ಡಿ.27-29 ಬೆಂಗಳೂರು ಅರಮನೆ ಮೈದಾನದಲ್ಲಿ 3ನೇ ವಿಶ್ವ ಹವ್ಯಕ ಸಮ್ಮೇಳನ

0

ಪುತ್ತೂರು:ಸುಮಾರು 81 ವರ್ಷಗಳಷ್ಟು ಇತಿಹಾಸವಿರುವ ಅಖಿಲ ಭಾರತ ಹವ್ಯಕ ಮಹಾ ಸಭಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನವು ಡಿ.27ರಿಂದ 29ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನಗಳೊಂದಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಸಂಭ್ರಮಿಸಲಿದೆ. ಹವ್ಯಕರ ಆದರ್ಶ, ಸಂಸ್ಕೃತಗಳ ವಿಶೇಷತೆಗಳನ್ನು ಜಗತ್ತಿನ ತಿಳಿಸುವ ಮೂರನೇ ಸಮ್ಮೇಳನವಾಗಿ ನಡೆಯಲಿದೆ ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.


ನ.10ರಂದು ಬನ್ನೂರಿನ ಹವ್ಯಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಹವ್ಯಕ ಮಹಾ ಸಭಾವು ಸ್ವಾತಂತ್ರ್ಯ ಪೂರ್ವದಲ್ಲೇ ಅಧಿಕೃತವಾಗಿ ಸ್ಥಾಪನೆಗೊಂಡಿದೆ. ವಿವಿಧ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹವ್ಯಕ ಸಭಾವು ಕಳೆದ ಆರು ವರ್ಷಗಳ ಹಿಂದೆ 2ನೇ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಿತ್ತು. ಇದೀಗ ಮೂರನೇ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಹವ್ಯಕ ಸಭಾ ಎದುರಿಸುತ್ತಿರುವ ಸವಾಲುಗಳು, ಕಷ್ಟ, ಮುಂದಿನ ದಾರಿಗಳು, ಇಂದಿನ ತನಕ ನಡೆದು ಬಂದ ದಾರಿಗಳು ಮೊದಲಾದ 18 ವಿಷಯಗಳ 8 ಗೋಷ್ಠಿಗಳ ಜೊತೆಗೆ ಹವ್ಯಕ ಸಮಾಜದ ವಿಶೇಷತೆಗಳನ್ನು ಸಮ್ಮೇಳನದಲ್ಲಿ ಜಗತ್ತಿಗೆ ಪರಿಸಲಾಗುವುದು. ಹವ್ಯಕ ಸಮುದಾಯಕ್ಕೆ ಸೀಮಿತವಾದ ಹವ್ಯಕ ಬಾಷೆಯಲ್ಲಿ ರಚನೆಯಾದ 6000 ಕೃತಿಗಳು ಪ್ರದರ್ಶನಗೊಳ್ಳಲಿದೆ.


ಹವ್ಯಕ ಸಮುದಾಯದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರಿದ್ದು ಎಲ್ಲಾ ಮೇಳಗಳಲ್ಲಿರುವ ಕಲಾವಿದರನ್ನು ಒಟ್ಟು ಸೇರಿಸಿ ಯಕ್ಷಗಾನ ಕಾರ್ಯಕ್ರಮ, ಭರತನಾಟ್ಯ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡ ನಾಟ್ಯ ವೈಭವ, ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಎಲ್ಲರನ್ನು ಒಟ್ಟು ಸೇರಿಸಿ ಸಂಗೀತ ಕಾರ್ಯಕ್ರಮ, ಭಾವಗೀತ ಕಲಾವಿದರನ್ನು ಒಳಗೊಂಡ ಭಾವಮೇಳ, ತಾಲ, ವಾದ್ಯಗಳ ಸಂಗೀತ ಪರಿಕರಗಳನ್ನು ಒಳಗೊಂಡಂತೆ ವಾದ್ಯ ವೈಭವ ಮೊದಲಾದ ಕಲೆಗೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳ ಸಮ್ಮಿಳನವಾಗಲಿದೆ.


