ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮ

0

*ಸಂಖ್ಯಾ ಶಕ್ತಿಯಿದೆ, ನೇತೃತ್ವದ ಶಕ್ತಿಯಿಲ್ಲ – ಸಂಜೀವ ಮಠಂದೂರು
*ಶಿಕ್ಷಣ, ಸಂಸ್ಕಾರದಿಂದ ದಾಂಪತ್ಯ ಸುಗಮ – ಚಿದಾನಂದ ಬೈಲಾಡಿ
*ಅರ್ಥಪೂರ್ಣ ಕಾರ್ಯಕ್ರಮ – ಮನೋಹರ್ ಗೌಡ ಡಿ.ವಿ.
*ಯುವ ಜನತೆಗೆ ಉತ್ತಮ ಸಂದೇಶ – ರವಿ ಮುಂಗ್ಲಿಮನೆ
*ಆದರ್ಶ ದಂಪತಿ ಸಮಾಜಕ್ಕೆ ಮಾದರಿ – ಪಟೇಲ್ ಗೋಪಾಲಕೃಷ್ಣ
*ಒಂದು ತಿಂಗಳೊಳಗೆ 300 ಮಿಕ್ಕಿ ದಂಪತಿಗೆ ಸನ್ಮಾನ – ಎ.ವಿ.ನಾರಾಯಣ
*ಮೊದಲ ಸಂಘ ಆರಂಭವಾದ್ದೂ ಇಲ್ಲಿಂದಲೇ – ಮಾಧವ ಗೌಡ ಕಾಂತಿಲ
*ಗೌಡ ಅಂದರೆ ಗುರಿಕ್ಕಾರ – ಮುತ್ತಪ್ಪ ಗೌಡ

ಮುತ್ತಪ್ಪ ಗೌಡ ದಂಪತಿ

ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವ ಸಹಾಯ ಸಂಘಗಳಲ್ಲಿರುವ ಎಲ್ಲಾ ಗ್ರಾಮಗಳಲ್ಲಿನ ದಾಂಪತ್ಯ ಜೀವನ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಕ್ಕೆ ನ.7ರಂದು ಬಲ್ನಾಡು ಗ್ರಾಮದ ಕಾಂತಿಲ ಮನೆಯಲ್ಲಿ ಚಾಲನೆ ನೀಡಲಾಯಿತು. ಬಲ್ನಾಡು ಕಟ್ಟೆಮನೆ ಬಾಲಕೃಷ್ಣ ಗೌಡ ಅವರು ಮಾದರಿ ದಂಪತಿ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾದರಿ ದಂಪತಿಗಳನ್ನು ಸನ್ಮಾನಿಸಿದರು. ಬಳಿಕ ಪ್ರತಿ ಮನೆಗಳಿಗೆ ತೆರಳಿ ದಂಪತಿಯನ್ನು ಸನ್ಮಾನಿಸಲಾಯಿತು.


