ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಮೊ|ಆಂಟನಿ ಪತ್ರಾವೋರವರ ಸ್ಮರಣಾರ್ಥ ನ.5 ಮತ್ತು 6ರಂದು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆಯುವ ಸಂಸ್ಥಾಪಕರ ದಿನಾಚರಣೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಗೊಂಡಿತು.
ಕ್ರೀಡಾಜ್ಯೋತಿಯ ಮೆರವಣಿಗೆ:
ಬೆಳಿಗ್ಗೆ ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನ್ಹಸ್ ಕ್ರಿಡಾಜ್ಯೋತಿ ಬೆಳಗಿಸಿ ಕ್ರೀಡಾಪಟುವಿಗೆ ಹಸ್ತಾಂತರಿಸಿದರು. ಚರ್ಚ್‌ನಿಂದ ಮೆರವಣಿಗೆ ಮೂಲಕ ಸಂತ ಫಿಲೋಮಿನಾ ಕಾಲೇಜಿನ ದಿವ್ಯಚೇತನಾ ಪ್ರಾರ್ಥನಾ ಮಂದಿರಕ್ಕೆ ಕ್ರೀಡಾಜ್ಯೋತಿಯನ್ನು ತರಲಾಯಿತು. ಬಳಿಕ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿ ಜ್ಯೋತಿ ಪ್ರಜ್ವಲನಾ ಪೀಠದಲ್ಲಿ ಪ್ರಜ್ವಲಿಸಲಾಯಿತು.
ಕ್ರೀಡಾ ಧ್ವಜಾರೋಹಣ:
ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭ:
ಬೆಳಿಗ್ಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯ ಆರಂಭದಲ್ಲಿ ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಮೊ|ಆಂಟನಿ ಪತ್ರಾವೋರವರ ಮೂರ್ತಿಗೆ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್ ಹಾಗೂ ಅತಿಥಿಗಳು ಹಾರಾರ್ಪಣ ಮಾಡಿದರು. ಅತಿಥಿಗಳು ಬಲೂನ್‌ಗಳನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಫಿಲೋಮಿನಾ ಸಂಸ್ಥೆಗಳಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿನ ಕ್ಯಾಂಪಸ್‌ಗೆ ಬಂದಾಗ ಬಹಳ ಖುಷಿಯಾಗುತ್ತದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಮನುಷ್ಯನಿಗೆ ಬಹಳ ಮುಖ್ಯ. ಉತ್ತಮ ಆರೋಗ್ಯ ಬರಬೇಕಾದರೆ ಕ್ರೀಡೆ ಬಹಳ ಮುಖ್ಯ. ದೈಹಿಕ ಸಾಮರ್ಥ್ಯಕ್ಕೆ ಮಹತ್ವ ಕೊಡಬೇಕು. ಮುಂಡೂರು ಸಮೀಪ ಕ್ರೀಡಾಂಗಣಕ್ಕೆ 20 ಎಕ್ರೆ ಜಾಗ ಮೀಸಲಿರಿಸಿದ್ದೇವೆ. ಇದರಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಒಳಗೊಂಡ ಎಲ್ಲಾ ಸೌಲಭ್ಯಗಳನ್ನು ನೀಡುವ ಯೋಜನೆ ಹಾಕಲಾಗಿದೆ. ದೇಶ ಅಭಿವೃದ್ಧಿ ಆಗಬೇಕಾದರೆ ಆರೋಗ್ಯ, ಶಿಕ್ಷಣದ ಅವಶ್ಯಕತೆಯೂ ಇದೆ ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಸುಭದ್ರ ರಾಷ್ಟ್ರ ಕಟ್ಟುವಲ್ಲಿ ಸದೃಢ ಯುವಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಗುಣಮಟ್ಟದ ಆರೋಗ್ಯಕ್ಕಾಗಿ ಕ್ರೀಡೆಗಳು ಮುಖ್ಯವಾಗಿದೆ. ಬಾಲ್ಯದಲ್ಲಿರುವಾಗಲೇ ಕ್ರೀಡಾ ಮನೋಭಾವನೆ ಬೆಳೆಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ನಮ್ಮಲ್ಲಿರುವ ಅಹಂಕಾರ ತೊಲಗಬೇಕು ಕ್ರೀಡೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಎಂದು ಹೇಳಿ ಶುಭಹಾರೈಸಿದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜೋನ್ಸನ್ ಡಿ’ಸೋಜ ಮಾತನಾಡಿ ಕ್ರೀಡಾಕೂಟ ಸಂತೋಷ ಹಾಗೂ ಐಕ್ಯತೆ ತರುವಲ್ಲಿ ಸಹಕಾರಿಯಾಗಿದೆ. ನಾನು ಕೂಡ ಓರ್ವ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದೆ. ಸ್ಪೋರ್ಟ್ಸ್ ಕೋಟಾಮೂಲಕ ಉದ್ಯೋಗ ದೊರೆತಿದೆ. ಕ್ರೀಡೆ ನನ್ನ ಜೀವನವನ್ನು ರೂಪಿಸಿದೆ ಎಂದರಲ್ಲದೆ ಮೊಬೈಲ್‌ನ್ನು ದೂರವಿಡಿ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಡಾ.ಶರಣ್ ಜೆ. ಶೆಟ್ಟಿ ಮಾತನಾಡಿ ಫಿಲೋಮಿನಾ ಶಿಕ್ಷಣ ಸಂಸ್ಥೆಯಲ್ಲಿರುವ ಕ್ರೀಡಾಂಗಣ ಬೇರೆಲ್ಲೂ ಇಲ್ಲ. ಸಿಂಥೆಟಿಕ್ ಟ್ರ್ಯಾಕ್ ಇಲ್ಲದಿದ್ದರೂ ಇದು ಉತ್ತಮ ಕ್ರೀಡಾಂಗಣವಾಗಿದೆ. ವಿದ್ಯಾರ್ಥಿಯಾಗಿದ್ದಾಗ ನಾನು ಕೂಡಾ ಕ್ರೀಡಾಪಟುವಾಗಿದ್ದೆ. ಸ್ಪೋರ್ಟ್ಸ್ ಕೋಟಾದಲ್ಲಿ ನನಗೂ ಪ್ಲೇಸ್‌ಮೆಂಟ್ ಆಗಿತ್ತು ಎಂದು ಹೇಳಿ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಕ್ರೀಡೋತ್ಸವ ಒಗ್ಗಟ್ಟಿನ ಸೌಹಾರ್ದತೆಯ ಸಂಕೇತವಾಗಿ ಮೂಡಿಬರಲಿ. ಆಂಟನಿ ಪತ್ರಾವೋರವರು ಪುತ್ತೂರಿಗೆ ಆಶೀರ್ವಾದವಾಗಿ ಬಂದಿದ್ದರು. ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾ ದಾನ, ಜ್ಞಾನ ನೀಡಿದ್ದಾರೆ. ನಾವೂ ಕೂಡ ಒಳಿತು ಮಾಡಿ ಜೀವನದಲ್ಲಿ ಸಮಾಜದಲ್ಲಿ ಇತರರಿಗೆ ಆಶೀರ್ವಾದವಾಗಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಕ್ರೀಡಾ ಪ್ರತಿಜ್ಞಾವಿಧಿ: ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸಂತ ಫಿಲೋಮಿನಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರಿ ಶ್ರಿಶಾರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾಯ್ ದೆ ದೇವುಸ್ ಚರ್ಚ್‌ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ ಕೋಸ್ಟ, ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಫಾ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲಾ ಮುಖ್ಯಗುರು ಫಾ|ಮ್ಯಾಕ್ಸಿಮ್ ಡಿ’ಸೋಜ, ಸಂತ ವಿಕ್ಟರ್ ಬಾಲಕಿಯರ ಪ್ರೌಢಶಾಲಾ ಮುಖ್ಯಶಿಕ್ಷಕಿ ರೋಸ್‌ಲಿನ್ ಲೋಬೋ, ಸಂತ ವಿಕ್ಟರ್ ಆಂಗ್ಲಮಾಧ್ಯಮ ಶಾಲಾ ಮುಖ್ಯಗುರು ಹ್ಯಾರಿ ಡಿ’ಸೋಜ, ಮಾಯ್ ದೆ ದೇವುಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಲೋರಾ ಪಾಸ್, ಸಂತ ಫಿಲೋಮಿನಾ ಪುರುಷರ ಹಾಸ್ಟೆಲ್ ವಾರ್ಡನ್ ರೂಪೇಶ್ ತಾವ್ರೋ, ಸಂತ ಫಿಲೋಮಿನಾ ಮಹಿಳೆಯರ ಹಾಸ್ಟೆಲ್ ವಾರ್ಡನ್ ಲೂರ‍್ಡ್ ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅತಿಥಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಫಾ|ಮ್ಯಾಕ್ಸಿಮ್ ಡಿ’ಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಾಯ್ ದೆ ದೇವುಸ್ ಚರ್ಚ್‌ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ ಕೋಸ್ಟ ವಂದಿಸಿದರು. ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಆಶಾ ರೆಬೆಲ್ಲೊ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಕ್ಲೆಮೆಂಟ್ ಪಿಂಟೋ ಪಥಸಂಚಲನ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸವಿತಾ ಮೊಂತೆರೊ ಸಭಾ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಜ್ಯೋತಿ ಪ್ರಜ್ವಲನೆ
ಮಾಯ್ ದೆ ದೇವುಸ್ ಚರ್ಚ್‌ನಿಂದ ಮೆರವಣಿಗೆ ಮೂಲಕ ತಂದ ಕ್ರೀಡಾಜ್ಯೋತಿಯ ಪ್ರಜ್ವಲನೆ ಕಾರ್ಯಕ್ರಮ ನಡೆಯಿತು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಂತ ಫಿಲೋಮಿನಾ ಪ್ರೌಢಶಾಲೆಯ ಕ್ರೀಡಾಪಟು ಮಹಮ್ಮದ್ ಸುಫಲ್ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ ಸುಮಾರು 70 ಕ್ರೀಡಾಪಟುಗಳು ದಿವ್ಯಚೇತನಾ ಪ್ರಾರ್ಥನಾ ಮಂದಿರದಿಂದ ಕ್ರೀಡಾಜ್ಯೋತಿಯನ್ನು ವೇದಿಕೆಗೆ ತಂದು ಮುಖ್ಯ ಅತಿಥಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜೋನ್ಸನ್ ಡಿ’ಸೋಜರವರಿಗೆ ಹಸ್ತಾಂತರಿಸಿದರು. ಬಳಿಕ ಕ್ರೀಡಾಜ್ಯೋತಿಯನ್ನು ಜ್ಯೋತಿ ಪ್ರಜ್ವಲನಾ ಪೀಠಕ್ಕೆ ತಂದು ಪ್ರಜ್ವಲಿಸಲಾಯಿತು.
7 ಶಿಕ್ಷಣ ಸಂಸ್ಥೆಗಳ ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳಿಂದ ಪಥಸಂಚಲನ
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಇರುವ ಏಳು ಶಿಕ್ಷಣ ಸಂಸ್ಥೆಗಳ ಸಾವರಕ್ಕೂ ಮಿಕ್ಕಿ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ಕ್ರೀಡಾಪಟುಗಳಿಂದ ವಾದ್ಯಘೋಷಗಳೊಂದಿಗೆ ಪಥಸಂಚಲನ ನಡೆಸಿ ಅತಿಥಿ ಅಭ್ಯಾಗತರಿಗೆ ಗೌರವ ವಂದನೆ ಸಲ್ಲಿಸಿದರು.
ಅತಿಥಿ ಡಾ.ಶರಣ್ ಶೆಟ್ಟಿರವರಿಗೆ ಸನ್ಮಾನ
ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿ, ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ದಂತವೈದ್ಯ ಡಾ.ಶರಣ್ ಶೆಟ್ಟಿರವರನ್ನು ಸನ್ಮಾನಿಸಲಾಯಿತು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್‌ರವರು ಹಾರ, ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು