ನ.19: ಅಖಿಲ ಭಾರತ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ಉಪ್ಪಿನಂಗಡಿ ಕಾಲೇಜಿನಲ್ಲಿ ಭರದ ಸಿದ್ಧತೆ

0

ಉಪ್ಪಿನಂಗಡಿ: ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ -2024 ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ.19ರಂದು ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ.


ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ದೇಶಾದ್ಯಂತದಿಂದ ಕ್ರೀಡಾಳುಗಳು, ಟೀಮ್ ಮೆನೇಜರ್ ಹಾಗೂ ಟೆಕ್ನಿಕಲ್ ತಂಡದವರು ಸೇರಿ ಸುಮಾರು 1500 ಮಂದಿ ಉಪ್ಪಿನಂಗಡಿಗೆ ಆಗಮಿಸಲಿದ್ದು, ನ.17ರಿಂದಲೇ ಇವರ ಬರುವಿಕೆ ಆರಂಭವಾಗುತ್ತಿದೆ. ಒಂದು ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳು ಹಾಗೂ ಇಬ್ಬರು ಟೀಂ ಮೆನೇಜರ್‌ಗಳು ಇರಲಿದ್ದು, ಇವರಿಗೆ ವಸತಿಗಾಗಿ ಈಗಾಗಲೇ ಹಳೆಗೇಟು ಬಳಿಯಿರುವ ಅರಫಾ ವಿದ್ಯಾಕೇಂದ್ರ, ಉಪ್ಪಿನಂಗಡಿಯ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಹಿರೇಬಂಡಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಅವರಿಗೆ ಬೇಕಾದ ಬೆಡ್‌ಗಳನ್ನು ಮಂಗಳೂರಿನಿಂದ ತರಿಸಲಾಗಿದೆ. ಇನ್ನು ಟೆಕ್ನಿಕಲ್ ತಂಡ, ಅಧಿಕಾರಿಗಳಿಗೆ ಉಪ್ಪಿನಂಗಡಿಯ ಎಲ್ಲಾ ಲಾಡ್ಜ್‌ಗಳಲ್ಲಿ, ಇಂದ್ರಪ್ರಸ್ಥ ವಿದ್ಯಾಲಯ, ಗಾಣಿಗ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.


ಓಟದ ಮಾರ್ಗಸೂಚಿ: ನ.19ರಂದು ಮಧ್ಯಾಹ್ನ 2 ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಿಂದ ಕ್ರೀಡಾ ಜ್ಯೋತಿಯ ಭವ್ಯ ಮೆರವಣಿಗೆ ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ಅಪರಾಹ್ನ 4 ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಓಟಕ್ಕೆ ಚಾಲನೆ ದೊರೆಯಲಿದೆ. ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿಯ 75ಕ್ಕೆ ಪ್ರವೇಶಿಸುವ ಕ್ರೀಡಾಳುಗಳು ಗಾಂಧಿಪಾರ್ಕ್ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತದಿಂದ ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಅಲ್ಲಿಂದ ಹಿರೇಬಂಡಾಡಿ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಬಳಿಯಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಿ ವಾಪಸ್ ಅದೇ ರಸ್ತೆಯಲ್ಲಿ ತಿರುಗಿ ಬಂದು, ರಾಷ್ಟೀಯ ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ಬಂದಾಗ 10 ಕಿ.ಮೀ. ದೂರದ ಈ ಓಟವು ಪೂರ್ಣಗೊಳ್ಳಲಿದೆ. ಓಟದ ಸಂದರ್ಭ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿಲುಗಡೆ ಮಾಡಲಾಗುತ್ತದೆ. ಅಲ್ಲದೇ, ಓಟದ ಮಾರ್ಗದುದ್ದಕ್ಕೂ ಮನೆ, ದಾರಿಯ ಬಳಿ ಸ್ವಯಂಸೇವಕರು ನಿಲ್ಲಲಿದ್ದು, ರಸ್ತೆಗೆ ವಾಹನಗಳು, ನಾಯಿಗಳು ಪ್ರವೇಶಿಸದಂತೆ ಎಚ್ಚರವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಳುಗಳ ಮುಂದೆ ಪೊಲೀಸ್ ವಾಹನ, ಆಂಬುಲೆನ್ಸ್ ಹಾಗೂ ಕೆಂಪು ಬಾವುಟ ಹೊಂದಿದ ವಾಹನವೊಂದು ಸ್ಪರ್ಧಾಳುಗಳಿಗೆ ಮಾರ್ಗಸೂಚಿಯಾಗಿ ಸಾಗಲಿದೆ. ಇದರೊಂದಿಗೆ ಆರು ಪೈಲಟ್‌ಗಳು ಓಟದ ಮಾರ್ಗದುದ್ದಕ್ಕೂ ಬೈಕ್‌ನಲ್ಲಿ ಸಾಗಲಿದ್ದಾರೆ. ಅಲ್ಲದೇ, ರನ್‌ವೇಯಲ್ಲಿ ವಾಟರ್ ಪಾಂಟ್‌ಗಳು, ಸ್ಪಾಂಜ್, ಐಸ್‌ಗಳ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಕಾಲೇಜಿನಲ್ಲಿ ನ.18ರ ರಾತ್ರಿಯಿಂದ ಕ್ರೀಡಾಳುಗಳಿಗೆ ಊಟದ ವ್ಯವಸ್ಥೆಯನ್ನು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಗಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.

ಕಾಲೇಜಿನಲ್ಲಿಯೂ ಕೂಡಾ ವೇದಿಕೆ, ಕ್ರೀಡಾಂಗಣ ತಯಾರು ಮುಂತಾದ ವ್ಯವಸ್ಥೆಗಳು ಭರದಿಂದ ನಡೆಯುತ್ತಿದ್ದು, ಉಪ್ಪಿನಂಗಡಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಾಸ್ ಕಂಟ್ರಿ ರೇಸ್ ನೋಡಲು ಜನತೆ ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

ಭರದ ತಯಾರಿ ನಡೆಯುತ್ತಿದೆ: ಚಂದ್ರಹಾಸ ಶೆಟ್ಟಿ
ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಸರಕಾರಿ ಕಾಲೇಜಿಗೆ ರಾಷ್ಟ್ರ ಮಟ್ಟದ ಕ್ರೀಡೆ ಆಯೋಜನೆ ಮಾಡಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಉಪ್ಪಿನಂಗಡಿಯು ದೇಶ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಊರಿನ ಪ್ರಮುಖರು ಪಕ್ಷಾತೀತವಾಗಿ ಇದರಲ್ಲಿ ಕೈಜೋಡಿಸಬೇಕು. ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿದೆ ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎನ್. ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here