ಸಂಖ್ಯಾ ಶಕ್ತಿಯಿದೆ, ನೇತೃತ್ವದ ಶಕ್ತಿಯಿಲ್ಲ:
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಹಿಂದೂ ಸಮಾಜದ ಉಳಿವಿಗೆ ಮತ್ತು ಕೂಡು ಕುಟುಂಬವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಮೂಲಕ ನಡೆಯುತ್ತಿದೆ. ನಮ್ಮ ಸಮಾಜ ಯಜಮಾನನ ಸ್ಥಾನದಲ್ಲಿರುವ ಸಮಾಜ. ಹಿಂದೆ ವಿದ್ಯಾಭ್ಯಾಸವಿಲ್ಲದಿದ್ದರೂ ಸಂಸ್ಕಾರವಿತ್ತು. ಅಂತಹ ಪಾರಂಪರಿಕ ಸಂಬಂಧ ಗೌಡ ಸಮುದಾಯದಲ್ಲಿತ್ತು. ಸಂಸ್ಕಾರದ ಜೊತೆಗೆ ವಿದ್ಯಾಭ್ಯಾಸ ಇರುತ್ತಿದ್ದರೆ ಸಮಾಜದ ಏಳಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿತ್ತು. ಇವತ್ತು ಸಾಮಾಜಿಕ, ಶೈಕ್ಷಣಿಕವಾಗಿ ಈ ಸಮಾಜ ಯಾವ ರೀತಿ ನೇತೃತ್ವ ವಹಿಸುತ್ತದೆಂಬುದು ಚಿಂತನೆ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮಾಜ ಬಲಿಷ್ಠ ಸಮಾಜ. ಸಂಖ್ಯಾ ಶಕ್ತಿ ಹೆಚ್ಚಿದೆ. ಆದರೆ ನೇತೃತ್ವದ ಶಕ್ತಿ ಇಲ್ಲ. ಅಂತಹ ನೇತೃತ್ವದ ಶಕ್ತಿಯನ್ನು ತುಂಬಿಸಲು ಯುವ ಸಮುದಾಯ ಒಂದಷ್ಟು ಮಾಹಿತಿ ಪಡೆಯುವ ಕೆಲಸ ಆಗಬೇಕಾಗಿದೆ. ಇತರ ಸಮುದಾಯವನ್ನು ಸೇರಿಸಿಕೊಂಡು ಮುಂದೆ ಹೋಗಬೇಕಾಗಿದೆ. ಇವತ್ತು ಒಕ್ಕಲಿಗ ಗೌಡ ಸಂಘ, ಸಹಕಾರಿ ಸಂಘ, ಸ್ವಸಹಾಯ ಸಂಘದ ಮೂಲಕ ಹಲವು ಉತ್ತಮ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದ ವ್ಯತ್ಯಾಸ ಸರಿ ಮಾಡುವ ಅವಶ್ಯಕತೆಯಿದೆ. ಸಮಾಜದ ವ್ಯಕ್ತಿಗೆ ಆರ್ಥಿಕ ಸಂಕಷ್ಟ, ಪ್ರಾಕೃತಿಕ ವಿಕೋಪದ ಸಂದರ್ಭ ಆ ವ್ಯಕ್ತಿಯ ಪರವಾಗಿ ಸಂಘಟನೆ ಇರಬೇಕು. ದುಶ್ಚಟದಿಂದ ಮುಕ್ತರಾಗಬೇಕು. ಪ್ರತಿಯೊಬ್ಬ ಸದಸ್ಯನು ಒಕ್ಕಲಿಗ ಸ್ವಸಹಾಯ ಸಂಘದ ಗುಂಪಿಗೆ ಸೇರಬೇಕು. ಇಲ್ಲಿ ಶ್ರೀಮಂತ ಬಡವ ಎಂಬ ಭಾವನೆ ಇರಬಾರದು ಎಂದರು.

ಮಾಂಕು ಗೌಡ ದಂಪತಿ


ಶಿಕ್ಷಣ, ಸಂಸ್ಕಾರದಿಂದ ದಾಂಪತ್ಯ ಸುಗಮ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಪ್ರಸ್ತುತ ಕಾಲಗಟ್ಟದಲ್ಲಿ ಮದುವೆ ಆಗಿ 2 ತಿಂಗಳಲ್ಲಿ ವಿಚ್ಛೇದನಕ್ಕೆ ಎಷ್ಟೋ ಜನರು ಬರುವುದುಂಟು. ಅದರಲ್ಲಿ ನಮ್ಮ ಸಮಾಜವೂ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಯುವ ಜನತೆಗೆ ನೀಡುವುದು ಅಗತ್ಯವಾಗಿದೆ. ಅದಕ್ಕೆ ಪೂರಕವಾಗಿ ಟ್ರಸ್ಟ್‌ನ ಮೂಲಕ ದಾಂಪತ್ಯ ಜೀವನವನ್ನು ಯಶಸ್ವಿಯಾಗಿ ಪೂರೈಸುತ್ತಿರುವವರಿಗೆ ಸನ್ಮಾನ ಮಾಡುವುದು ಯುವ ಸಮುದಾಯಕ್ಕೆ ಮಾರ್ಗದಶನ ಮಾಡಿದಂತಾಗುತ್ತದೆ. ನಮ್ಮ ಸಂಘವು ಸಂಘಟನೆಗಾಗಿ ಹೊರತು ಬೇರಾವ ಉದ್ದೇಶವಿಲ್ಲ ಎಂದರು.


