ಪುತ್ತೂರು: ಅರಿಯಡ್ಕ ಹಾಗೂ ಕೆದಂಬಾಡಿ ಗ್ರಾ.ಪಂಗಳಲ್ಲಿ ತೆರವಾದ ತಲಾ ಒಂದು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ನ.13ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು ಸಲ್ಲಿಕೆಯಾದ ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಅರಿಯಡ್ಕ ಗ್ರಾ.ಪಂನಲ್ಲಿ 4 ಹಾಗೂ ಕೆದಂಬಾಡಿ ಗ್ರಾ.ಪಂನಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದೆ. ಅರಿಯಡ್ಕ ಗ್ರಾ.ಪಂನ ಮಾಡ್ನೂರು 2ನೇ ವಾರ್ಡ್ನಲ್ಲಿ ಪ.ಜಾತಿಗೆ ಮೀಸಲಿರಿಸಿದ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಹರೀಶ್ ಎ.ಕೆ ಮಾಡ್ನೂರು ಹಾಗೂ ಉಮೇಶ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ವಿಠಲ ಎಂ. ಹಾಗೂ ವಿನಯ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಕೆದಂಬಾಡಿ ಗ್ರಾ.ಪಂನ ವಾರ್ಡ್-4ರಲ್ಲಿ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಟಿ.ಮೋಹನ್, ಟಿ.ಎಚ್ ಗಂಗಾಧರ ನಾಯ್ಕ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಮೆಲ್ವಿನ್ ಮೋಂತೇರೋ, ಸೋಮಯ್ಯ ತಿಂಗಳಾಡಿ, ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳಾಗಿ ರಫೀಕ್ ನಂಜೆ, ಅಹಮ್ಮದ್ ತಾಝಿಮ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ನ.15 ಅಂತಿಮ ದಿನ:
ಚುನಾವಣಾ ಪ್ರಕ್ರೀಯೆಯಲ್ಲಿ ನ.15 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯ ತನಕ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅದೇ ದಿನ ಸಂಜೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆಯಾಗಲಿದೆ. ನ.23 ಮತದಾನ, ನ.26ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.