ರೋಟರಿ ಪುತ್ತೂರು/ಎಸ್‌ಆರ್‌ಕೆ ಲ್ಯಾಡರ‍್ಸ್ ಸಹಯೋಗದೊಂದಿಗೆ ದೀಪಾವಳಿ ಸಂಭ್ರಮಾಚರಣೆ

0

ಪುತ್ತೂರು: ಯಾವುದೇ ಉದ್ಯಮ ಆರಂಭಿಸುವಾಗ ಅಲ್ಲಿ ಲಾಭ-ನಷ್ಟದ ಅಂದಾಜು ಇರುವಂತಹುದ್ದೇ. ಎಲ್ಲರೂ ಒಂದಾಗಿ ಕೆಲಸ ಮಾಡಿದ್ರೆ ಅಲ್ಲಿ ದುಃಖ ಎಂಬುದು ಕಳೆದು ಹೋಗುತ್ತದೆ ಮಾತ್ರವಲ್ಲ ಸಮಾಜದಲ್ಲಿ ಹೊಣೆಗಾರಿಕೆ ಜಾಸ್ತಿಯಾಗುತ್ತದೆ. ಯಾವುದೇ ಸಂದರ್ಭವಾಗಲಿ ಎಲ್ಲರೂ ತಂಡವಾಗಿ ಕೆಲಸ ಮಾಡಿದಾಗ ಅಲ್ಲಿ ಯಶಸ್ಸು ಖಂಡಿತಾ ದಕ್ಕುತ್ತದೆ ಎನ್ನುವುದಕ್ಕೆ ಕೇಶವ ಅಮೈ ನೇತೃತ್ವದ ಎಸ್.ಆರ್.ಕೆ ತಂಡವೇ ಸಾಕ್ಷಿಯಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.


ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಟರಿ ಕ್ಲಬ್ ಪುತ್ತೂರು ಮತ್ತು ಎಸ್‌ಆರ್‌ಕೆ ಲ್ಯಾಡರ‍್ಸ್ ಸಹಯೋಗದಲ್ಲಿ ನಡೆದ ದೀಪಾವಳಿ ಸಂಭ್ರಮಾಚರಣೆ ಹಾಗೂ ಎಸ್‌ಆರ್‌ಕೆ ರಜತ ಸಂಭ್ರಮದ ಸ್ಮರಣ ಸಂಚಿಕೆ ‘ರಜತ ಮೆಟ್ಟಿಲು’ ಇದರ ಬಿಡುಗಡೆ ಸಮಾರಂಭವು ನ.8 ರಂದು ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅವರು ‘ರಜತ ಮೆಟ್ಟಲು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಂಸ್ಕೃತಿ ವಿಷಯದಲ್ಲಿ ಒಂದೇ ರೀತಿಯ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಆದರೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಹಿಂದಿನ ಸಂಪ್ರದಾಯವನ್ನು ಕಳೆದುಕೊಳ್ಳುವತ್ತ ಸಾಗುತ್ತಿದೆ. ಆಮೇರಿಕ ದೇಶ ಇಂದು ದೊಡ್ಡಣ್ಣ ಕರೆಯಬೇಕಾದರೆ ಅದಕ್ಕೆ ಸ್ವಾತಂತ್ರ್ಯ ಸಿಕ್ಕಿ 350 ವರ್ಷಗಳಾಗಿದೆ ಆದರೆ ಸ್ವಾತಂತ್ರ್ಯ ಸಿಕ್ಕಿ ಕೇವಲ 76 ವರ್ಷದಲ್ಲಿಯೇ ಭಾರತ ಇಂದು ಆರನೇ ಸ್ಥಾನ ಗಳಿಸಿದೆಯಾದರೂ ಮುಂದಿನ ದಿನಗಳಲ್ಲಿ ಭಾರತ ದೇಶವು ನಂಬರ್ ವನ್ ಆಗುವುದರಲ್ಲಿ ಸಂದೇಹವಿಲ್ಲ ಎಂದರು.


