*ನಮ್ಮೊಳಗೆ ನಿರಂತರವಾಗಿ ಅಂತರಯಾಗ ಮಾಡಿಕೊಂಡಿರಬೇಕು-ಒಡಿಯೂರುಶ್ರೀ
*ಹನುಮಯಾಗದ ಮೂಲಕ ಶಕ್ತಿ ಬಂದಿದೆ-ಕಿಶೋರ್ ಕುಮಾರ್ ಪುತ್ತೂರು
ಪುತ್ತೂರು: ರಾಮದೇವರು ತ್ಯಾಗದ ಸಾಕಾರ ಮೂರ್ತಿ, ರಾಮನ ತ್ಯಾಗ ಮತ್ತು ಸೇವೆ ರಾಷ್ಟ್ರೀಯವಾದ ಆದರ್ಶವಾಗಿದೆ. ಭಕ್ತಿಗೆ ಮತ್ತು ಮುಕ್ತಿಗೆ ಎರಡು ಅರ್ಥವಿದೆ, ಜೀವ ಭಾವ ಬೇರೆ ಬೇರೆಯಾಗಿ ದೇವ ಭಾವ ಒಂದೇಯಾಗಿ ಇದ್ದವರು ಹನುಮ ಹಾಗೂ ರಾಮ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಒಡಿಯೂರು ಶ್ರಿಗುರುದೇವ ಸೇವಾ ಬಳಗ ಪುತ್ತೂರು ಘಟಕದ 17ನೇ ವಾರ್ಷಿಕೋತ್ಸವದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ಹನುಮಯಾಗ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಹೊರಗಡೆ ಯಾಗ ಮಾಡಿದಂತೆ ನಮ್ಮೊಳಗೆ ನಿರಂತರವಾಗಿ ಅಂತರಯಾಗ ಮಾಡಿಕೊಂಡಿರಬೇಕು. ಶಿವನ ಸನ್ನಿಧಿಯಲ್ಲಿ ಹನುಮಯಾಗ ನಡೆಯುತ್ತಿರುವುದು ವಿಶೇಷವಾಗಿದೆ. ಕಷ್ಟ ಮತ್ತು ಸುಖ ಚಕ್ರದ ಹಾಗೆ ತಿರುಗುತ್ತಿರುತ್ತದೆ. ಸುಖ, ಕಷ್ಟ ಸ್ವಾಭಾವಿಕವಾದುದು. ರಾಮ, ಕೃಷ್ಣ ದೇವರಿಗೂ ಕಷ್ಟ ತಪ್ಪಿರಲಿಲ್ಲ. ಅವರೂ ಕಷ್ಟ ಎದುರಿಸಿದವರೇ ಎಂದು ಹೇಳಿದ ಅವರು ಧರ್ಮದ ಅನುಷ್ಠಾನ ಮಾಡುವ ಮೂಲಕ ಬದುಕು ಉಜ್ವಲವಾಗಲಿ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಸ್ವಾಮೀಜಿಯವರು ಹಿಂದೂ ಸಮಾಜಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಉದ್ಧಾರಕ್ಕೆ ಗ್ರಾಮವಿಕಾಸ ಕಾರ್ಯಕ್ರಮ ಮಾಡುವ ಮೂಲಕ ಸಂಸ್ಕಾರ ನೀಡುವ ಕೆಲಸ ಮಾಡಿದ್ದಾರೆ ಎಂದರು. ಇವತ್ತು ಹನುಮಯಾಗದ ಮೂಲಕ ಶಕ್ತಿ ಬಂದಿದೆ. ಹನುಮಚಾಲೀಸ್ ಮಂತ್ರ ಪಠಿಸಿದರೆ ದುರಂತ ಬರುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಆಗಿ ಹಿಂದೂ ಸಮಾಜಕ್ಕೆ ಶಕ್ತಿ ತುಂಬಿದೆ ಎಂದರು.