ಮೂಲತಃ ಯಜ್ಞಯಾಗಾದಿಗಳಿಂದ ಬೆಳೆದು ಬಂದಿರುವ ಹವ್ಯಕರಿಗಾಗಿ ಸಮ್ಮೇಳನದಲ್ಲಿ ಕೆಲವೊಂದು ಯಜ್ಞಗಳು, ಪೂಜೆಗಳು, ಪಾಕ ಪ್ರಾವೀಣ್ಯತೆಯನ್ನು ಹೊಂದಿರುವ ಹವ್ಯಕರಿಂದ ವಿವಿಧ ಖಾದ್ಯಗಳ ರುಚಿಯನ್ನು ಸವಿಯುವ ಪಾಕೋತ್ಸವ, ಅಡಿಕೆ ಕೃಷಿಯಿಂದ ಬಂದಿರುವ ಹವ್ಯಕರು ಅಡಿಕೆಯ ಜೊತೆಗೆ ಕಬ್ಬು ಬೆಳೆಯನ್ನು ಬೆಳೆಸುತ್ತಿದ್ದು ಸಮ್ಮೇಳನದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಾತ್ಯಕ್ಷಿಕೆ, ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಗಾಯತ್ರಿ ಮಂತ್ರದ ಮಹಿಮೆ ತಿಳಿಸುವ ಥೀಮ್ ಪಾರ್ಕ್, ದೇಸೀ ಗೋತಳಿ ಪ್ರದರ್ಶನ ನಡೆಯಲಿದೆ.


ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸಮಾಜದ ವಿವಿಧ ಜಾತಿ, ಧರ್ಮಗಳ ಪ್ರಮುಖರನ್ನು ಒಟ್ಟು ಸೇರಿಸಿಕೊಂಡು ಹಬ್ಬದ ಮಾದರಿಯಲ್ಲಿ ಸಂಭ್ರಮಗಳೊಂದಿಗೆ ಸಮ್ಮೇಳನದಲ್ಲಿ ಹವ್ಯಕರ ಸಂಸ್ಕೃತಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹವ್ಯಕರ ಆಹಾರವು ವಿಶೇಷತೆಯಿಂದ ಕೂಡಿದ್ದು ವಿವಿಧ ಖಾದ್ಯಗಳ ಭಾವಚಿತ್ರಗಳ ಪ್ರದರ್ಶನ, ಖಾದ್ಯಗಳನ್ನು ಮಾಡುವ ವಿಧಾನಗಳ ಮಾಹಿತಿ ವಿನಿಮಯಗೊಳ್ಳಲಿದೆ. ಪಾರಂಪರಿಕ ವಸ್ತು ಪ್ರದರ್ಶನಗೊಳ್ಳಲಿದ್ದು 81 ವಿವಿಧ ಕರಕುಶಲ ವಸ್ತುಗಳ ಮಳಿಗೆಗಳು, 50ಕ್ಕೂ ಅಧಿಕ ವಿವಿಧ ವಾಣಿಜ್ಯ ಮಳಿಗೆಗಳು ಸಮಾಗಮವಾಗಲಿದೆ.


7 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 81 ಸಾಧಕರಿಗೆ ಸನ್ಮಾನ, 567 ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ಫೂರ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆರು ವರ್ಷಗಳ ಹಿಂದೆ ನಡೆದ ವಿಶ್ವ ಹವ್ಯಕ ಸಮ್ಮೇನದಲ್ಲಿ 65 ಸಾವಿರ ಮಂದಿ ಭಾಗವಹಿಸಿದ್ದು ಈ ಬಾರಿಯ ಸಮ್ಮೇಳನದಲ್ಲಿ ಸುಮಾರು 1.50ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆಗಮಿಸುವವರಿಗೆ ಊಟ, ಉಪಾಹಾರಗಳನ್ನು ಉಚಿತ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸುವ ನಿಟ್ಟಿನಲ್ಲಿ 810ಮಂದಿ ಸಂಚಾಲಕರು, 1000ಕ್ಕೂ ಅಧಿಕ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗಿದೆ ಎಂದು ಡಾ.ಗಿರಿಧರ ಕಜೆ ಮಾಹಿತಿ ನೀಡಿದರು.


ಹವ್ಯಕ ಮಹಾ ಸಭಾದ ಮಾಜಿ ಉಪಾಧ್ಯಕ್ಷ ಬೋನಂತಾಯ ಶಿವಶಂಕರ ಭಟ್, ನಿರ್ದೇಶಕರಾದ ರಮೇಶ್ ಭಟ್ ಶರವು, ರವಿನಾರಾಯಣ ಪಟ್ಟಾಜೆ, ಈಶ್ವರ ಭಟ್, ರಾಜಗೋಪಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here