ಯೋಜನೆಯಲ್ಲಿ ಸ್ವಚ್ಛತೆ, ಛಲ ಬಿಡದ ತ್ರಿವಿಕ್ರಮನಂತೆ ಕೆಲಸ-ವಚನ ಜಯರಾಮ್:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಯುವ ಕಾರ್ಯದರ್ಶಿ ವಚನಾ ಜಯರಾಮ್ ಮಾತನಾಡಿ,ನವೆಂಬರ್ ತಿಂಗಳಿನಲ್ಲಿ ಬಂದಂತಹ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೋಟರಿ ಪುತ್ತೂರು ಸಂಸ್ಥೆಯು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿರುವುದು ಖುಷಿ ತಂದಿದೆ. ಸಾವಿರಾರು ಸಮಾಜಮುಖಿ ಕಾರ್ಯಕ್ರಮ ಅಲ್ಲದೆ ಬಡ ಜನರಿಗೆ ಸೂರನ್ನು ನಿರ್ಮಿಸಿ ಆ ಪರಿಸರವನ್ನು ರೋಟರಿಪುರ ಎಂದು ನಾಮಾಂಕಿತವಾಗಿರುವುದು ಎಲ್ಲರಿಗೂ ದಾರಿದೀಪವಾಗಿದೆ ಮಾತ್ರವಲ್ಲ ದೀಪ ಹಚ್ಚಿ ಅಂಧಕಾರವನ್ನು ಹೋಗಲಾಡಿಸಿ ಎನ್ನುವುದಕ್ಕೆ ರೋಟರಿ ಸಂಸ್ಥೆಯು ಪ್ರೇರಣೆಯಾಗಿದೆ ಎಂದ ಅವರು ಮನಸ್ಸಿನ ಕಣ್ಣಲ್ಲಿ ದೂರದೃಷ್ಟಿತ್ವದ ಮೂಲಕ ಈ ಕಲಾಯಿಗುತ್ತು ಪರಿಸರವನ್ನು ಉತ್ತಮ ಪರಿಸರವನ್ನಾಗಿ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಯೋಜನೆಯಲ್ಲಿ ಸ್ವಚ್ಛತೆ, ಛಲ ಬಿಡದ ತ್ರಿವಿಕ್ರಮನಂತೆ ಕೆಲಸ ಕಾರ್ಯದಲ್ಲಿ ಪ್ರಾಮಾಣಿಕತೆ ಹಾಗೂ ಪರಿಪೂರ್ಣತೆಯನ್ನು ಅವರು ಹೊಂದಿದ್ದಾರೆ ಎಂದರು.


ರಜತ ಮೆಟ್ಟಿಲು ಸಂಭ್ರಮ ಬೆರೆಯಲು ಖುಷಿ ತಂದಿದೆ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಪುತ್ತೂರು ಕ್ಲಬ್ 60ನೇ ವರ್ಷದ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಕ್ಲಬ್ ಸಮಾಜಕ್ಕೆ ನೀಡಿರುವ ಸಮಾಜಮುಖಿ ಶಾಶ್ವತ ಕೊಡುಗೆಗಳನ್ನು ಪರಿಗಣಿಸಿ ಪ್ರಸ್ತುತ ವರ್ಷ ಸಂಘ-ಸಂಸ್ಥೆಗಳಿಗೆ ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ ಮಾತ್ರವಲ್ಲ ಎಸ್.ಆರ್.ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈರವರ ರಜತ ಸಂಭ್ರಮದ ರಜತ ಮೆಟ್ಟಿಲು ಸ್ಮರಣ ಸಂಚಿಕೆ ಬಿಡುಗಡೆ ನಿಮಿತ್ತ ಅವರ ಕುಟುಂಬದವರೊಡನೆ ಬೆರೆಯಲು ಅವಕಾಶ ಸಿಕ್ಕಿರುವುದು ಮತ್ತೂ ಖುಷಿ ತಂದಿದೆ ಎಂದರು.


ಕೇಶವರವರೋರ್ವ ಸಹಿಷ್ಣುಮಯಿ, ಉದ್ಯಮವನ್ನು ರಾಜ್ಯದಲ್ಲಿಯೇ ಪಸರಿಸಿದ್ದಾರೆ-ನಿತ್ಯಾನಂದ ಮುಂಡೋಡಿ:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಸುಳ್ಯ ಗುತ್ತಿಗಾರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ,
ಕೇಶವರವರೋರ್ವ ಸಹಿಷ್ಣುಮಯಿ, ಅವರು ತಮ್ಮ ಉದ್ಯಮವನ್ನು ರಾಜ್ಯದಲ್ಲಿಯೇ ಪಸರಿಸಿದ್ದಾರೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯನ್ನು ತಮ್ಮ ಕಲಾಯಿಗುತ್ತು ಮನೆಗೆ ತರುವ ವ್ಯವಸ್ಥೆಯನ್ನು ಕೂಡ ಅವರು ಮಾಡಿರುತ್ತಾರೆ. ತನ್ನ ಕಾರ್ಮಿಕರನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುವ ಕೇಶವರವರ ಗುಣ ಮೆಚ್ಚುವಂತಹುದು. ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿರುವ ರೋಟರಿ ಸಂಸ್ಥೆಗೆ ವೇದಿಕೆ ನಿರ್ಮಿಸಿ ಕೊಟ್ಟಿರುವುದು ಮತ್ತೂ ವಿಶೇಷವಾಗಿದೆ ಎಂದರು.


