ಸೌತಡ್ಕ: ದೇವಸ್ಥಾನದ ಸ್ಥಿರಾಸ್ತಿ ಖರೀದಿಯಲ್ಲಿ ಅಕ್ರಮ ಆರೋಪ- ಎ.ಸಿ. ಭೇಟಿ-ತನಿಖೆ ಭರವಸೆ; ಧರಣಿ ಹಿಂತೆಗೆತ

0

ನೆಲ್ಯಾಡಿ: ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್‌ಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ಎಸಗಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ಉಳಿಸಿ ರಕ್ಷಿಸಬೇಕೆಂದು ಒತ್ತಾಯಿಸಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ವತಿಯಿಂದ ಸೌತಡ್ಕದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಽ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ನ.12ರಂದು ಸಂಜೆ ಭೇಟಿ ನೀಡಿ ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದರು. ಪ್ರಕರಣದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ನೀಡಿದ ಭರವಸೆಯಂತೆ ಧರಣಿ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಗಿದೆ.


ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಭಕ್ತರ ಸಹಕಾರದಿಂದ ಖರೀದಿಸಲಾಗಿದ್ದ ವಾಸುದೇವ ಶಬರಾಯ, ರಾಘವ ಕೆ. ಹಾಗೂ ವಿಶ್ವನಾಥ ಕೆ.ಅವರ ಹೆಸರಿನಲ್ಲಿರುವ ಜಾಗವನ್ನು ದೇವಸ್ಥಾನದ ಹೆಸರಿಗೆ ಬರೆಸಲು ಸೂಕ್ತ ಆದೇಶ ಮಾಡುವಂತೆ ಹಾಗೂ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದನ್ನು ರದ್ದುಪಡಿಸಿ ಎಲ್ಲಾ ಆಸ್ತಿಯನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು, ಟ್ರಸ್ಟ್ ಆದ ಬಳಿಕದಿಂದ ಈ ತನಕದ ಎಲ್ಲಾ ಆದಾಯ, ಖರ್ಚು ವೆಚ್ಚಗಳ ತನಿಖೆ ನಡೆಸಿ ಎಲ್ಲಾ ಆದಾಯಗಳನ್ನು ದೇವಸ್ಥಾನದ ಖಜಾನೆಗೆ ತುಂಬಿಸಬೇಕು ಎಂದು ಒತ್ತಾಯಿಸಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ವತಿಯಿಂದ ಸೌತಡ್ಕದಲ್ಲಿ ನ.11ರಂದು ಬೆಳಿಗ್ಗಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು. ನ.12ರಂದು ಬೆಳಿಗ್ಗೆ 9 ಗಂಟೆಯಿಂದ ಧರಣಿ ಮುಂದುವರಿಸಲಾಗಿದ್ದು ಸಂಜೆ ವೇಳೆಗೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಗೋವಿಂದ ನಾಯ್ಕ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ಪ್ರಕರಣದ ಕುರಿತು 1 ವಾರದೊಳಗೆ ತನಿಖೆ ಆರಂಭಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಗೋವಿಂದ ನಾಯ್ಕ ಅವರು ಭರವಸೆ ನೀಡಿದರು. ಇದಕ್ಕೆ ಧರಣಿ ನಿರತರೂ ಸಹಮತ ಸೂಚಿಸಿ ಧರಣಿ ಸತ್ಯಾಗ್ರಹ ಸ್ಥಗಿತಗೊಳಿಸಿದರು.


ಈ ವೇಳೆ ಅಧಿಕಾರಿಗಳ ಜೊತೆ ಮಾತನಾಡಿದ ಸಾಹಿತಿ ಎಂ.ಜಿ.ಹೆಗಡೆ ಅವರು, ಅಕ್ರಮದ ಕುರಿತು ತನಿಖೆಗೆ ತಕ್ಷಣ ಆದೇಶ ಮಾಡಬೇಕು. ನ್ಯಾಯ ಸಿಗದೇ ಇದ್ದಲ್ಲಿ ದೇವಸ್ಥಾನದ ಆಸ್ತಿ ಉಳಿಸಿ ಎಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿಯ ಹೆಸರಿನಲ್ಲಿ ರಥ ನಿರ್ಮಾಣ ಮಾಡಿ ಕರಾವಳಿಯ ಮೂಲೆ ಮೂಲೆಗೆ ತೆಗೆದುಕೊಂಡು ಹೋಗುತ್ತೇವೆ. ಆ ಮೇಲೆ ಆಗುವ ಎಲ್ಲಾ ಅನಾಹುತಗಳಿಗೆ ಸರಕಾರವೇ ಹೊಣೆಯಾಗಲಿದೆ ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಬಿ.ಎಂ.ಭಟ್ ಅವರು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸಂಜೆ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.


ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಮಾಜಿ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೊಕ್ಕಡ, ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಪಟ್ರಮೆ, ಕೋಶಾಧಿಕಾರಿ ವಿಶ್ವನಾಥ್ ಕೊಲ್ಲಾಜೆ, ಉಪಾಧ್ಯಕ್ಷರಾದ ಕೃಷ್ಣಭಟ್ ಕುಡ್ತಲಾಜೆ, ತುಕ್ರಪ್ಪ ಶೆಟ್ಟಿ ನೂಜಿ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ್ ಶೆಟ್ಟಿ ನೆಲ್ಯಾಡಿ, ಸಹಕಾರ್ಯದರ್ಶಿಗಳಾದ ಸುನೀಶ್ ನಾಯ್ಕ್, ಗಣೇಶ್ ಕಾಶಿ, ಹರಿಶ್ಚಂದ್ರ ಜೋಡುಮಾರ್ಗ,ದಯನೀಶ್ ಕೊಕ್ಕಡ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಭಟ್ ಮುನ್ನಡ್ಕ, ಪದ್ಮನಾಭ ಆಚಾರ್ಯ, ಧನಂಜಯ ಗೌಡ ಪಟ್ರಮೆ, ಶ್ರೀವತ್ಸ ಕುಡ್ತಲಾಜೆ, ಉದ್ಯಮಿ ನಾಗೇಶ್ ಗೌಡ, ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಉಪ್ಪಾರ್ಣ, ರತ್ನಾಕರ ಪಾಂಗಣ್ಣಾಯ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಶಗ್ರಿತ್ತಾಯ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ ಗೌಡ ಅಡ್ಕಾಡಿ, ಜಿ.ಪಂ.ಮಾಜಿ ಸದಸ್ಯ ನಮಿತಾ ಪೂಜಾರಿ, ಸುಚಿತ್ರ ವಿಶ್ವನಾಥ, ಉಷಾ ಶರತ್, ತಾ.ಪಂ.ಮಾಜಿ ಸದಸ್ಯೆ ಕೇಶಾವತಿ, ತನುಜ ಶೇಖರ್, ಈಶ್ವರಿ ಶಂಕರ್, ಪ್ರಕಾಶ್ ಬಾಳ್ತಿಲ್ಲಾಯ, ಶ್ರೀಕಾಂತ್ ಆಚಾರ್ಯ, ಉಷಾ ಲಕ್ಷ್ಮಣ್, ಶಾಂತ ಬಂಗೇರ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here