, ಕಡಿಮೆ ಮಾಡಬೇಕು ಎಂದರು. ಸದಸ್ಯ ಉಮೇಶ್ ಗೌಡ ಅಂಬಟ, ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ಧ್ವನಿಗೂಡಿಸಿದರು. ಆಯ-ವ್ಯಯವನ್ನು ಸರಿದೂಗಿಸಿಕೊಂಡು ಸರಿಯಾದ ನಿರ್ಧಾರವೊಂದನ್ನು ತೆಗೆದುಕೊಳ್ಳಿ ಎಂದು ಕಮಲೇಶ್ ಹೇಳಿದರು. ಕೊನೆಗೆ 200 ಇದ್ದ ನೀರಿನ ಬಿಲ್‌ನ್ನು ರೂ.150 ಮಾಡಿ ನಿರ್ಣಯ ಮಾಡಲಾಯಿತು.

ಬಿಲ್ ಕಲೆಕ್ಷನ್ ವ್ಯವಸ್ಥೆ ಸರಿಪಡಿಸಿ:
ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ನೀರಿನ ಬಿಲ್ ಕಲೆಕ್ಷನ್‌ಗೆ ಸರಿಯಾದ ವ್ಯವಸ್ಥೆ ಮಾಡಬೇಕು, ಸಿಬ್ಬಂದಿ ಸತೀಶ್ ಒಬ್ಬರೇ ಎಲ್ಲವನ್ನೂ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ಗ್ರಾ.ಪಂಗೆ ಬರುವ ಅರ್ಜಿ, ದಾಖಲೆಗಳನ್ನು ಕ್ರಮಬದ್ದವಾಗಿ ಇಡಬೇಕು:
ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಗ್ರಾಮ ಪಂಚಾಯತ್‌ಗೆ ಬರುವ ಅರ್ಜಿಗಳನ್ನು, ದಾಖಲೆಗಳನ್ನು ಕ್ರಮಬದ್ದವಾಗಿ ಸೀರಿಯಲ್ ಪ್ರಕಾರ ಇಡುವ ವ್ಯವಸ್ಥೆಯಾಗಬೇಕು, ಇಲ್ಲಿ ಕೆಲವು ಅರ್ಜಿಗಳು ಹುಡುಕಿದರೂ ಸಿಗುವುದಿಲ್ಲ, ಸೀರಿಯಲ್ ಪ್ರಕಾರ ಅಚ್ಚುಕಟ್ಟಾಗಿ ಇಡುವ ವ್ಯವಸ್ಥೆ ಇಲ್ಲ, ಇದು ಯಾಕೆ ಹೀಗಾಗ್ತಿದೆ ಎಂದು ಪ್ರಶ್ನಿಸಿದರು. ಸಿಬ್ಬಂದಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು, ಈಗಿನ ಪರಿಸ್ಥಿತಿ ಮುಂದಕ್ಕೆ ಆಗಲೇಬಾರದು, ವಿಲೇವಾರಿ ಮತ್ತು ಪೆಂಡಿಂಗ್ ಇರುವ ಅರ್ಜಿಗಳ ಸಮರ್ಪಕ ಮಾಹಿತಿಯೂ ಇರಬೇಕು, ಪರಿಸ್ಥತಿ ಇದೇ ರೀತಿ ಮುಂದುವರಿದರೆ ಮುಂದಕ್ಕೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು. ಮುಂದಕ್ಕೆ ಸರಿಪಡಿಸುವುದಾಗಿ ಪಿಡಿಓ ಅಜಿತ್ ಜಿ.ಕೆ ಭರವಸೆ ನೀಡಿದರು.

ಕಿಶೋರ್ ಬೊಟ್ಯಾಡಿಗೆ ಅಭಿನಂದನೆ:
ದ.ಕ ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿಯವರಿಗೆ ಗ್ರಾ.ಪಂ ವತಿಯಿಂದ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಅಭಿನಂದನೆ ಸಲ್ಲಿಸಿದರು. ಕಿಶೋರ್ ಕುಮಾರ್ ಬೊಟ್ಯಾಡಿ ನಮ್ಮ ಗ್ರಾಮದವರಾದ ಕಾರಣ ಅವರನ್ನು ಗ್ರಾ.ಪಂ ವತಿಯಿಂದ ಸನ್ಮಾನ ಮಾಡುವ ಕಾರ್ಯ ಮಾಡಬೇಕು ಎಂದು ಕಮಲೇಶ್ ಎಸ್.ವಿ ಹೇಳಿದರು.

ಸಭೆಯಲ್ಲಿ ಸದಸ್ಯರಾದ ದುಗ್ಗಪ್ಪ ಕಡ್ಯ, ಅರುಣ ಎ.ಕೆ, ಕಮಲ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ, ಪ್ರೇಮಾ, ಪುಷ್ಪಾ ಎನ್, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಪಿಡಿಓ ಅಜಿತ್ ಜಿ.ಕೆ ಸ್ವಾಗತಿಸಿದರು. ಕಾರ್ಯದರ್ಶಿ ಸೂರಪ್ಪ, ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ವರದಿ, ಅರ್ಜಿ ವಾಚಿಸಿದರು. ಸಿಬ್ಬಂದಿಗಳಾದ ಸತೀಶ ಹಿಂದಾರು, ಮೋಕ್ಷಾ, ಕವಿತಾ, ಸತೀಶ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here