ಮಾನವೀಯ ಗುಣಗಳಿದ್ದಾಗ ಯಶಸ್ವಿ ಉದ್ಯಮಿಯಾಗಲು ಸಾಧ್ಯ-ಬಲರಾಂ ಆಚಾರ್ಯ:
ಉದ್ಯಮಿ, ಜಿ.ಎಲ್ ಆಚಾರ್ಯ ಸಂಸ್ಥೆಯ ಬಲರಾಂ ಆಚಾರ್ಯ ಮಾತನಾಡಿ,ಒಂದೆಡೆ ರಾಜ್ಯೋತ್ಸವ ಪ್ರಶಸ್ತಿ, ಮತ್ತೊಂದೆಡೆ ಕೇಶವ ಅಮೈರವರ ಅಂಗಳದಲ್ಲಿ ದೀಪಾವಳಿ ಸಂಭ್ರಮ ಹೀಗೆ ರೋಟರಿ ಪುತ್ತೂರು ಸಂಸ್ಥೆಗೆ ಡಬಲ್ ಧಮಾಕವಾಗಿದೆ. ತನ್ನ ಮಾನವೀಯ ಗುಣಗಳ ಮೂಲಕ ಕಳೆದ 25 ವರ್ಷಗಳಿಂದ ತನ್ನ ಉದ್ಯಮವನ್ನು ಮೇಲಕ್ಕೆತ್ತಿ ಸಾಧನೆ ತೋರ್ಪಡಿಸಿರುವುದು ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿದೆ. ಲಾಭದ ಬೆನ್ನು ಹತ್ತುವ ಮೂಲಕ ಓರ್ವ ಯಶಸ್ವಿ ಉದ್ಯಮಿ ಆಗಲು ಸಾಧ್ಯವಿಲ್ಲ, ಆದರೆ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಬೆಳವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂಬುದಕ್ಕೆ ಕೇಶವ ಅಮೈರವರು ತಾಜಾ ಉದಾಹರಣೆಯಾಗಿದೆ ಎಂದರು.


ರೋಟರಿ ಪುತ್ತೂರುನಿಂದ ಸನ್ಮಾನ:
ಎಸ್‌ಆರ್‌ಕೆ ಲ್ಯಾಡರ‍್ಸ್ ರಜತ ಸಂಭ್ರಮದ ರಜತ ಮೆಟ್ಟಿಲು ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ದೀಪಾವಳಿ ಹಬ್ಬದ ಸಂಭ್ರಮವನ್ನು ಆಚರಿಸಲು ಕಾರಣಕರ್ತರಾದ ರೋಟರಿ ಪುತ್ತೂರು ಸದಸ್ಯ ಕೇಶವ ಅಮೈ ಹಾಗೂ ಅವರ ಪತ್ಮಿ ಮಾಲತಿ, ಪುತ್ರ ಗಗನ್‌ರವರನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಹಾಗೂ ಎಸ್‌ಆರ್‌ಕೆ ಲ್ಯಾಡರ‍್ಸ್ ಮಾಲಕ ಕೇಶವ ಅಮೈರವರು ಸ್ವಾಗತಿಸಿ, ರೋಟರಿ ಪುತ್ತೂರು ಕ್ಲಬ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡ ವಂದಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರರವರ ಪತ್ನಿ ಶಿಖರ್ ಶಾಸ್ತ್ರಿ ಉಪಸ್ಥಿತರಿದ್ದರು. ಎಸ್‌ಆರ್‌ಕೆ ರಜತ ಸಂಭ್ರಮದ ಸಂಯೋಜನಾ ಸಮಿತಿಯ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಕೆ ರಜತ ಸಂಭ್ರಮದ ಸಂಯೋಜನಾ ಸಮಿತಿ ಸದಸ್ಯರು ಹಾಗೂ ಎಸ್‌ಆರ್‌ಕೆ ಲ್ಯಾಡರ್ಸ್ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಬಳಿಕ ಭೋಜನ ಕಾರ್ಯಕ್ರಮ ನೆರವೇರಲ್ಪಟ್ಟಿತು.

