ಯಕ್ಷಾಂಗಣ ನುಡಿಹಬ್ಬ ತಾಳಮದ್ದಳೆ ಸಪ್ತಾಹ – 2024

0

ತಾಳಮದ್ದಳೆಯಲ್ಲಿ ಕನ್ನಡ ಭಾಷೆಯ ಸಿರಿವಂತಿಕೆ ಇದೆ: ಕೃಷ್ಣ ಪಾಲೆಮಾರ್

ಮಂಗಳೂರು: ‘ನಾವಾಡುವ ಭಾಷೆಯ ಶುದ್ಧ ಸ್ವರೂಪವನ್ನು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ ಕಾಣಲು ಸಾಧ್ಯ. ಅದರಲ್ಲೂ ತಾಳಮದ್ದಳೆಯಲ್ಲಿ ಕನ್ನಡ ಭಾಷೆಯ ಸಿರಿವಂತಿಕೆ ಇದೆ. ತಾನು ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿಯ ಕನ್ನಡಿಗರು ವಾರಾಂತ್ಯದಲ್ಲಿ ತಮ್ಮ ವಸತಿ ಸಂಕೀರ್ಣ ಮಧ್ಯೆ ದೊಡ್ಡ ಪರದೆಯ ಮೇಲೆ ತಾಳಮದ್ದಳೆಯನ್ನು ಹಾಕಿ ಸಂಭ್ರಮಿಸುವುದನ್ನು ಕಂಡಿದ್ದೇನೆ’ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದ್ದಾರೆ.


ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿಆರಂಭಗೊಂಡಿರುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2024’ 12ನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ರಥ ಬೇಡ: ಡಾ. ಜೋಶಿ
‘ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ಸಂಕಲ್ಪ ಸಾಕಾರ ಆಗಬೇಕಿದ್ದರೆ ರಥವೂ ಬೇಡ, ರಾಜಕಾರಣಿಗಳು ಮತ್ತು ರಾಜಕೀಯ ಸೋಂಕಿತ ಸಾಂಸ್ಕೃತಿಕ ಕಾರ್ಯಕರ್ತರು ಕನ್ನಡಕ್ಕಾಗಿ ಕರೆ ಕೊಡುವುದೂ ಬೇಡ. ಬದಲು ಪ್ರಾಥಮಿಕ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡ ಕಲಿಸಿ, ನೆಲದ ಕಲೆ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಯನ್ನು ಪೋಷಿಸಿದರೆ ಸಾಕು. ಪರಿಣಾಮವಾಗಿ ಕನ್ನಡ ಸಮೃದ್ಧವಾಗಿ ಅರಳುವುದು ನಿಸ್ಸಂದೇಹ’ ಎಂದು ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ತಮ್ಮ ಆಶಯ ಭಾಷಣದಲ್ಲಿ ನುಡಿದರು.
‘ಭಾಷೆ ಮತ್ತು ಭಾಷಾ ಸಂಸ್ಕೃತಿಗಳು ಅದರ ಬಳಕೆ, ಆಚರಣೆಯಿಂದ ಮಾತ್ರವೇ ಬೆಳೆಯುತ್ತದೆ. ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ತೊಡಗುವುದರಿಂದ ಭಾಷಾ ಪೋಷಣೆಯಾಗುತ್ತದೆ’ ಎಂದವರು ಹೇಳಿದರು.

ಕಲ್ಕೂರರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ:
ಸಮಾರಂಭದಲ್ಲಿ ಕೃಷ್ಣ ಪಾಲೆಮಾರ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಮತ್ತು ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕ ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಿದರು. ವಿನೋದಾ ಕಲ್ಕೂರ ಜತೆಗಿದ್ದರು.
ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಿದ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ ‘ಯಕ್ಷಾಂಗಣ ಮಂಗಳೂರು ಶುದ್ಧ ಕನ್ನಡವನ್ನು ಉಳಿಸುವ ಕೆಲಸ 12 ವರ್ಷಗಳಿಂದ ಮಾಡುತ್ತಿದೆ. ಕನ್ನಡ ರಥವೆಂದು ಕನ್ನಡದ ಹೆಸರಲ್ಲಿ ಪ್ರಚಾರ ಪಡೆಯುವವರಿಗೆ ಕನ್ನಡ ಶಾಲೆಗಳನ್ನು ಕಾಪಾಡಲು ಆಗುತ್ತಿಲ್ಲ, ಅಧ್ಯಾಪಕರ ನೇಮಕ ನಡೆಯುತ್ತಿಲ್ಲ -ಇಂಥಹ ಪರಿಸ್ಥಿತಿಯಲ್ಲಿ ರಥಯಾತ್ರೆಯ ಔಚಿತ್ಯ ಪ್ರಶ್ನಾರ್ಹ’ ಎಂದ ಅವರು ‘ತಾಳಮದ್ದಳೆ,ಯಕ್ಷಗಾನದಂಥ ಕಲೆ ನೈಜ ಕನ್ನಡ ಕೊಡುಗೆ ನೀಡುತ್ತದೆ’ ಎಂದರು.


ಕದ್ರಿ ಶ್ರೀ ಮಂಜುನಾಥ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸೂರಜ್ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ನಿರ್ದೇಶಕ
ಡಾ.ಮಂಜುನಾಥ ಎಸ್. ರೇವಣ್ಕರ್, ಉದ್ಯಮಿಗಳಾದ ವಿ.ಕರುಣಾಕರ್, ಜಿತೇಂದ್ರ ಕೊಟ್ಟಾರಿ, ದೆಹಲಿ ಕನ್ನಡಿಗ ವಸಂತ ಶೆಟ್ಟಿ ಬೆಳ್ಳಾರೆ, ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ‌.ಎಸ್.ಭಂಡಾರಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.


ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಮಾ ಪ್ರಸಾದ್ ಸನ್ಮಾನಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ
ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ಸಂಚಾಲಕಿ ನಿವೇದಿತ ಎನ್. ಶೆಟ್ಟಿ ವಂದಿಸಿದರು. ಪದಾಧಿಕಾರಿಗಳಾದ ಎ.ಕೆ.ಜಯರಾಮ ಶೇಖ, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಲ್ಲಿಮಾರು, ರಾಜಾರಾಮಶೆಟ್ಟಿ ಮನವಳಿಕೆ ಗುತ್ತು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಾಸಪ್ಪ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು.

‘ರಾಜಾ ದಂಡಕ’ ತಾಳಮದ್ದಳೆ:
ಬಳಿಕ ‘ಸಂಘಟನಾ ಪರ್ವ’ದ ಮೊದಲ ಕಾರ್ಯಕ್ರಮವಾಗಿ ಹವ್ಯಾಸಿ ಬಳಗ ಕದ್ರಿ ಇವರ ಸಂಯೋಜನೆಯಲ್ಲಿ ‘ರಾಜಾ ದಂಡಕ’ ಯಕ್ಷಗಾನ ತಾಳಮದ್ದಳೆ ಜರಗಿತು.

LEAVE A REPLY

Please enter your comment!
Please enter your name here