ಪುತ್ತೂರು: ಸಮಗ್ರ ಆಡಳಿತ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ ಆರ್ಯಾಪು ಗ್ರಾಮ ಪಂಚಾಯತ್ಗೆ ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2024ರ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಭಾಜನವಾಗಿದೆ. ನ.10ರಂದು ಕೋಟತಟ್ಟುವಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ವಿಯ ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿದಂತೆ ಪಂಚಾಯತ್ನ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಆರ್ಯಾಪು ಗ್ರಾಮ ಪಂಚಾಯತ್ನಲ್ಲಿ ಎಲ್ಲಾ ಮನೆಗಳಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಹಾಗೂ ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ. ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ.
ಅಲ್ಲದೆ ವಿನೂತನ ಚಟುವಟಿಕೆಗಳಾದ ಗ್ರಾ.ಪಂನ ಕುಡಿಯುವ ನೀರಿನ ಘಟಕಗಳಿಗೆ ಸೋಲಾರ್ ಅಳವಡಿಕೆ, ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ನಿಯಂತ್ರಣಕ್ಕೆ ಮೊಬೈಲ್ ತಂತ್ರಾಂಶ ಬಳಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂಆರ್ ಸ್ಕ್ಯಾನ್ ಅಳವಡಿಕೆ ಅಳವಡಿಸಿಕೊಂಡಿದೆ. 2009ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು, 2022ರಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ತನ್ನ ಮುಡುಗೇರಿಸಿಕೊಂಡಿತ್ತು.