ಸನ್ಮಾನ..
24 ವರ್ಷದ ಹಿಂದೆ ಎಸ್.ಅರ್.ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈರವರು ತಮ್ಮ ಲ್ಯಾಡರ್ಸ್(ಏಣಿ) ಉದ್ಯಮವನ್ನು ಆರಂಭಿಸುವ ಸಂದರ್ಭದಲ್ಲಿ ಪುತ್ತೂರು-ಮಂಗಳೂರು ಅಂಬಾಸಿಡರ್ ಕಾರ್ ಬಾಡಿಗೆ ಮಾಡುತ್ತಿದ್ದ ಅಲ್ಲದೆ ರೂ.25 ಸಾವಿರ ಬ್ಯಾಂಕ್ ಸಾಲವನ್ನು ನೀಡಿರುವ ಚಂದ್ರಶೇಖರ ಬರಿಮಾರುರವರನ್ನು ಈ ಸಂದರ್ಭದಲ್ಲಿ ಕೇಶವ ಅಮೈರವರು ಶಾಲು ಹೊದಿಸಿ ಸನ್ಮಾನಿಸಿದರು. ಅಂದು ಉದ್ಯಮ ಆರಂಭಿಸಿದ ಸಂದರ್ಭದಲ್ಲಿ ತನಗೆ ಗ್ರಾಹಕರ ಪರಿಚಯ ಅಷ್ಟೇನು ಇಲ್ಲದ ಕಾರಣ ಇದೇ ಚಂದ್ರಶೇಖರ್‌ರವರು ತನ್ನನ್ನು ಅವರ ಕಾರಿನಲ್ಲಿ ಪುತ್ತೂರು-ಉಡುಪಿ-ಕೊಡಗು ಹೀಗೆ ವಿವಿಧೆಡೆ ತನ್ನ ಉದ್ಯಮವನ್ನು ವಿಸ್ತರಿಸಲು ಕಾರಣಕರ್ತರಾಗಿದ್ದಾರೆ ಎಂದು ಕೇಶವ ಅಮೈರವರು ಹೇಳಿದರು.

ಉದ್ಯೋಗಕ್ಕೆ ಪ್ರತಿಫಲ ಕೊಟ್ಟ ಟೀಮ್ ಎಸ್‌ಆರ್‌ಕೆ..
ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಓರ್ವ ರೊಟೇರಿಯನ್‌ರವರ ಮನೆಯಂಗಳದಲ್ಲಿ ಆಚರಿಸುವುದು ವಾಡಿಕೆ. ರೋಟರಿ ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ನನ್ನಲ್ಲಿ ನಿಮ್ಮ ಹುಟ್ಟುಹಬ್ಬವು ದೀಪಾವಳಿ ಹಬ್ಬದಂದು ಬರುತ್ತದೆ ಆದ್ದರಿಂದ ನಿಮ್ಮ ಆತಿಥ್ಯದಲ್ಲಿ ನಡೆಸಬಹುದಲ್ವ ಎಂದಾಗ ನಾನು ಖುಶಿಯಿಂದ ಒಪ್ಪಿದೆ. ಎಸ್‌ಆರ್‌ಕೆ ಇದರ ರಜತ ಸಂಭ್ರಮದ ಹನ್ನೆರಡು ಸರಣಿ ಕಾರ್ಯಕ್ರಮದಲ್ಲಿ ಇದು ಹನ್ನೊಂದನೇ ಕಾರ್ಯಕ್ರಮ. ನನ್ನ ಉದ್ಯಮದ ರಜತ ಸಂಭ್ರಮದ ಹಾದಿಯನ್ನು ನೆನಪಿನಲ್ಲಿಡಲು ಮಾತ್ರವಲ್ಲ ನನ್ನ ಇತಿಹಾಸ ಪುಟದಲ್ಲಿ ಬರೆದಿಡಲು ‘ರಜತ ಮೆಟ್ಟಿಲು’ ಎಂಬ ಸ್ಮರಣ ಸಂಚಿಕೆಯನ್ನು ನನ್ನ 21 ಮಂದಿ ನನ್ನ ಸಂಸಾರದ ಸಂಯೋಜನಾ ಸಮಿತಿ ಮೂಲಕ ಹೊರ ತರುತ್ತಿದ್ದೇವೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇದೇ ಸಂಯೋಜನಾ ಸಮಿತಿ ಮೂಲಕ ಟ್ರಸ್ಟ್ ನಿರ್ಮಿಸಲು ಉತ್ಸುಕನಾಗಿದ್ದೇನೆ. ನಾನು ಯಾವಾಗ ಈ ಉದ್ಯೋಗವನ್ನು ಆರಂಭಿಸಿದನೋ ಅಲ್ಲಿಂದ ಇಲ್ಲಿಯವರೆಗೆ ನನ್ನನ್ನು ಮೇಲಕ್ಕೆತ್ತಿ ಉದ್ಯೋಗಕ್ಕೆ ಪ್ರತಿಫಲ ಕೊಟ್ಟದ್ದು ಟೀಮ್ ಎಸ್‌ಆರ್‌ಕೆ ತಂಡ ಎಂದು ಹೇಳಲು ಖುಶಿಯಾಗುತ್ತದೆ.
-ಕೇಶವ ಅಮೈ, ಕಾರ್ಯಕ್ರಮದ ಸಂಯೋಜಕರು ಹಾಗೂ ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕರು

