ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ಸಂಘ-ಸಂಸ್ಥೆ ವಿಭಾಗದಡಿಯಲ್ಲಿ ನ.1ರಂದು ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
1964ರಲ್ಲಿ ಪ್ರಾರಂಭವಾದ ರೋಟರಿ ಕ್ಲಬ್ ಪುತ್ತೂರು ಸಂಸ್ಥೆಗೆ 60 ವರ್ಷ ಪೂರೈಸಿದೆ. ಈ 60 ವರ್ಷದಲ್ಲಿ ಸಾವಿರಾರು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದೆ. ರೋಟರಿ ಬ್ಲಡ್ ಬ್ಯಾಂಕ್, ರೋಟರಿ ಕಿಡ್ನಿ ಡಯಾಲಿಸಿಸ್ ಸೆಂಟರ್, ರೋಟರಿ ರಕ್ತ ಸಂಗ್ರಹಣ ವಾಹನ, ರೋಟರಿ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿಪುರದಲ್ಲಿ ಬಡವರಿಗೆ ಅನೇಕ ಮನೆ ನಿರ್ಮಾಣ ಮಾಡಿಕೊಟ್ಟಿದೆ. ರೋಟರಿ ಸಂಸ್ಥೆಯು ನೀಡುತ್ತಿರುವ ಸೇವೆಯನ್ನು ಸಾವಿರಾರು ಸಾರ್ವಜನಿಕರು ಸದುಪಯೋಗ ಪಡೆದುಕೊಂಡಿದ್ದಾರೆ. ನೂರಾರು ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ದಂತ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ, ಅನೇಕ ಶಾಲಾ-ಕಾಲೇಜುಗ ಳಿಗೆ ಶಿಕ್ಷಣಕ್ಕೆ ಬೇಕಾದ ಸವಲತ್ತುಗಳ ಒದಗಿಸುವಿಕೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯಹಸ್ತ, ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಹಸ್ತ, ಸಾರ್ವಜನಿಕ ಬಸ್ಸು ತಂಗುದಾಣದ ನಿರ್ಮಾಣ ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಪುತ್ತೂರು ಪುರಭವನದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ನೇತೃತ್ವದಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರುಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಸೇರಿದಂತೆ ಅನೇಕ ಅಧಿಕಾರಿಗಳು ಅಲ್ಲದೆ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸದಸ್ಯರು ಉಪಸ್ಥಿತರಿದ್ದರು.