ಅರ್ಥಪೂರ್ಣ ಕಾರ್ಯಕ್ರಮ:
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಗೌಡ ಡಿ.ವಿ ಅವರು ಮಾತನಾಡಿ ಒಕ್ಕಲಿಗ ಸ್ವಸಹಾಯ ಸಂಘದ ಎಲ್ಲಾ ಕಾರ್ಯಕ್ರಮಗಳಿಗೂ ಮೂಲ ಬಲ್ನಾಡು ಗ್ರಾಮ. ಇಲ್ಲಿಂದ ಆರಂಭಗೊಂಡ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು.

ಬಾಬು ಗೌಡ ದಂಪತಿ


ಯುವ ಜನತೆಗೆ ಉತ್ತಮ ಸಂದೇಶ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಬಲ್ನಾಡು ಪ್ರಸಿದ್ದ ಗ್ರಾಮ ಕಟ್ಟೆಮನೆ ಅರಮನೆಗೆ ಇತಿಹಾಸವಿದೆ. ಯಾವುದೇ ಕಾರ್ಯಕ್ರಮಕ್ಕೂ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಅಪ್ಪಣೆ ಅಗತ್ಯ. ಇವತ್ತು ಪ್ರತಿ ಮನೆಗೆ ಹೋಗಿ ಹಿರಿಯ ದಂಪತಿಯನ್ನು ಗೌರವಿಸುವುದು ಅವರಿಂದ ಅಶೀರ್ವಾದ ಪಡೆಯುವುದು ಸಂಘದ ಯಶಸ್ವಿಗೆ ಕಾರಣವಾಗಿದೆ. ಇಂತಹ ಕಾರ್ಯಕ್ರಮ ಯುವ ಜನತೆಗೆ ಉತ್ತಮ ಸಂದೇಶ ನೀಡಲಿದೆ ಎಂದರು.


ಆದರ್ಶ ದಂಪತಿ ಸಮಾಜಕ್ಕೆ ಮಾದರಿ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಅವರು ಮಾತನಾಡಿ ನಮ್ಮ ಸ್ವಸಹಾಯ ಸಂಘವು 62 ಗ್ರಾಮಗಳನ್ನೊಳಗೊಂಡ 66 ಒಕ್ಕೂಟಗಳಿವೆ. ವಿವಿಧ ಸಾಧನೆ, ಕಲಾಕ್ಷೇತ್ರ, ಕೃಷಿ ಸಾಧನೆ ಮಾಡುವವರನ್ನು ಗುರುತಿಸುವ ಕಾರ್ಯಕ್ರಮವಿದೆ. ಸಂಘದ ದಶಮಾನೋತ್ಸವ ಸಮಾರೋಪಕ್ಕೆ ಕಟ್ಟಡದಲ್ಲಿ ಸಭಾಭವನ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆಯ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಇವತ್ತು ವಿವಾಹ ವಿಚ್ಛೇದನಕ್ಕೆ ವಿರುದ್ಧವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿವಾಹದಲ್ಲಿ ಯಾವತ್ತೂ ಸಮಾನತೆ ಬೇಕು. ಆಗ ದಾಂಪತ್ಯ ಸುಖಕರವಾಗಿರುತ್ತದೆ. ಆದರ್ಶ ದಂಪತಿ ಸಮಾಜಕ್ಕೆ ಮಾದರಿ. ಮುಂದಿನ ದಿನ ಇಂತಹ ದಂಪತಿ ನಾವು ಕಾಣುವುದು ಕಡಿಮೆ. ಗೌಡ ಸಮಾಜಕ್ಕೆ ಮಾದರಿ ಕಾರ್ಯಕ್ರಮ ತಲುಪಬೇಕು ಎಂಬ ನಿಟ್ಟಿನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.