ಬೆಂಚ್‌ಮೆಟ್ ಶ್ರೀರಾಂ ಮನದಾಳದ ಮಾತು..
ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಗುರು ದಿನೇಶ್ ಭಟ್‌ರವರ ಶಿಷ್ಯಂದಿರ ಪೈಕಿ ಕೇಶವ ಅಮೈ ಹಾಗೂ ಶ್ರೀರಾಂ ಓರ್ವರು. ಇದೇ ಶ್ರೀರಾಂರವರು ಬೆಂಗಳೂರಿನಲ್ಲಿ ಸ್ವಂತ ಉದ್ಯೋಗವನ್ನು ಮುಂದುವರೆಸುತ್ತಿರುವ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ನನ್ನ ಬೆಂಚ್‌ಮೆಟ್(೬ನೇ-೧೦ನೇ ತರಗತಿ) ಇದೇ ಕೇಶವ ಅಮೈರವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಹದಿನೈದು ದಿನ ತನ್ನೊಂದಿಗೆ ದಿನದ ಇಪ್ಪತ್ತನಾಲ್ಕು ಗಂಟೆ ಜೊತೆಗಿದ್ದು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದರು. ನಾನು ಮತ್ತು ನನ್ನ ಸ್ನೇಹಿತ ಕೇಶವರವರು ಹಣಕ್ಕೆ ಬೆಲೆ ಕೊಡುವವರಲ್ಲ ಆದರೆ ಗೆಳೆತನಕ್ಕಾಗಿ ಬೆಲೆ ಕೊಡುವವರು. ಅಂತಹ ಸ್ನೇಹಿತ ಕೇಶವ ಅಮೈರವರ ಈ ಕಾರ್ಯಕ್ರಮವನ್ನು ಆಸ್ವಾದಿಸಲೆಂದು ಬೆಂಗಳೂರಿನಿಂದ ಬಂದಿದ್ದೇನೆ ಎಂದು ಕೇಶವ ಅಮೈರವರ ಗೆಳೆಯ ಶ್ರೀರಾಂರವರು ತನ್ನ ಮನದಾಳದ ಮಾತುಗಳನ್ನು ಆಡಿರುತ್ತಾರೆ.

ಕಲಾಯಿಗುತ್ತು ಮನೆಯ ಪ್ರವೇಶ ದ್ವಾರದ ಬಳಿ ಅತಿಥಿ ಗಣ್ಯರು ದೀಪವನ್ನು ಉರಿಸಿ ಬಳಿಕ ಕೊಯಿಲ ಕಪಿಲೇಶ್ವರಿ ಕಲಾ ಸಮಿತಿ ಇವರ ಚೆಂಡೆ ವಾದನದೊಂದಿಗೆ ಮೆರವಣಿಗೆ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮದ ಸಭಾಂಗಣಕ್ಕೆ ಕರೆ ತರಲಾಯಿತು.

LEAVE A REPLY

Please enter your comment!
Please enter your name here