ನ.4ರಂದು ದರ್ಬೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

0

ಪುತ್ತೂರು:ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಜಮೀನನ್ನು ಕಬಳಿಸಲು ಮುಂದಾದ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿಯಿಂದ ನ.4ರಂದು ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.


ನ.1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಕರ್ನಾಟಕದ ರೈತರು ಇಂದು ಕತ್ತಲಲ್ಲಿದ್ದಾರೆ. ಹಬ್ಬವನ್ನು ಸಂಭ್ರಮಿಸಬೇಕಾದ ಜನತೆಗೆ ಕಾಂಗ್ರೆಸ್ ಸರಕಾರದ ಅಲ್ಪ ಸಂಖ್ಯಾತರ ತುಷ್ಠೀಕರಣದ ಅತೀರೇಕದಿಂದಾಗಿ ಕರ್ನಾಟಕದ ರೈತರನ್ನು ಕತ್ತಲಲ್ಲಿ ಹಾಕುವ ಜೊತೆಯಲ್ಲಿ ಅವರು ಕಣ್ಣೀರಲ್ಲಿ ಜೀವನ ನಡೆಸುವಂತೆ ಹಂತಕ್ಕೆ ಮಾಡಿದೆ. ಗ್ಯಾರಂಟಿ ಯೋಜನೆಯ ಮೂಲಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಜೀವನದ ಮಟ್ಟ ಸುಧಾರಿಸಬಹುದು ಅಂದುಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ಮಾಡುವ ಮೂಲಕ ರಾಜ್ಯ ಖಜಾನೆ ಕೊಳ್ಳೆಹೊಡೆಯುವ ಕೆಲಸ ಮಾಡಿದ್ದು ಈಗ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್ ರಾಜ್ಯವಾಗಿದೆ. ಮತ ಬ್ಯಾಂಕ್‌ನ ಹಿಂದೆ ಹೋಗುವ ಕಾಂಗ್ರೆಸ್ ಸರಕಾರ ಉಪ ಚುನಾವಣೆಯ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ಓಲೈಕೆ ಮಾಡುವ ಭರದಲ್ಲಿ ವಕ್ಪ್ ಆಸ್ತಿಯ ಹೆಸರಲ್ಲಿ ರೈತರ ಭೂಮಿಯನ್ನು ಕಬಳಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಸರಕಾದ ಇಲಾಖೆ ಅಡಿಯಲ್ಲಿರುವ ವಕ್ಫ್ ಬೋರ್ಡ್ ನೂರಾರು ವರ್ಷದಿಂದ ಕೃಷಿ ಮೂಲಕ ಜೀವನ ನಡೆಸುತ್ತಿದ್ದ ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಎಂದು ಪಹಣಿಯ 11ನೇ ಕಾಲಂನಲ್ಲಿ ಉಲ್ಲೇಖ ಮಾಡಿರುವ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.


ವಕ್ಪ್ ಆಸ್ತಿಯ ಬಗ್ಗೆ ಪುನರ್ ವಿಮರ್ಶೆ ಮಾಡಿ ಕಾನೂನು ತಿದ್ದುಪಡಿ ಮಾಡುವ ಉದ್ದೇಶದಿಂದ ಕೇಂದ್ರದಲ್ಲಿ ಜಗತ್‌ಪಾಲ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ನಾನು ಈ ಕ್ರಮ ಕೈಗೊಂಡಿರುವುದಾಗಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. 1974ರಲ್ಲಿ ದೇವರಾಜ ಅರಸು ಅವರ ಅವಧಿಯಲ್ಲಿ ರಾಜ್ಯದಲ್ಲಿ ಭೂ ಮಸೂದೆ ಕಾಯಿದೆಯಲ್ಲಿ ಮಠ, ಮಂದಿರಗಳ ಹೆಸರನ್ನು ಪಹಣಿಯಲ್ಲಿ ಉಲ್ಲೇಖ ಮಾಡಿತ್ತು. ಈಗ ಕೇಂದ್ರ ಸರಕಾರ ಅದನ್ನು ಪುನರ್ ವಿಮರ್ಶೆ ಮಾಡಲು ಮುಂದಾದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ನಾವೆಲ್ಲ ಮುಸ್ಲಿಮರ ಪರವಾಗಿದ್ದೇವೆ ಎಂದು ಬಿಂಬಿಸಲು ಮುಂದಾಗಿದೆ. ಮಸ್ಲಿಮರು ಯಾರೂ ಕೇಳಿಲ್ಲ. ಇವರೇ ಮುಂದೆ ಹೋಗಿ ನಾವು ಮುಸ್ಲಿಮರ ಪರವಾಗಿದ್ದೇನೆ ಎಂದು ಸಂದೇಶ ನೀಡುವ ಕೆಲಸ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಇದರ ವಿರುದ್ಧ ಹೋರಾಟ ನಡೆಸಲಿದೆ. ಮುಸ್ಲಿಮರು ಯಾರೂ ಕೇಳದಿದ್ದರೂ ಸರಕಾರವೇ ಈ ರೀತಿ ಮಾಡುವುದಾದರೆ ಬಹುಸಂಖ್ಯಾತರ ಪಾಡೇನು. ಯಾವುದೋ ಒಂದು ಮತದ ಹಿಂದೆ ಈ ಸರಕಾರವಿದೆ ಎನ್ನುವುದನ್ನು ಸ್ಪಷ್ಟ ನಿರ್ದೇಶನ ನೀಡುತ್ತಿದೆ. ಸರಕಾರಕ್ಕೆ ರೈತರ ಮೇಲೆ ಹಿತಾಶಕ್ತಿ, ಕಾಳಜಿಯಿಲ್ಲ ಎನ್ನುವ ಸಂದೇಶ ಸಾರುತ್ತಿದೆ. ಇದರ ವಿರುದ್ಧ ನ.4ರಂದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ರಾಜ್ಯದ ಭ್ರಷ್ಠ ಸರಕಾರದ ಭ್ರಷ್ಠ ಕಾನೂನಿನ ವಿರುದ್ದ ಹೋರಾಟ ನಡೆಸಲಿದೆ. ಸರಕಾರದ ಮುಸ್ಲಿಂ ತುಷ್ಟಿಕರಣವನ್ನು ಖಂಡಿಸಲಿದೆ. ಮುಖ್ಯಮಂತ್ರಿ ಹಾಗೂ ಸರಕಾರವನ್ನು ಇಳಿಸುವ ತನಕ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರ ಹೋರಾಟ ನಡೆಯಲಿದೆ. ಮುಂದೆ ಹೋಬಳಿ ಮಟ್ಟದಲ್ಲಿ ರೈತರ ಅಸ್ತಿತ್ವಕ್ಕೆ ಬೆಂಬಲವಾಗಿ ಬಿಜೆಪಿ ಕೆಲಸ ಮಾಡಲಿದೆ ಎಂದ ಅವರು ನ.4ರಂದು ದಬೆ ವೃತ್ತದ ಬಳಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ರೈತ ಮುಖಂಡರು, ಹಾಲು ಉತ್ಪಾದಕರ ಸಹಕಾರ ಸಂಘ, ಸಹಕಾರ ಸಂಘದ ನಿರ್ದೇಶಕರು, ಪದಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ರೈತರು ಪ್ರತಿಭಟನೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದರು.