ಯುವ ಉದ್ಯಮಿ ಉಜ್ವಲ್ ಪ್ರಭು ಮಾತನಾಡಿ ಯಾವುದೇ ಕೆಲಸ ಮಾಡುವಾಗ ಒಳ್ಳೆಯ ದೃಷ್ಟಿಕೋನ ಇರಬೇಕು. ಭಕ್ತಿಯಿಂದ ಕೆಲಸ ಮಾಡಿದರೆ ಮುಕ್ತಿ ಸಿಗುತ್ತದೆ. ತಾವು ಹೋಗುವ ದಾರಿ ಸರಿ ಇರಬೇಕು ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ ಸಾರ್ವಜನಿಕವಾಗಿ ಹನುಮಯಾಗವನ್ನು ಪುತ್ತೂರಿಗೆ ಪರಿಚಯಿಸಿದವರು ಸ್ವಾಮೀಜಿಯವರು. ಅಲ್ಲದೆ ತುಳುವಿಗೆ ಮಾನ್ಯತೆ ಸಿಗಬೇಕೆಂದು ಹೋರಾಟ ಮಾಡಿದ್ದಾರೆ. ಧಾರ್ಮಿಕ, ಸಾಮಾಜಿಕ ಸೇವೆ ಮಾಡಿ ಧಾರ್ಮಿಕ ಪ್ರಜ್ಞೆ ಮೂಡಿಸಿದ್ದಾರೆ ಎಂದರು.
ಒಡಿಯೂರು ತುಳುನಾಡು ಜಾತ್ರೆ ಹೊರೆಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ಹನುಮ ಚಾಲೀಸ್‌ನಿಂದ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ. ಹನುಮಯಾಗದಿಂದ ಲೋಕ ಕಲ್ಯಾಣವಾಗಲಿ ಎಂದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಷ್ ಭಂಡಾರಿ, ಮಾಜಿ ಪುರಾಸಭಾಧ್ಯಕ್ಷ ರಾಜೇಶ್ ಬನ್ನೂರು, ಶ್ರೀಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾ, ಕಾರ್ಯದರ್ಶಿ ಹರಿಣಾಕ್ಷಿ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಚೆ ನಯನ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ಶಾರದಾ ಕೇಶವ ಹಾಗೂ ಯಮುನಾ ಪ್ರಾರ್ಥಿಸಿದರು. ಒಡಿಯೂರು ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ ಸ್ವಾಗತಿಸಿ, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ನಿರೂಪಿಸಿ, ಒಡಿಯೂರು ಸಂಘಟನೆಯ ಸದಸ್ಯೆ ಸವಿತಾ ರೈ ವಂದಿಸಿದರು. ಅಪರಾಹ್ನ ಬೊಳುವಾರು ಶ್ರೀಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನೆರವೇರಿತು.
ಸನ್ಮಾನ
ಸಂಗೀತ ಕ್ಷೇತ್ರದ ಸಾಧಕಿ ಸಮನ್ವಿ ರೈ, ಕ್ರೀಡಾಪಟು ಸಮೃದ್ಧಿ ಜೆ.ಶೆಟ್ಟಿ ಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸದಸ್ಯೆ ಸುನಂದ ರೈ ಮತ್ತು ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರುರವರನ್ನು ಸ್ವಾಮೀಜಿಯವರು ಹಾರ, ಶಲ್ಯ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹನುಮಯಾಗ
ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಶ್ರೀಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಹನುಮಯಾಗ ನಡೆಯಿತು. ವೇ.ಮೂ.ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಬಳಿಕ ಹನುಮಯಾಗದ ಸಂಕಲ್ಪ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ರಾಮನಾಮತಾರಕ ಮಂತ್ರ, ಶ್ರೀ ಹನುಮಾನ್ ಚಾಲೀಸಾ ಪಠಣ ನಡೆದು ಯಾಗದ ಪೂರ್ಣಾಹುತಿ ನಡೆಯಿತು. ಪ್ರಸಾದ ವಿತರಣೆ ನಡೆದು ಅನ್ನಪ್ರಸಾದ ಸಂತರ್ಪಣೆ ನಡೆಯಿತು.