ಒಂದು ತಿಂಗಳೊಳಗೆ 300 ಮಿಕ್ಕಿ ದಂಪತಿಗೆ ಸನ್ಮಾನ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದಶಾಮನೋತ್ಸವದ ಅಂಗವಾಗಿ ಈಗಾಗಲೇ 11 ಆನ್ ಲೈನ್ ಕಾರ್ಯಕ್ರಮ , ಆಪ್ ಲೈನ್ ಮಾಡಲಾಗಿದೆ. ನಮ್ಮ ಸಂಘವು ಪುತ್ತೂರು, ಕಡಬ, ವಿಟ್ಲ ಸಹಿತ ಒಟ್ಟು 78 ಒಕ್ಕೂಟ ಮತ್ತು 66 ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಶಮಾನೋತ್ಸವ ಸಂದರ್ಭದಲ್ಲಿ 300ಕ್ಕೂ ಅಧಿಕ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು. ಅದು ಕೂಡಾ ಒಂದು ತಿಂಗಳೊಳಗೆ ಕಾರ್ಯಕ್ರಮ ಮುಗಿಸಬೇಕು. ವಿವಾಹ ವಿಚ್ಛೇದನ ಕೇಳುವ ಈಗಿನ ಪರಿಸ್ಥಿತಿಯಲ್ಲಿ 50ಕ್ಕೂ ಅಧಿಕ ವರ್ಷ ದಾಂಪತ್ಯ ಜೀವನ ನಡೆಸುತ್ತಿರುವ ಹಿರಿಯನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿರೆಂಬ ಸಣ್ಣ ಸಂದೇಶವನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಮೊದಲ ಸಂಘ ಆರಂಭವಾದ್ದೂ ಇಲ್ಲಿಂದಲೇ:
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ ಅವರು ಸ್ವಾಗತಿಸಿ ಮಾತನಾಡಿ ಒಕ್ಕಲಿಗ ಸ್ವ ಸಹಾಯ ಸಂಘದ ಮೊದಲ ಸಂಘ ಆರಂಭವಾದ್ದದ್ದು ಇದೇ ಗ್ರಾಮದಿಂದ. ಇದೀಗ ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ಮಾದರಿ ದಂಪತಿಯನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೂ ಚಾಲನೆ ಇಲ್ಲಿಂದ ಸಿಕ್ಕಿರುವುದು ಸಂತೋಷದ ವಿಚಾರ. ಇವತ್ತು ಸಂಘ ಬಹಳ ಎತ್ತರಕ್ಕೆ ಏರಿದೆ. ನಮ್ಮಲ್ಲಿ 148 ಭಜನಾ ಕಾರ್ಯಕ್ರಮ ಯಶಸ್ವಿಯಾಗಿ 4 ವರ್ಷ ಪೂರೈಸಿದೆ ಎಂದರು.


ಗೌಡ ಅಂದರೆ ಗುರಿಕ್ಕಾರ:
ಸನ್ಮಾನಿತರ ಪೈಕಿ ಮುತ್ತಪ ಗೌಡ ಕಾಂತಿಲ ಅವರು ಮಾತನಾಡಿ ಇವತ್ತು ಸಮಾಜದ ಹಲವು ಕಾರ್ಯಕ್ರಮದಲ್ಲಿ ಸಂತೋಷವಿದೆ. ಗೌಡ ಅಂದರೆ ಗುರಿಕ್ಕಾರ. ಸಮಾಜಕ್ಕೆ ಯಜಮಾನನ ಸ್ಥಾನದಲ್ಲಿ ಇರುವವರು. ಹಿಂದೆ ಜೀವನ ಕಷ್ಟಕರವಾಗಿತ್ತು. ಇವತ್ತು ಆ ಕಷ್ಟ ಹೋಗಿದೆ. ಆದರೆ ನಮ್ಮ ಸಂಪ್ರದಾಯ ಮರೆಯಾಗುತ್ತಿದೆ. ಗೌಡ ಕುಟುಂಬ ಎಂದರೆ ಅದಕ್ಕೆ ಬಹಳ ಗೌರವ ಇದೆ. ಅಂಹತ ಕುಟುಂಬ ಕ್ರಯ ಕೊಟ್ಟರು ಸಿಗದು ಎಂದು ಹೇಳಿದರು.