ಈ ತನಕ ಯಾವುದೇ ಸರಕಾರ ರೈತರಿಗೆ ನೋಟೀಸ್ ಮಾಡಿಲ್ಲ. ಸಿದ್ದರಾಮಯ್ಯ ಸರಕಾರ ಮಾತ್ರ ನೊಟೀಸ್ ಮಾಡಿದೆ. ಕಾಂಗ್ರೆಸ್ ಸರಕಾರ ಕಳೆದ ಒಂದೂವರೆ ವರ್ಷದಲ್ಲಿ ಕಳ್ಳತನ ಮಾಡಿ ಅದನ್ನು ವಾಪಸ್ಸು ಮಾಡುವ ಮೂಲಕ ನಾವು ಏನೂ ಮಾಡಿಲ್ಲ ಎನ್ನುತ್ತಿದೆ. ರೈತರಿಗೆ ನೀಡಿದ ನೋಟೀಸ್ ಹಿಂಪಡೆದು ನಾವು ಮಾಡಿಲ್ಲ ಎಂದು ಹೇಳುತ್ತಿದೆ. ರೈತರ ಪಹಣಿಯಲ್ಲಿ ಕಾಲಂ ನಂಬರ್ 11ರಲ್ಲಿ ವಕ್ಫ್ ಹೆಸರನ್ನು ತೆಗೆದು ಸ್ವಾದೀನದಲ್ಲಿರುವ ರೈತರ ಹೆಸರೇ ಇರಬೇಕು ಎಂದು ಆಗ್ರಹಿಸಿದರು. ವಕ್ಫ್ ಬೋರ್ಡ್ ಸರಕಾರದ ಇಲಾಖೆಯಡಿಯಲ್ಲಿರುತ್ತದೆ. ಯಾವುದೋ ಖಾಸಗಿ ವ್ಯಕ್ತಿಯಲ್ಲಿರುವುದಲ್ಲ. ಮುಸ್ಲಿಂ ರಾಜರ ಕಾಲದಲ್ಲಿ ಅವರ ಸ್ವಾದೀನದಲ್ಲಿದ್ದ ಆಸ್ತಿಯನ್ನು ಸರಕಾರ ವಕ್ಪ್ ಬೋರ್ಡ್‌ಗೆ ತಂದಿತ್ತು. ವಕ್ಪ್‌ಬೋರ್ಡ್ ಸಮಿತಿ ನೇಮಕ ಮಾಡುವುದು ಸರಕಾರವೇ ಆಗಿದೆ. ಹೀಗಾಗಿ ವಕ್ಫ್‌ಬೋರ್ಡ್ ಮುಖ್ಯಮಂತ್ರಿಗಳು ಕೆಲಗಡೆಯೇ ಇದ್ದು ಅವರು ಮನಸ್ಸು ಮಾಡಿದರೆ ಒಂದೇ ಆದೇಶಲ್ಲಿ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದರು.


ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಮಂಡಲದ ಅಧ್ಯಕ್ಷ ಶಿವಕುಮರ್ ಕಲ್ಲಿಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here