ಪುತ್ತೂರು:ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಕುಟ್ರುಪ್ಪಾಡಿ ಗ್ರಾ.ಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ನ.23ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿ ನ.6ರಂದು ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.
ಅರಿಯಡ್ಕ ಗ್ರಾ.ಪಂ.ನ ಮಾಡ್ನೂರು 2ನೇ ವಾರ್ಡ್ನಲ್ಲಿ ಪ.ಜಾತಿಗೆ ಮೀಸಲಿರಿಸಿದ ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಶಂಕರ ಮಾಡಂದೂರು ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.ಕೆದಂಬಾಡಿ ಗ್ರಾ.ಪಂನ ವಾರ್ಡ್ 4ರಲ್ಲಿ ಸಾಮಾನ್ಯ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.ಭಾಸ್ಕರ ರೈಯವರು ಪ್ರಥಮ ಅವಧಿಯಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ.ನಲ್ಲಿ ಸಾಮಾನ್ಯ ಮಹಿಳಾ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಸ್ವಪ್ನಾರವರು ವಿದೇಶಕ್ಕೆ ತೆರಳಲಿದ್ದ ಹಿನ್ನೆಲೆಯಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಇದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.ಸುಬ್ರಹ್ಮಣ್ಯ ಗ್ರಾ.ಪಂನಲ್ಲಿಯೂ ತೆರವಾಗಿರುವ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ನ.12 ಅಂತಿಮ ದಿನವಾಗಿದೆ.ನ.13ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.ನ.15 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.ನ.23ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.ಆಯಾ ಗ್ರಾ.ಪಂ ಕಚೇರಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.ನ.26ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ಪುತ್ತೂರು ಹಾಗೂ ಕಡಬ ತಾಲೂಕಿನ ತಲಾ ಎರಡು ಗ್ರಾ.ಪಂಗಳು ಸೇರಿದಂತೆ ರಾಜ್ಯದ 195 ತಾಲೂಕುಗಳ 531 ಗ್ರಾ.ಪಂಗಳಲ್ಲಿ ತೆರವಾದ 641 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ
ಎರಡು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಘೋಷಣೆ:
ಪುತ್ತೂರು ಹಾಗೂ ಕಡಬ ತಾಲೂಕಿನ ಒಟ್ಟು 4 ಗ್ರಾ.ಪಂಗಳ 4 ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಪುತ್ತೂರಿನ ಕೆದಂಬಾಡಿ ಗ್ರಾ.ಪಂನ ವಾರ್ಡ್ 4ರಲ್ಲಿ ಸಾಮಾನ್ಯ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋ ಹಾಗೂ ಅರಿಯಡ್ಕ ಗ್ರಾ.ಪಂನ ಮಾಡ್ನೂರು 2ನೇ ವಾರ್ಡ್ನಲ್ಲಿ ಪ.ಜಾತಿಗೆ ಮೀಸಲು ಸ್ಥಾನಕ್ಕೆ ವಿನಾಯಕ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ.ಕೆದಂಬಾಡಿ ಗ್ರಾ.ಪಂ.ಸ್ಥಾನಕ್ಕೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ ಅವರು ಆಯ್ಕೆಯಾಗಿದ್ದಾರೆ.