ಪುತ್ತೂರು: ಜವುಳಿ ಉದ್ಯಮದಲ್ಲಿ ಇಪ್ಪತ್ತೆರಡು ವರ್ಷಗಳ ಇತಿಹಾಸವಿರುವ, ಕರ್ನಾಟಕ ಹಾಗೂ ಕೇರಳಗಳಲ್ಲಿ ಮಳಿಗೆಗಳನ್ನು ಹೊಂದಿರುವ ಲವ್ಲೀ ಸಿಲ್ಕ್ಸ್‌ನ 9ನೇ ಮಳಿಗೆ ನ.6ರಂದು ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ಶುಭಾರಂಭಗೊಂಡಿದೆ.
ಮಳಿಗೆಯನ್ನು ಮ್ಹಾಲಕರ ತಂದೆ ಇಬ್ರಾಹಿಂ ಸಿ.ಎಚ್ ಹಾಗೂ ತಾಯಿ ಮರಿಯಮ್ಮ ಇಬ್ರಾಹಿಂ ಉದ್ಘಾಟಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಮಾತನಾಡಿ, ಜವುಳಿ ಉದ್ಯಮದಲ್ಲಿ ವಿಭಿನ್ನ ಮಳಿಯಾಗಿ ಲವ್ಲೀ ಸಿಲ್ಕ್ಸ್ ಪ್ರಾರಂಭಗೊಂಡಿದೆ. ಇಂತಹ ಮಳಿಗೆಗಳು ಪುತ್ತೂರಿಗೆ ಆವಶ್ಯಕತೆಯಿದೆ. ಗುಣಮಟ್ಟದ ಸೇವೆಯಿಂದಾಗಿ ಸಂಸ್ಥೆಯು ಬೆಳೆದು ಒಂಬತ್ತು ಮಳಿಗೆಗಳನ್ನು ಪ್ರಾರಂಭಿಸಿದೆ. ನಿಮ್ಮ ಮೂಲಕ ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ. ಜನತೆ ಇದರ ಸದುಪಯೋಗ ಪಡಿಸಿಕೊಳ್ಳಲಿ ಎಂದ ಅವರು ಮಳಿಗೆಯನ್ನು ಮ್ಹಾಲಕರು ತಂದೆ-ತಾಯಿಯ ಮೂಲಕ ಉದ್ಘಾಟನೆಗೊಳಿಸುವ ಮುಖಾಂತರ ಹಿರಿಯರಿಗೆ ಗೌರವ ನೀಡಿದ್ದು ಸಂಸ್ಥೆಯು ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಉದ್ಯಮದಲ್ಲಿ ವ್ಯಾಪಾರ ಧರ್ಮ ಪಾಲಿಸಿಕೊಂಡು ನಗುಮೊಗದ ಸೇವೆ ನೀಡಬೇಕು. ಪುತ್ತೂರಿನಲ್ಲಿ ಬಹಳಷ್ಟು ಪ್ರತಿಷ್ಠಿತ ಜವುಳಿ ಮಳಿಗೆಗಳಿದ್ದು ಅವುಗಳ ಜೊತೆಗೆ ಧೈರ್ಯದಿಂದ ಉದ್ಯಮ ಪ್ರಾರಂಭಿಸಿರುವುದು ಶ್ಲಾಘನೀಯ. ಹೊರಗಿನಂದ ಬಂದು ಪುತ್ತೂರಿನಲ್ಲಿ ಉದ್ಯಮ ಪ್ರಾರಂಭಿಸಿದವರು ಅಭಿವೃದ್ಧಿ ಆಗುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಉದ್ಯಮಗಳು ಅವಶ್ಯಕ. ಉದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆ ನೀಡಿ, ಗ್ರಾಹಕರೊಂದಿಗೆ ನಯ,ವಿನಯದೊಂದಿಗೆ ಸೇವೆ ನೀಡಿದಾದ ಉದ್ಯಮ ಬೆಳೆಯಲು ಸಾಧ್ಯ ಎಂದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಪುತ್ತೂರು ನಗರ ವೇಗದಲ್ಲಿ ಬೆಳೆಯುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಜಿಲ್ಲಾ ಕೇಂದ್ರವಾಗಲಿದೆ. ಇಂತಹ ಜವುಳಿ ಮಳಿಗೆ ಅದಕ್ಕೆ ಪೂರಕವಾಗಲಿದೆ. ಜನರಿಗೆ ಕೈಗೆಟಕುವ ದರದಲ್ಲಿ ಪುತ್ತೂರಿನಲ್ಲಿಯೇ ದೊರೆಯಲಿದೆ ಎಂದರು.
