ಸತ್ಪ್ರಜೆಗಳ ಸೃಷ್ಟಿಯೇ ವಿದ್ಯಾಸಂಸ್ಥೆಗಳ ಧ್ಯೇಯ: ಸುಬ್ರಹ್ಮಣ್ಯ ಶ್ರೀ
ರಾಮಕುಂಜ: ಶ್ರೀ ರಾಮಕುಂಜೇಶ್ವರ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರ ರಾಮಕುಂಜ, ಶ್ರೀ ರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ ರಾಮಕುಂಜ, ಶ್ರೀ ರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್ ರಾಮಕುಂಜ ಮತ್ತು ಭೂಮಿ ಚಾರಿಟೇಬಲ್ ಟ್ರಸ್ಟ್ ಮುಂಬೈ, ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಅವಾರ್ಡ್ ಇವರ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಇದರ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ’ ಕಲಾ ಸೌರಭ ’ ನ.14ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.
ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಎತ್ತರಕ್ಕೆ ಬೆಳೆಯಬೇಕು. ಸತ್ಪ್ರಜೆಗಳ ಸೃಷ್ಟಿಯೇ ವಿದ್ಯಾಸಂಸ್ಥೆಗಳ, ಧಾರ್ಮಿಕ ಕೇಂದ್ರಗಳ ಧ್ಯೇಯವಾಗಿರುತ್ತದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳೂ ಆದರ್ಶರಾಗಬೇಕು. ಅವರ ಸಾಧನೆಯೇ ಪ್ರೇರಣೆಯಾಗಬೇಕು. ಶ್ರೀ ವಿಶ್ವೇಶತೀರ್ಥರ ಹುಟ್ಟೂರು ಆಗಿರುವ ರಾಮಕುಂಜದಲ್ಲಿ ವ್ಯಾಸಂಗ ಮಾಡಲು ಅವಕಾಶ ಪಡೆದುಕೊಂಡಿರುವ ವಿದ್ಯಾರ್ಥಿಗಳು ಧನ್ಯರು ಎಂದು ಸ್ವಾಮೀಜಿ ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಬೆಂಗಳೂರಿನ ದೃಷ್ಟಿ ಆಸ್ಪತ್ರೆಯಲ್ಲಿ ವೈದ್ಯರಾದ ಡಾ.ವಿಕ್ರಂ ಕುಕ್ಕಾಡಿ, ಬೆಳ್ತಂಗಡಿಯ ಉದ್ಯಮಿ ಚರಣ್ ಶೀಲಾ ಶೆಟ್ಟಿ, ಮಂಗಳೂರಿನ ಉದ್ಯಮಿ ಧನರಾಜ್ ಶೆಟ್ಟಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ದಾನಿಗಳ ನೆರವಿನಿಂದ ವಿವಿಧ ದತ್ತಿನಿಧಿಗಳನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿಯ ಹಣದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಪರಿಸರದ ಸರಕಾರಿ ಶಾಲೆಗಳಲ್ಲೂ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಸದಸ್ಯರಾದ ಸತೀಶ್ ಭಟ್, ಲಿಂಗಪ್ಪ ಗೌಡ ಕಡೆಂಬ್ಯಾಲು, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ, ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್.ಸ್ವಾಗತಿಸಿ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ವಂದಿಸಿದರು. ಸಹ ಶಿಕ್ಷಕ ಕಿಶೋರ್ ಕುಮಾರ್ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು. ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
4 ಲಕ್ಷ ರೂ.ವಿದ್ಯಾರ್ಥಿ ವೇತನ:
ಶ್ರೀ ರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ ರಾಮಕುಂಜ, ಶ್ರೀ ರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್ ರಾಮಕುಂಜ ಮತ್ತು ಭೂಮಿ ಚಾರಿಟೇಬಲ್ ಟ್ರಸ್ಟ್ ಮುಂಬೈ, ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಅವಾರ್ಡ್ ಇವರ ಸಹಕಾರದೊಂದಿಗೆ ಅಂದಾಜು 4 ಲಕ್ಷ ರೂ.ವಿದ್ಯಾರ್ಥಿ ವೇತನವನ್ನು ಸಮಾರಂಭದಲ್ಲಿ ಸಂಸ್ಥೆಯ ಪರವಾಗಿ ಸುಬ್ರಹ್ಮಣ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು. ಹಿರಿಯ ವಿದ್ಯಾರ್ಥಿಗಳಾದ ಡಾ.ವಿಕ್ರಂ ಕುಕ್ಕಾಡಿ, ಚರಣ್ಶೀಲಾ ಶೆಟ್ಟಿ, ಧನರಾಜ್ ಶೆಟ್ಟಿಯವರನ್ನು ಸ್ವಾಮೀಜಿ ಗೌರವಿಸಿದರು. ಕ್ರೀಡೆ, ಶಿಕ್ಷಣ, ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೂ ಸಮಾರಂಭದಲ್ಲಿ ಗೌರವಿಸಲಾಯಿತು.