ಕವಿತೆ ಹುಟ್ಟಿಕೊಳ್ಳುವುದೇ ಒಂದು ಹೊಸ ಅನುಭವ: ಡಾ. ನರೇಂದ್ರ ರೈ ದೇರ್ಲ
ಪುತ್ತೂರು: ಒಬ್ಬ ಕವಿಯ ಮನಸ್ಸಿನಲ್ಲಿ ಕವಿತೆ ಹೇಗೆ ಹುಟ್ಟಿಕೊಳ್ಳುತ್ತದೆ ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲ ಏಕೆಂದರೆ ಕವಿತೆ ಹುಟ್ಟಿಕೊಳ್ಳುವುದೇ ಒಂದು ಹೊಸ ಅನುಭವ. ಒಮ್ಮೊಮ್ಮೆ ಧ್ಯಾನಸ್ಥ ಸ್ಥಿತಿಯಲ್ಲಿಯೂ ಕವಿತೆ ಹುಟ್ಟುಕೊಳ್ಳಬಹುದು. ಕಡಲಿನ ಎದುರು ನಿಂತಾಗ ಕೇಳುವ ಅಲೆಯ ಶಬ್ದ ಅದು ನೀರಿನ ಅಲೆಯದ್ದು ಎಂದು ನಾವೆಲ್ಲ ತಿಳಿದುಕೊಂಡಿದ್ದರು ಅದು ಕಡಲಿನ ಆಳದಲ್ಲಿರುವ ಮರಳಿನ ಶಬ್ದ ಆಗಿದೆ. ಅದರಂತೆ ಕವಿಯ ಮನಸ್ಸಿನೊಳಗೆ ಆ ಕ್ಷಣಕ್ಕೆ ಮೂಡುವ ಭಾವನೆಗಳೇ ಕವಿತೆಗಳಾಗುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ. ನರೇಂದ್ರ ರೈ ದೇರ್ಲರವರು ಹೇಳಿದರು.
ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘದ ವತಿಯಿಂದ ಬೋಳಂತಕೋಡಿ ಈಶ್ವರ ಭಟ್ಟರ ಸ್ಮರಣಾರ್ಥ ಪುತ್ತೂರು ಅನುರಾಗ ವಠಾರದಲ್ಲಿ ನ.1 ರಂದು ನಡೆದ ಕನ್ನಡ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಕಾಲದಲ್ಲಿ ತಾಳೆಗರಿಯಲ್ಲಿ ಪದ್ಯಗಳನ್ನು ಬರೆಯಲಾಗುತ್ತಿತ್ತು ಆದರೆ ತಂತ್ರಜ್ಞಾನ ಮುಂದುವರಿದು ಹಾಳೆಯಲ್ಲಿ ಪದ್ಯಗಳನ್ನು ಬರೆಯುತ್ತಿದ್ದೇವೆ. ಇದೀಗ ಹಾಳೆಯನ್ನು ಬಿಟ್ಟು ಡಿಜಿಟಲ್ ಮಾಧ್ಯಮವಾಗಿರುವ ವಾಟ್ಸಫ್,ಫೇಸ್‌ಬುಕ್‌ಗಳಲ್ಲಿ ಕವಿತೆ, ಪದ್ಯಗಳನ್ನು ಬರೆದು ಹರಿಯಬಿಡುತ್ತಿದ್ದೇವೆ ಎಂದ ದೇರ್ಲರವರು, ನಮ್ಮ ಬರಹಗಳನ್ನು ಬಲು ಬೇಗನೆ ಜನರ ಬಳಿಗೆ ತಲುಪಿಸುವ ಕೆಲಸ ಡಿಜಿಟಲ್ ಮಾಧ್ಯಮಗಳಿಂದ ಆಗುತ್ತಿದೆ ಇದನ್ನು ನಾವು ಬಳಸಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಬರೆಯುವವರನ್ನು ಕೂಡ ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದು ಡಾ. ನರೇಂದ್ರ ರೈ ದೇರ್ಲರವರು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ, ಪ್ರೊ.ಹರಿನಾರಾಯಣ ಮಾಡಾವು, ಪರೀಕ್ಷಿತ್ ತೋಳ್ಪಾಡಿ, ಜಯಾನಂದ ಪೆರಾಜೆ, ಜನಾರ್ದನ ದುರ್ಗ, ಸಿಶೇ ಕಜೆಮಾರ್, ವಿಶ್ವನಾಥ ಕುಲಾಲ್, ಕವಿತ ಅಡೂರು, ಡಾ.ಮೈತ್ರಿ ಭಟ್,ಮಲ್ಲಿಕಾ ಜೆ.ರೈ, ಶಾಂತ ಪುತ್ತೂರು, ಕು.ಅಕ್ಷರ ರವರುಗಳು ಕವನ ವಾಚನ ಮಾಡಿದರು. ದತ್ತಾತ್ರೇಯ ಪ್ರಾರ್ಥಿಸಿದರು. ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಹೂ ನೀಡಿ ಸ್ವಾಗತಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಅತಿಥಿಗಳಿಗೆ ಪುಸ್ತಕ ಸ್ಮರಣಿಕೆ ನೀಡಿ ವಂದಿಸಿದರು.
…
ಚಿತ್ರ: ಕವಿಗೋಷ್ಠಿ