ಪುತ್ತೂರು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಮಾತನಾಡಿ, ಜೀವನದಲ್ಲಿ ಆಹಾರ ನಂತರ ಬಹುಮುಖ್ಯವಾಗಿರುವುದು ಉಡುಪು ಆಗಿದೆ. ನವ ನವೀನ ಮಾದರಿಯ ವಸ್ತ್ರಗಳನ್ನು ಪರಿಚಯಿಸುವ ಮೂಲಕ ಪುತ್ತೂರಿನ ಜನತೆಯ ಅವಶ್ಯಕತೆಯನ್ನು ನೂತನ ಮಳಿಗೆಯವರು ಪೂರೈಸಲಿದ್ದಾರೆ ಎಂದರು.
ನಗರ ಸಭಾ ಸದಸ್ಯ ರಿಯಾಝ್ ಪರ್ಲಡ್ಕ ಮಾತನಾಡಿ, ಮಳಿಗೆಯಲ್ಲಿ ಎಲ್ಲಾ ಮಾದರಿಯ ಉಡುಪುಗಳು ಲಭ್ಯವಿದೆ. ಗುಣಮಟ್ಟದೊಂದಿಗೆ ಜನತೆಗೆ ಉತ್ತಮ ಸೇವೆ ನೀಡುವ ಮೂಲಕ ಇನ್ನೊಂದು ಮಳಿಗೆ ಪ್ರಾರಂಭಿಸುವಂತಾಗಲಿ ಎಂದರು.
ಸಿಝ್ಲರ್ ಸಾಫ್ಟ್‌ಡ್ರಿಂಕ್ಸ್‌ನ ಮ್ಹಾಲಕ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಸಂಯುಕ್ತ ಜಮಾತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಎಲ್.ಟಿ., ಫಾಸ್ಟ್‌ಟ್ರಾಕ್‌ನ ಶರ್ಪುದ್ದೀನ್, ಕಟ್ಟಡದ ಮ್ಹಾಲಕ ಅಬ್ದುಲ್ಲಾ ಕುಂಞಿ ಚೆರಿಯಾಜಿ, ಟೋಪ್ಕೋ ಜ್ಯುವೆಲ್ಲರ‍್ಸ್‌ನ ಮ್ಹಾಲಕ ಮಹಮ್ಮದ್ ಕುಂಞಿ, ಬ್ಲಾಕ್ ಡೈಮಂಡ್ ಗ್ರೂಪ್‌ನ ಇಸಾಕ್, ಮೋನು ಬಪ್ಪಳಿಗೆ, ಅಫಾಮ್ ತಂಞಲ್, ದಾವುದ್, ಟೋಪ್ಕೋ ಜ್ಯುವೆಲ್ಲರ‍್ಸ್‌ನ ಅನಾಸ್, ಶಿಹಾನ್ ದರ್ಬೆ, ಶಾಫೀ ಪಾಸ್ಟ್‌ಟ್ರ್ಯಾಕ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಮ್ಹಾಲಕರಾದ ಯೂಸುಪ್, ಯೂನುಸ್, ಅಝರುದ್ದೀನ್,ಅಸ್ಲಾಮ್, ಅಶ್ರಫ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಶರೀಪ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡಿನಲ್ಲಿ ಎರಡು ಮಳಿಗೆ, ಕಣ್ಣೂರು, ಉಪ್ಪಳ ಹಾಗೂ ಸುಳ್ಯ ಸೇರಿದಂತೆ 8 ಮಳಿಗೆಗಳನ್ನು ಹೊಂದಿದೆ. ಇದೀಗ 9ನೇ ಮಳಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿದೆ. ನಮ್ಮ ಮಳಿಗೆಯಲ್ಲಿ ಹೊಸ ಹೊಸ ವಿನ್ಯಾಸದ, ನವ ನವೀನ ಮಾದರಿಯ ಮದುವೆ ಉಡುಪುಗಳು ಬೃಹತ್ ಸಂಗ್ರಹವಿದೆ. ಅಲ್ಲದೆ ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.