ಶೇಷಪ್ಪ ಗೌಡ ದಂಪತಿ


ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸಲಹಾ ಸಮಿತಿ ಸದಸ್ಯ ಜಿನ್ನಪ್ಪ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್‌ನ ಸ್ಥಾಪಕರು ಮತ್ತು ದಶಮಾನೋತ್ಸವ ಸಮಿತಿ ಗೌರವಧ್ಯಕ್ಷ ಎ.ವಿ.ನಾರಾಯಣ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್, ಕಾರ್ಯದರ್ಶಿ ಪೂವಪ್ಪ ಗೌಡ, ಒಕ್ಕೂಟದ ಅಧ್ಯಕ್ಷೆ ಗೀತಾ, ಒಕ್ಕಲಿಗ ಯುವ ಗೌಡ ಸಂಘದ ಅದ್ಯಕ್ಷ ಅಮರನಾಥ ಗೌಡ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ, ಶಿವರಾಮ ಮತಾವು, ಶ್ರೀಧರ್ ಗೌಡ ಕಣಜಾಲು, ಕೃಷ್ಣಪ್ಪ ಗೌಡ ಮುದಲಾಜೆ, ಗ್ರಾಮದ ಮಹಿಳಾ ಅಧ್ಯಕ್ಷೆ ಚಂದ್ರಾವತಿ ಮುದಲಾಜೆ, ಪ್ರಕಾಶ್ ಕೇಲಾಡಿ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.ನ್ಯಾಯವಾದಿ ಯಶವಂತ ತಾಂಬೂಲ ನೀಡಿ ಅತಿಥಿಗಳನ್ನು ಗೌರವಿಸಿದರು.ಪ್ರೇಮ, ಪ್ರಜ್ಞಾ, ದೀಪಾ ಪ್ರಾರ್ಥಿಸಿದರು. ಉಮೇಶ್ ಗೌಡ ಚಿಂತನಾ ನೆರವೆರಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಮಾದವ ಗೌಡ ಕಾಂತಿಲ ಸ್ವಾಗತಿಸಿದರು. ನಾರಾಯಣ ಗೌಡ ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ವಲಯದ ಪ್ರೇರಕಿ ನಮಿತ, ವಿಟ್ಲ ವಲಯದ ಪ್ರೇರಕಿ ಶ್ರುತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಆರಂಭಿಕ ನಾಲ್ವರು ದಂಪತಿಗಳಿಗೆ ಸನ್ಮಾನ:
ದಾಂಪತ್ಯ ಜೀವನವನ್ನು 50 ವರ್ಷ ಮೇಲ್ಪಟ್ಟು ನಡೆಸಿಕೊಂಡು ಬರುತ್ತಿರುವ ಹಿರಿಯರಾದ ಮಾದರಿ ದಂಪತಿ ಪ್ರಗತಿಪರ ಕೃಷಿಕರಾಗಿರುವ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಮತ್ತು ಬಲ್ನಾಡು ಭಟ್ಟಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ ಸೇವೆ ಸಲ್ಲಿಸಿದ ಬಲ್ನಾಡು ಗ್ರಾಮದ ಕಾಂತಿಲ ಮುತ್ತಪ್ಪ ಗೌಡ, ದಮಯಂತಿ ದಂಪತಿ, ಪ್ರಗತಿಪರ ಕೃಷಿಕರಾಗಿರುವ ಮತ್ತು ಮದುವೆ ಶೋಭಾನೆಯಲ್ಲಿ ಪಾತ್ರ ವಹಿಸುತ್ತಿರುವ ಕೆಲ್ಲಾಡಿ ಮಾಂಕು, ಪದ್ಮಾವತಿ ದಂಪತಿ, ಜವುಳಿ ಉದ್ಯಮಿಯಾಗಿದ್ದ ಪ್ರಗತಿ ಪರ ಕೃಷಿಕ ಬ್ರಹ್ಮರಕೋಡಿ ಬಾಬು ಗೌಡ ಮತ್ತು ಚಂದ್ರಾವತಿ ದಂಪತಿ, ಪ್ರಗತಿಪರ ಕೃಷಿಕ ಮುದಲಾಜೆ ಶೇಷಪ್ಪ ಗೌಡ, ಯಮುನಾ ದಂಪತಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನ ನೆರವೇರಿಸಿದರು. ಸನ್ಮಾನಿತರಿಗೆ ಅರಸಿನ ಕುಂಕುಮ ಹಚ್ಚಿ, ಪರಸ್ಪರ ಹಾರ ಹಾಕುವ ಮೂಲಕ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here