ಪುತ್ತೂರು:ಎರಡು ವರ್ಷಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಲ್ಲಿ ತಮ್ಮನನ್ನೇ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹಾವೇರಿ ಮೂಲದ ವ್ಯಕ್ತಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2022ರ ದ.1ರಂದು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನ್ಯೂಲೈಫ್ ಫೆಲೋಶಿಪ್ ಚರ್ಚ್ ಸಮೀಪ ಘಟನೆ ನಡೆದಿತ್ತು.ಹಾವೇರಿ ಮೂಲದ ರಮೇಶ, ಶೇಖರಯ್ಯ, ಲಿಂಗಪ್ಪ, ಮಹದೇವ ಮತ್ತು ವಿರೂಪಾಕ್ಷ ಎಂಬವರು ಸೂರಜ್ ಎಂಬವರ ಬಾಬ್ತು ಸ್ಥಳೀಯ ಸೈಟ್‌ನಲ್ಲಿ ಗಾರೆ ಕೆಲಸ ಮಾಡಿಕೊಂಡು ಅಲ್ಲೇ ಶೆಡ್‌ನಲ್ಲಿ ಉಳಿದುಕೊಳ್ಳುತ್ತಿದ್ದರು.ದ.1ರಂದು ರಾತ್ರಿ ನಿಂಗಪ್ಪ ಗೌಡ ಬಾಂಗೇ ಗೌಡರ ಯಾನೆ ಲಿಂಗಪ್ಪ ಮತ್ತು ಆತನ ತಮ್ಮ ಮಹದೇವರೊಳಗೆ ಹಣಕಾಸಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು.ಈ ಸಂದರ್ಭ ಕೋಪಗೊಂಡ ನಿಂಗಪ್ಪ ಗೌಡ ಬಾಂಗೇಗೌಡರ ಯಾನೆ ಲಿಂಗಪ್ಪ ಕಬ್ಬಿಣದ ರಾಡ್‌ನಿಂದ ತಲೆಯ ಹಿಂಬದಿ ಹಾಗೂ ದೇಹದ ಇತರ ಭಾಗಗಳಿಗೆ ಹಲ್ಲೆ ನಡೆಸಿದ ಪರಿಣಾಮ ತಮ್ಮ ಮಹದೇವ ಅವರು ಸಾವಿಗೀಡಾಗಿದ್ದರು.ಘಟನೆ ಕುರಿತು ರಮೇಶ ಎಂಬವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಆರೋಪಿ ನಿಂಗಪ್ಪ ಗೌಡ ಬಾಂಗೇಗೌಡರ ಯಾನೆ ಲಿಂಗಪ್ಪನನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡ್, ಅನೀಶ್ ವಾದಿಸಿದ್ದರು.